The Federal Explainer | HSRP NUMBER PLATE: ಡೆಡ್‌ಲೈನ್ ಯಾವಾಗ? ದಂಡ ಎಷ್ಟು?
ವಾಹನಗಳಿಗೆ ಎಚ್ಎಸ್ಆರ್‌ಪಿ(HSRP NUMBER PLATE) ನಂಬರ್ ಪ್ಲೇಟ್ ಅಳವಡಿಸಲು ಇನ್ನು ಕೇವಲ ಎರಡು ವಾರ ಬಾಕಿ ಉಳಿದಿವೆ. ಎಚ್ಎಸ್ಆರ್‌ಪಿ ಅಳವಡಿಸಿಕೊಳ್ಳದೇ ಇದ್ದಲ್ಲಿ ಮೇ 31ರ ಬಳಿಕ ವಾಹನಗಳಿಗೆ ದಂಡ ಬೀಳಲಿದೆ. ಹಾಗಾದರೆ ದಂಡ ತಪ್ಪಿಸಿಕೊಳ್ಳಲು ಏನು ಮಾಡಬೇಕು? ..ಇಲ್ಲಿದೆ ವಿವರ!
ವಾಹನಗಳಿಗೆ ಎಚ್ಎಸ್ಆರ್‌ಪಿ (HSRP NUMBER PLATE) ನಂಬರ್ ಪ್ಲೇಟ್ ಅಳವಡಿಸಲು ಇನ್ನು ಕೇವಲ ಎರಡು ವಾರ ಬಾಕಿ ಉಳಿದಿವೆ. ಆದರೆ, ವಾಹನ ಮಾಲೀಕರ ನಿರಾಸಕ್ತಿ ಮುಂದುವರಿದಿದ್ದು, ಈವರೆಗೆ ಕೇವಲ ಶೇ.20ರಷ್ಟು ವಾಹನಗಳಿಗೆ ಮಾತ್ರ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ.
ಎಚ್ಎಸ್ಆರ್‌ಪಿ ಅಳವಡಿಸಿಕೊಳ್ಳದೇ ಇದ್ದಲ್ಲಿ ಮೇ 31ರ ಬಳಿಕ ವಾಹನಗಳಿಗೆ ದಂಡ ಬೀಳಲಿದೆ. ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಿರುವ ರಾಜ್ಯ ಸಾರಿಗೆ ಇಲಾಖೆ, ಈ ಬಾರಿ ಮತ್ತೊಮ್ಮೆ ಗಡುವು ವಿಸ್ತರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳದೇ ಹೋದಲ್ಲಿ ಜೂನ್ 1ರಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ.
ಆ ಹಿನ್ನೆಲೆಯಲ್ಲಿ ಎಚ್ಎಸ್ಆರ್‌ಪಿ ಕುರಿತ ಪೂರ್ಣ ವಿವರ ಇಲ್ಲಿದೆ.
ಏನಿದು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್?
ಎಚ್ಎಸ್ಆರ್‌ಪಿ ಎಂಬುದು ʼಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ʼ ಎಂಬುದರ ಸಂಕ್ಷಿಪ್ತ ರೂಪ. ಇದು ನಿಮ್ಮ ಕಾರಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಕೋಡ್ ಮತ್ತು ಕ್ರೋಮಿಯಂ ಹಾಲೋಗ್ರಾಮ್ ಸ್ಟಿಕರ್ ಕೂಡ ಇರುವ ಭದ್ರತೆಯನ್ನೊಳಗೊಂಡ ನಂಬರ್ ಪ್ಲೇಟ್. ಜೊತೆಗೆ ಒಂದೇ ಮಾದರಿ, ಅಳತೆಯ ನಂಬರುಗಳು ಆ ಪ್ಲೇಟ್ ಮೇಲೆ ಉಬ್ಬು ಅಚ್ಚಿನಲ್ಲಿರುತ್ತವೆ. ಜೊತೆಗೆ ಲಾಕ್ ಪಿನ್ ಮೂಲಕ ಈ ಪ್ಲೇಟನ್ನು ವಾಹನಕ್ಕೆ ಕೂರಿಸಲಾಗುತ್ತದೆ.
