ಗೋವಾ-ಕರ್ನಾಟಕ ಬಾಂಧವ್ಯಕ್ಕೆ ಕಂಟಕ: ನನೆಗುದಿಗೆ ಬಿದ್ದ ಕನ್ನಡ ಭವನದ ಕನಸು!
x

ಗೋವಾ-ಕರ್ನಾಟಕ ಬಾಂಧವ್ಯಕ್ಕೆ ಕಂಟಕ: ನನೆಗುದಿಗೆ ಬಿದ್ದ ಕನ್ನಡ ಭವನದ ಕನಸು!

ಗೋವಾದ ವೆರ್ನಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಸಾಕಾಷ್ಟು ಹೋರಾಟದ ನಂತರವು ಗೋವಾ ಸರ್ಕಾರವು ಸಹ ಕನ್ನ ಡ ಭವನ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿದೆ.


ನೆರೆಯ ರಾಜ್ಯ ಗೋವಾದೊಂದಿಗೆ ಕರ್ನಾಟಕದ ಸಂಬಂಧಕ್ಕೆ ಸದಾ ಒಂದಿಲ್ಲೊಂದು ವಿವಾದದ ಗ್ರಹಣ ಹಿಡಿಯುತ್ತಲೇ ಇರುತ್ತದೆ. ದಶಕಗಳಷ್ಟು ಹಳೆಯದಾದ ಮಹಾದಾಯಿ ನದಿ ನೀರು ಹಂಚಿಕೆ ವಿವಾದದ ಬೆಂಕಿ ಇನ್ನೂ ಆರಿಲ್ಲ. ಇದರ ನಡುವೆಯೇ, ಗೋವಾದಲ್ಲಿ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾಗಬೇಕಿದ್ದ ಕನ್ನಡ ಭವನ ನಿರ್ಮಾಣವೂ ಸ್ಥಳೀಯ ಸಂಘಟನೆಗಳ ಕ್ಯಾತೆಯಿಂದಾಗಿ ವಿವಾದದ ಸುಳಿಯಲ್ಲಿ ಸಿಲುಕಿದೆ.

ನನೆಗುದಿಗೆ ಬಿದ್ದ ಕನ್ನಡ ಭವನ: ಗೋವಾ ಕನ್ನಡಿಗರ ಕನಸು ಭಗ್ನ?

ಗೋವಾದಲ್ಲಿ ವಾಸಿಸುತ್ತಿರುವ ಸುಮಾರು 6 ಲಕ್ಷ ಕನ್ನಡಿಗರಿಗಾಗಿ ಸಾಂಸ್ಕೃತಿಕ ಕೇಂದ್ರವೊಂದನ್ನು ನಿರ್ಮಿಸಬೇಕೆಂಬುದು ಹಲವು ವರ್ಷಗಳ ಕನಸು. ಈ ಕನಸನ್ನು ನನಸಾಗಿಸಲು ಕರ್ನಾಟಕ ಸರ್ಕಾರ, ಗೋವಾದ ಮಡಂಗಾವ್ ಮತ್ತು ಪಣಜಿ ನಡುವಿನ ವೆರ್ನಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಿದೆ. ಸಾಕಷ್ಟು ಹೋರಾಟಗಳ ನಂತರ ಗೋವಾ ಸರ್ಕಾರ ತಾತ್ವಿಕವಾಗಿ ಸಮ್ಮತಿಸಿದರೂ, ಸ್ಥಳೀಯ ಸಂಘಟನೆಗಳ ವಿರೋಧದಿಂದಾಗಿ ಯೋಜನೆ ಮುಂದೆ ಸಾಗುತ್ತಿಲ್ಲ.

2022-23ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾಗಿತ್ತು. ಗೋವಾದಲ್ಲಿರುವ ಕನ್ನಡಿಗರ ಬಹುಕಾಲದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿವೇಶನವನ್ನೂ ಖರೀದಿಸಿದೆ. ಆದರೆ, ಗೋವಾ ಸರ್ಕಾರದಿಂದ ಭೂಮಿ ಲಭ್ಯವಾಗದ ಕಾರಣ, ಖಾಸಗಿ ಭೂಮಿಯನ್ನೇ ಖರೀದಿಸಲಾಗಿದೆ. ಆದರೂ, ನಿರ್ಮಾಣ ಕಾರ್ಯ ಮಾತ್ರ ಇನ್ನೂ ಪತ್ರ ವ್ಯವಹಾರದ ಹಂತದಲ್ಲೇ ಉಳಿದುಕೊಂಡಿದ್ದು, ಗೋವಾ ಕನ್ನಡಿಗರ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ.

