ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳಕ್ಕೆ ವಿಜಯೇಂದ್ರ ಆಕ್ರೋಶ
x

ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳಕ್ಕೆ ವಿಜಯೇಂದ್ರ ಆಕ್ರೋಶ


ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಇಂದು (ಶನಿವಾರ) ಆದೇಶ ಹೊರಡಿಸಿರುವ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻರಾಜ್ಯ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಸಾಧ್ಯವಾಗದ ಸಂದಿಗ್ಧ ಪರಿಸ್ಥಿಗೆ ಬಂದಿದೆ. ಹಾಗಾಗಿ ಪೆಟ್ರೋಲ್ ಬೆಲೆ 3ರೂ. ಹಾಗೂ ಡೀಸೆಲ್‌ ಬೆಲೆ 3.50 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದು ರಾಜ್ಯದ ಜನರ ಮೇಲೆ ಬರೆ ಎಳೆದಂತಾಗುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಂದಿಲ್ಲ. ಗ್ಯಾರಂಟಿ ವಿಶ್ವಾಸದಲ್ಲಿದ್ದ ಅವರು 18-20 ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದರು. ಆದರೆ ಈಗ ಅದು ಹುಸಿಯಾಗಿದೆ ಹಾಗಾಗಿ ಜನರ ಮೇಲೆ ಅದರ ಸಿಟ್ಟು ತೋರಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಒಂದು ಕಡೆ ಸೋಲಿನ ಹತಾಶೆ ಮತ್ತೊಂದು ಕಡೆ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಆದರೂ ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಪರಿಸ್ಥಿತಿ ಸಧೃಡವಾಗಿದೆ ಎಂದು ಹೇಳುತ್ತಾರೆ. ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡಿರುವುದನ್ನು ನೋಡಿದರೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನುವುದು ಅರ್ಥವಾಗುತ್ತದೆ ಎಂದರು.

ಅಧಿಕಾರಿಗಳಿಗೆ ಸಂಬಳ ನೀಡಲಾಗದಷ್ಟು ಕೆಟ್ಟ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿದೆ ಹಾಗಾಗಿ ಜನರ ಮೇಲೆ ಬರೆ ಎಳೆಯುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ. ಪೆಟ್ರೋಲ್‌ ಡೀಸೆಲ್‌ ದರ ಹೆಚ್ಚಳ ಮಾಡಿ ಹೊರಡಿಸಿರುವ ಆದೇಶ ಹಿಂಪಡಿಯದೇ ಇದ್ದರೆ ರಾಜ್ಯಾದ್ಯಂತ ಸೋಮವಾರ ಪ್ರಿಭಟನೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಬಿ ವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿಯೂ ವಿಜಯೇಂದ್ರ ಪೋಸ್ಟ್‌ ಮಾಡಿದ್ದು, ʻʻಕಾಂಗ್ರೆಸ್ಸಿಗರೇ, ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನು ಬೇಡಿರಲಿಲ್ಲ … ನೀವು ಯಾವ ಭಾಗ್ಯವನ್ನೂ ಕೊಡದಿದ್ದರೂ ಪರವಾಗಿಲ್ಲ, ಬೆಲೆ ಏರಿಕೆಯ ದೌರ್ಭಾಗ್ಯವನ್ನು ಮಾತ್ರ ನಮ್ಮ ಮೇಲೆ ಹೇರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆʼʼ ಎಂದಿದ್ದಾರೆ.

ʻʻಅಧಿಕಾರಕ್ಕೇರುವ ಒಂದೇ ಕಾರಣಕ್ಕಾಗಿ ಪಂಚ ಭಾಗ್ಯದ ಮೋಡಿ ಮಾಡಿ ನೀವು ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದ್ದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ. ದಿನ ಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣೀ ರೂಪದಲ್ಲಿ ಏರಿಸುತ್ತಲೇ ಇದ್ದೀರಿ, ಇದೀಗ ಪೆಟ್ರೋಲ್ 3 ರೂ ಹಾಗೂ ಡೀಸೆಲ್ ಮೇಲೆ 3.50 ರೂ ದರಗಳನ್ನು ಏರಿಸಿ ಜನಸಾಮಾನ್ಯರ ಕೈ ಸುಟ್ಟಿದ್ದೀರಿ. ಈ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮ ಸಹಜವಾಗಿಯೇ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳ ಕಂಡು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಏರಲಿದೆʼʼ ಎಂದು ಎಚ್ಚರಿಸಿದ್ದಾರೆ.

ʻʻಬರಿದಾಗಿರುವ ನಿಮ್ಮ ಖಜಾನೆ ತುಂಬಿಸಲು ಜನಸಾಮಾನ್ಯರು ಹಾಗೂ ಕಡು ಬಡವರ ಜೇಬು ಖಾಲಿ ಮಾಡಲು ಹೊರಟಿರುವ ನಿಮ್ಮ ಜನ ವಿರೋಧಿ ನೀತಿ ನಿರ್ಧಾರಗಳನ್ನು ಬಿಜೆಪಿ ಪ್ರಬಲವಾಗಿ ಖಂಡಿಸಿ ಪ್ರತಿಭಟಿಸುತ್ತದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ಜನಾಕ್ರೋಶವನ್ನು ಪ್ರತಿನಿಧಿಸಿ ರಾಜ್ಯ ಬಿಜೆಪಿ ಬೀದಿಗಿಳಿದು ಹೋರಾಡಲಿದೆʼʼ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Read More
Next Story