ಈ ನಂಬರ್ ಪ್ಲೇಟ್ ನಿಂದ ಏನು ಪ್ರಯೋಜನ?
ವಾಹನಗಳ ಸಂಚಾಲ ನಿಯಮ ಉಲ್ಲಂಘನೆ, ಅಪಘಾತ, ಕಳ್ಳತನ ಮತ್ತಿತರ ಸಂದರ್ಭಗಳಲ್ಲಿ ವಾಹನದ ಈ ಎಚ್ಎಸ್ಆರ್‌ಪಿ ಪ್ಲೇಟ್ ಮೂಲಕ ಪತ್ತೆ ಮಾಡುವುದು ಸುಲಭ ಎಂಬ ಕಾರಣಕ್ಕೆ ದೇಶಾದ್ಯಂತ ಈ ಹೊಸ ನಂಬರ್ ಪ್ಲೇಟ್ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ನಂಬರ್ ಪ್ಲೇಟ್‌ನಲ್ಲೇ ವಾಹನದ ಎಂಜಿನ್ ಸಂಖ್ಯೆ, ಚಾಸಿ ಸಂಖ್ಯೆ ಸೇರಿದಂತೆ ಪ್ರಮುಖ ಮಾಹಿತಿಗಳು ಅಡಕವಾಗಿರುವುದರಿಂದ ಅದರ ಸಂಪೂರ್ಣ ಮಾಹಿತಿ ಪೊಲೀಸರಿಗೆ ಸಿಗುತ್ತದೆ. ಈ ನಂಬರ್ ಪ್ಲೇಟ್ ನಲ್ಲಿ ಇರುವ ವಿಶಿಷ್ಟ ಕೋಡ್ ರೀಡ್ ಮಾಡುವ ವಾಹನ್ ತಂತ್ರಾಂಶ್ ಆಪ್ಗಳನ್ನು ಸಂಚಾರ ವಿಭಾಗದ ಪೊಲೀಸರ ಮೊಬೈಲ್‌ಗಳಲ್ಲಿ ಅಳವಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಜೊತೆಗೆ ನಂಬರ್ ಪ್ಲೇಟ್ ನಕಲಿ ಹಾವಳಿ ತಡೆಯಲೂ ಇದು ಪ್ರಯೋಜನಕಾರಿ.
ಯಾವ ವಾಹನಗಳಿಗೆ ಈ ಪ್ಲೇಟ್ ಕಡ್ಡಾಯ?
ಕೇಂದ್ರ ಸರ್ಕಾರ 2019ರಲ್ಲಿ ಈ ಎಚ್ಎಸ್ಆರ್‌ಪಿಯನ್ನು ಹೊಸ ವಾಹನಗಳಿಗೆ ಕಡ್ಡಾಯಗೊಳಿಸಿತ್ತು. ಆ ಬಳಿಕ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ವಾಹನ ಮಾರಾಟಗಾರರೇ ಎಚ್ಎಸ್ಆರ್‌ಪಿಯನ್ನು ಅಳವಡಿಸುತ್ತಾರೆ. ಅಂದರೆ, 2019ರ ಏಪ್ರಿಲ್ 1ರ ನಂತರ ನೋಂದಣಿಯಾಗಿರುವ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಪ್ರತ್ಯೇಕವಾಗಿ ಅಳಡಿಸುವ ಅಗತ್ಯವಿರುವುದಿಲ್ಲ. ಅದಕ್ಕೂ ಮುನ್ನ ನೋಂದಣಿಯಾಗಿರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕುವುದು ಕಡ್ಡಾಯ.
ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಸಲು ಡೆಡ್ಲೈನ್ ಯಾವಾಗ?