ಹೋರಾಟದ ಫಲವಾಗಿ ಭೂಮಿ ಸಿಕ್ಕರೂ, ನಿರ್ಮಾಣಕ್ಕೆ ವಿಘ್ನ

ಕನ್ನಡ ಭವನ ನಿರ್ಮಾಣದ ಹಾದಿ ಸುಲಭವಾಗಿರಲಿಲ್ಲ. ಅಖಿಲ ಗೋವಾ ಕನ್ನಡ ಮಹಾ ಸಂಘದ ನಿರಂತರ ಮನವಿಗಳ ಮೇರೆಗೆ, 2021ರ ಡಿಸೆಂಬರ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ಗೋವಾಕ್ಕೆ ಭೇಟಿ ನೀಡಿ ಕನ್ನಡಪರ ಸಂಘಟನೆಗಳೊಂದಿಗೆ ಚರ್ಚಿಸಿದ್ದರು. ಬಳಿಕ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಯಿತು.

ಇದಕ್ಕೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ, ಗೋವಾದ ಜುವ್ಹಾರಿ ಸಂಸ್ಥೆಗೆ ಸಿಎಸ್‌ಆರ್ ನಿಧಿಯಡಿ ಕನಿಷ್ಠ 5 ಎಕರೆ ಜಾಗವನ್ನು ಉಚಿತವಾಗಿ ನೀಡುವಂತೆ 2022ರ ಜನವರಿಯಲ್ಲಿ ಸೂಚಿಸಿತ್ತು. ಇದೇ ವೇಳೆ, ಗಡಿ ಪ್ರಾಧಿಕಾರವು ದಕ್ಷಿಣ ಗೋವಾ ಜಿಲ್ಲಾಧಿಕಾರಿಗೆ ಸರ್ಕಾರಿ ನಿವೇಶನ ಒದಗಿಸುವಂತೆ ಕೋರಿತ್ತು. ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಜಾಗ ಗುರುತಿಸಲು ಸೂಚನೆ ನೀಡಿದರೂ, ಸ್ಥಳೀಯ ವಿರೋಧದ ಕಾರಣದಿಂದ ಸರ್ಕಾರಿ ಭೂಮಿ ಲಭ್ಯವಾಗಲಿಲ್ಲ. ಕೊನೆಗೆ, ಕರ್ನಾಟಕ ಸರ್ಕಾರವೇ ವೆರ್ನಾದಲ್ಲಿ 1075 ಅಡಿ ಖಾಸಗಿ ಭೂಮಿಯನ್ನು ಖರೀದಿಸಿತು. ಆದರೆ, ಭೂಮಿ ಲಭ್ಯವಾಗಿ ವರ್ಷಗಳೇ ಕಳೆದರೂ ನಿರ್ಮಾಣ ಕಾರ್ಯ ಆರಂಭವಾಗದಿರುವುದು ಯಕ್ಷಪ್ರಶ್ನೆಯಾಗಿದೆ.

ಅಧಿಕಾರಿಗಳ ಭರವಸೆ: ಮುಗಿಯದ ಪತ್ರ ವ್ಯವಹಾರ

ಈ ವಿಳಂಬದ ಕುರಿತು ‘ದ ಫೆಡರಲ್‌ ಕರ್ನಾಟಕ’ ಜೊತೆ ಮಾತನಾಡಿದ ಗೋವಾ ಗಡಿನಾಡು ಘಟಕದ ಅಧ್ಯಕ್ಷ ಸಿದ್ದಣ್ಣ ಮೇಟಿ, "ಸಾಕಷ್ಟು ವರ್ಷಗಳ ಹೋರಾಟ ನಡೆಸಿದ ಬಳಿಕ ಭೂಮಿ ಲಭ್ಯವಾಗಿದೆ. ಪತ್ರ ವ್ಯವಹಾರವೂ ಸಹ ನಡೆಯುತ್ತಿದೆ. ಶೀಘ್ರದಲ್ಲಿಯೇ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರದ ಸಚಿವರು ಸೇರಿದಂತೆ ಇತರೆ ಪ್ರತಿನಿಧಿಗಳು ಸಹ ಬಂದು ಕಟ್ಟಡ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಇನ್ನು, ಸ್ಥಳೀಯರು ಇತರೆ ಭಾಷಿಕರ ಜತೆ ಆಗಾಗ್ಗೆ ಕ್ಯಾತೆಗಳನ್ನು ತೆಗೆಯುತ್ತಲೇ ಇರುತ್ತಾರೆ. ಸಹಭಾಗಿತ್ವ ಇರಬೇಕಾದ ಅಗತ್ಯ ಇದೆ," ಎಂದು ತಿಳಿಸಿದರು.

‘ದ ಫೆಡರಲ್‌ ಕರ್ನಾಟಕ’ ಜೊತೆ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, "ಗೋವಾ ಸರ್ಕಾರದಿಂದ ಭೂಮಿ ಲಭ್ಯವಾಗಿಲ್ಲ. ಖಾಸಗಿ ಜಮೀನು ಪಡೆದುಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಮುಂದೆ ಯೋಜನೆಯ ರೂಪರೇಷೆಗಳಿವೆ. ಅದರ ಸ್ಪಷ್ಟತೆ ಬರಬೇಕಿದೆ. ಸರ್ಕಾರದ ಜತೆ ಈ ಬಗ್ಗೆ ಮತ್ತೊಮ್ಮೆ ಮಾತುಕತೆ ನಡೆಸಲಾಗುವುದು," ಎಂದು ಹೇಳಿದರು.