ಈ ಹಿಂದೆ 2023ರ ನವೆಂಬರ್ 17ರ ಒಳಗಾಗಿ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ, ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಸುವ ಅವಕಾಶವನ್ನು ಕೆಲವೇ ಕೆಲವು ಏಜೆನ್ಸಿಗಳಿಗೆ ಮಾತ್ರ ನೀಡಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹಲವರು ಕೋರ್ಟ್ ಮೆಟ್ಟಿಲೇರಿದ್ದರು. ಆ ಹಿನ್ನೆಲೆಯಲ್ಲಿ 2024ರ ಫೆಬ್ರವರಿ 17ರವರೆಗೆ ಗಡುವು ವಿಸ್ತರಿಸಲಾಗಿತ್ತು. ಆದರೆ, ಅಷ್ಟು ಕಾಲಾವಕಾಶ ನೀಡಿಯೂ ರಾಜ್ಯದ ಒಟ್ಟು 2 ಕೋಟಿ ವಾಹನಗಳ ಪೈಕಿ, ಕೇವಲ ಶೇ.5ರಷ್ಟು ವಾಹನಗಳಿಗೆ ಮಾತ್ರ ಎಚ್ಎಸ್ಆರ್‌ಪಿ ಅಳವಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆ, ಕಳೆದ ಫೆಬ್ರವರಿಯಲ್ಲಿ ಮತ್ತೆ ಮೂರು ತಿಂಗಳು ಕಾಲಾವಕಾಶ ನೀಡಿ ಮೇ 31ರೊಳಗೆ ಎಲ್ಲಾ ವಾಹನಗಳಿಗೆ ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಸಿಕೊಳ್ಳಲು ಅವಕಾಶ ನೀಡಿದೆ.
ಹಾಗಾಗಿ ನಿಮ್ಮ ವಾಹನಕ್ಕೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಲು ಇನ್ನು ಕೇವಲ ಎರಡು ವಾರವಷ್ಟೇ ಸಮಯವಿದೆ.
ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಕೆ ಎಷ್ಟಾಗಿದೆ ಈಗ?
ಎರಡು ಬಾರಿ ತಲಾ ಮೂರು ತಿಂಗಳ ಗಡುವು ನೀಡಿದ್ದರೂ, ಎಚ್ಎಸ್ಆರ್‌ಪಿ ಅಳವಡಿಸಿಕೊಳ್ಳಬೇಕಿದ್ದ ರಾಜ್ಯದ ಒಟ್ಟು ಎರಡು ಕೋಟಿ ವಾಹನಗಳ ಪೈಕಿ, ಈವರೆಗೆ ಕೇವಲ 36 ಲಕ್ಷ ವಾಹನಗಳಿಗೆ ಮಾತ್ರ ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಸಲಾಗಿದೆ. ಅಂದರೆ ಕೇವಲ ಶೇ.18ರಷ್ಟು ಮಾತ್ರ ಪ್ರಗತಿಯಾಗಿದೆ. ಇನ್ನೂ 1.64 ಲಕ್ಷ ವಾಹನಗಳಿಗೆ ಹೊಸ ಪ್ಲೇಟ್ ಅಳವಡಿಕೆ ಬಾಕಿ ಇದೆ. ಇನ್ನೂ ಎರಡು ವಾರದಲ್ಲಿ ಹೆಚ್ಚೆಂದರೆ 10-12 ಲಕ್ಷ ವಾಹನಗಳಿಗೆ ಎಚ್ಎಸ್ಆರ್‌ಪಿ ಅಳವಡಿಸಬಹುದು. ಆಗಲೂ ಸುಮಾರು 1.50 ಕೋಟಿ ವಾಹನಗಳು ಜೂನ್ 1ರಿಂದ ರಸ್ತೆಗಿಳಿದರೆ ದಂಡ ಕಟ್ಟಿಟ್ಟಬುತ್ತಿ.
ಗಡುವಿನೊಳಗೆ ಹಾಕಿಸದೇ ಇದ್ದರೆ ದಂಡ ಎಷ್ಟು?