ಬಾಂಧವ್ಯಕ್ಕೆ ಹುಳಿ ಹಿಂಡಿದ ಮಹಾದಾಯಿ ವಿವಾದ

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ನಡುವಿನ ಮಹಾದಾಯಿ ನದಿ ನೀರು ಹಂಚಿಕೆ ವಿವಾದ, ಎರಡು ರಾಜ್ಯಗಳ ಸಂಬಂಧವನ್ನು ವಿಷಮಗೊಳಿಸಿದೆ. ಕರ್ನಾಟಕವು ತನ್ನ ಮಲಪ್ರಭಾ ನದಿಪಾತ್ರದ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು, ಮಹಾದಾಯಿ ನದಿಗೆ ಕಳಸಾ-ಬಂಡೂರಿ ನಾಲಾ ಮೂಲಕ ನೀರು ತಿರುಗಿಸುವ ಯೋಜನೆಗೆ ಮುಂದಾಗಿದೆ. ಆದರೆ, ಇದು ನದಿ ಹರಿವಿಗೆ ಮತ್ತು ಪರಿಸರಕ್ಕೆ ಹಾನಿ ಮಾಡುತ್ತದೆ ಎಂದು ಗೋವಾ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ವಿವಾದ ಬಗೆಹರಿಸಲು 2010ರಲ್ಲಿ ರಚನೆಯಾದ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿಯು, ಕರ್ನಾಟಕಕ್ಕೆ 13.42 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿ ತೀರ್ಪು ನೀಡಿದೆ. ಆದರೆ, ಈ ತೀರ್ಪನ್ನು ಒಪ್ಪದ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ವಿವಾದ ಇಂದಿಗೂ ಜೀವಂತವಾಗಿದೆ. ಈ ವಿವಾದದಿಂದಾಗಿ ಉತ್ತರ ಕರ್ನಾಟಕದ ರೈತರು ದಶಕಗಳಿಂದ ಹೋರಾಟ ನಡೆಸುತ್ತಿದ್ದು, ಇದು ರಾಜಕೀಯ ಮತ್ತು ಸಾಮಾಜಿಕವಾಗಿ ಸೂಕ್ಷ್ಮ ವಿಷಯವಾಗಿ ಉಳಿದಿದೆ.

ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತರ ದಬ್ಬಾಳಿಕೆ?

ಗೋವಾದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮೇಲಿನ ದೌರ್ಜನ್ಯದ ಆರೋಪಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಈ ಹಿಂದೆ, ಬೈನಾ ಬೀಚ್‌ನಲ್ಲಿ ಸುಮಾರು 40 ವರ್ಷಗಳಿಂದ ವಾಸವಿದ್ದ 55 ಕನ್ನಡಿಗರ ಕುಟುಂಬಗಳನ್ನು ಜಿಲ್ಲಾಡಳಿತ ಏಕಾಏಕಿ ಒಕ್ಕಲೆಬ್ಬಿಸಿ, ದೇವಸ್ಥಾನಗಳನ್ನು ಕೆಡವಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇದಲ್ಲದೆ, ಸಣ್ಣಪುಟ್ಟ ವ್ಯಾಪಾರ, ಉದ್ಯಮ ಮಾಡಿಕೊಂಡು ಜೀವನ ನಡೆಸುತ್ತಿರುವ ಕನ್ನಡಿಗರ ಮೇಲೆ ಸ್ಥಳೀಯರು ದಬ್ಬಾಳಿಕೆ ನಡೆಸುತ್ತಾರೆ ಎಂಬ ಆರೋಪಗಳಿವೆ. "ನಾವು ಸ್ಥಳೀಯರು ಎಂದು ಹೇಳಿ ದಬ್ಬಾಳಿಕೆ ಮಾಡುತ್ತಾರೆ. ಯಾವುದೇ ವಸ್ತುಗಳನ್ನು ಖರೀದಿಸಿದರೆ ಅತಿ ಕಡಿಮೆ ಬೆಲೆ ನೀಡುವುದು, ಬಾಡಿಗೆ ಬೈಕ್‌ಗಳನ್ನು ಓಡಿಸಲು ಅವಕಾಶ ನೀಡದಿರುವುದು ಸೇರಿದಂತೆ ವಿವಿಧ ರೀತಿಯಾಗಿ ಕಿರುಕುಳ ನೀಡುತ್ತಲೇ ಇರುತ್ತಾರೆ. ಸ್ಥಳೀಯರು ಮಾತ್ರವಲ್ಲದೆ, ಅಲ್ಲಿನ ಪೊಲೀಸರು ಸಹ ಸ್ಥಳೀಯರಿಗೇ ಬೆಂಬಲ ನೀಡುತ್ತಾರೆ," ಎಂದು ಗೋವಾದಲ್ಲಿ ಉದ್ಯಮಿಯಾಗಿರುವ ವ್ಯಕ್ತಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Read More
Next Story