ಸರ್ಕಾರದ ಸದ್ಯದ ಗಡುವಿನ ಪ್ರಕಾರ, ಜೂನ್ 1ರಿಂದ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ಕಡ್ಡಾಯವಾಗಿ ದಂಡ ಬೀಳಲಿದೆ. ಮೊದಲ ಬಾರಿಗೆ ₹ 500, ಎರಡನೇ ಬಾರಿಗೆ ₹1000 ದಂಡ ಬೀಳಲಿದೆ. ಆ ಬಳಿಕ ಪ್ರತಿ ಬಾರಿ ಸಿಕ್ಕಿಬಿದ್ದಾಗಲೂ ತಲಾ ₹1000 ದಂಡ ತೆರಬೇಕಾಗುತ್ತದೆ ಎಂದು ಇಲಾಖೆಯ ಮಾಹಿತಿ. ಆ ಹಿನ್ನೆಲೆಯಲ್ಲಿ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಆದಷ್ಟು ಬೇಗ ಎಚ್ಎಸ್ಆರ್‌ಪಿ ನೋಂದಣಿಯಾದರೂ ಮಾಡಿಸಿಕೊಳ್ಳಿ ಎಂದು ಇಲಾಖೆ ವಾಹನ ಮಾಲೀಕರಿಗೆ ಕರೆ ನೀಡಿದೆ.
ದಂಡ ತಪ್ಪಿಸಿಕೊಳ್ಳಲು ಏನು ಮಾಡಬಹುದು?
ಈಗ ವಾಹನಕ್ಕೆ ಎಚ್ಎಸ್ಆರ್‌ಪಿ ಅಳವಡಿಸಿಕೊಳ್ಳದೇ ಹೋದರೆ ದಂಡ ಪಕ್ಕಾ. ಆದರೆ, ದಂಡ ತಪ್ಪಿಸಿಕೊಳ್ಳಲು ಒಂದು ಅವಕಾಶವಿದೆ. ಕೂಡಲೇ ರಾಜ್ಯ ಸಾರಿಗೆ ಇಲಾಖೆಯ http//transport.karnataka.gov.in ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನುಫ್ಯಾಕ್ಚರರ್ಸ್ ನ www.siam.in ನಲ್ಲಿ ನಿಮ್ಮ ವಾಹನದ ವಿವರ ತುಂಬಿ ಎಚ್ಎಸ್ಆರ್‌ಪಿ ಪ್ಲೇಟ್ ಗಾಗಿ ನೋಂದಣಿ ಮಾಡಿಕೊಳ್ಳಬಹುದು. ಹಾಗೆ ನೋಂದಣಿ ಮಾಡಿದ ಬಳಿಕ ಒಂದು ತಿಂಗಳ ಕಾಲ ನಿಮ್ಮ ವಾಹನಕ್ಕೆ ಯಾವುದೇ ದಂಡ ವಿಧಿಸುವುದಿಲ್ಲ. ಆ ಒಂದು ತಿಂಗಳ ಕಾಲಾವಧಿಯಲ್ಲಿ ಹೊಸ ನಂಬರ್ ಪ್ಲೇಟ್ ಅಳಡಿಸಿಕೊಂಡರೆ ನಿಮ್ಮ ಜೇಬು ಸೇಫ್ ಆಗಲಿದೆ.
ಎಚ್ಎಸ್ಆರ್‌ಪಿ ಅಳವಡಿಸಲು ಎಷ್ಟು ದುಡ್ಡು?
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಕ್ಕೆ ₹450 -550, ಕಾರು ಅಥವಾ 4 ಚಕ್ರದ ವಾಹನಗಳಿಗೆ ರೂಪಾಯಿ ₹650-780. ಭಾರೀ ವಾಹನಗಳಾದ ಟ್ರಕ್, ಬಸ್ ಸೇರಿದಂತೆ 10 ಚಕ್ರದ ವಾಹನಗಳಿಗೆ ₹650- 800 ಶುಲ್ಕವನ್ನು ಸರ್ಕಾರ ನಿಗದಿಪಡಿಸಿದೆ.