Naxals Surrender | ಮನ ಪರಿವರ್ತನೆಯಾಗಿ ನಾವು ಶರಣಾಗಿದ್ದೇವೆ: ನಕ್ಸಲ್‌ ನಾಯಕಿ ಮುಂಡಗಾರು ಲತಾ
x
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಕ್ಸಲ್‌ ನಾಯಕಿ ಮುಂಡಗಾರು ಲತಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನಕ್ಸಲ್‌ ಸಮವಸ್ತ್ರ ನೀಡುವ ಮೂಲಕ ಶರಣಾದರು

Naxals Surrender | ಮನ ಪರಿವರ್ತನೆಯಾಗಿ ನಾವು ಶರಣಾಗಿದ್ದೇವೆ: ನಕ್ಸಲ್‌ ನಾಯಕಿ ಮುಂಡಗಾರು ಲತಾ

ಲತಾ ಮುಂಡಗಾರು, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಆರೋಲಿ, ಜಿಶಾ ವಯನಾಡು, ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕೆ.ವಸಂತ್ ಅವರನ್ನು ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಶರಣಾಗತಿ ಮಾಡಿಸಲಾಯಿತು.


ನಮಗೆ ಮನ ಪರಿವರ್ತನೆಯಾಗಿ ಶರಣಾಗಿದ್ದೇವೆ. ಕಾನೂನುಬದ್ಧವಾಗಿ ಶರಣಾಗಿದ್ದೇವೆ ಎಂದು ಬುಧವಾರ ಶರಣಾದ ನಕ್ಸಲ್‌ ನಾಯಕಿ ಮುಂಡಗಾರು ಲತಾ ಹೇಳಿದ್ದಾರೆ.

ಬುಧವಾರ ಸಂಜೆ ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸಮ್ಮುಖದಲ್ಲಿ ಶರಣಾದ ಅವರು ಆ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ನಮಗೆ ಮನ ಪರಿವರ್ತನೆಯಾಗಿ ಶರಣಾಗಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಶರಣಾಗತಿಗೆ ಆಹ್ವಾನ ನೀಡಿದ ಹಿನ್ನೆಲೆಯಿಂದ ಸ್ವ ಇಚ್ಛೆಯಿಂದ ಬಂದು ಕಾನೂನುಬದ್ಧವಾಗಿ ಶರಣಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡ ಒಪ್ಪಿಕೊಂಡಿದೆ. ಕಾನೂನಿಗೆ ತಲೆ ಬಾಗುತ್ತೇವೆ, ಜೊತೆಗೆ ಜನಪರ ಹೋರಾಟಗಳನ್ನು ಮುಂದುವರಿಸುತ್ತೇವೆ ಎಂದು ಮುಂಡಗಾರು ಲತಾ ಹೇಳಿದರು.

ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಪೊಲೀಸರ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದ್ದ ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರು ಶರಣಾಗಿದ್ದು, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಆರೋಲಿ, ಜಿಶಾ ವಯನಾಡು, ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕೆ.ವಸಂತ್ ಶರಣಾದ ಇತರೆ ನಕ್ಸಲೀಯರು.

ಶರಣಾದ ಆರು ಮಂದಿ ನಕ್ಸಲರಿಗೆ ಸಿಎಂ ಸಿದ್ದರಾಮಯ್ಯ ಅವರು ಭಾರತದ ಸಂವಿಧಾನದ ಪುಸ್ತಕ ನೀಡಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಕ್ಸಲ್‌ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕರ ವೇದಿಕೆಯ ಪ್ರಯತ್ನದ ಫಲವಾಗಿ ಆರು ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾಗಿದ್ದಾರೆ. ಕೆಲ ದಿನಗಳ ಹಿಂದೆ ನನ್ನನ್ನು ಭೇಟಿ ಮಾಡಿದ ಶಾಂತಿಗಾಗಿ ನಾಗರಿಕರ ವೇದಿಕೆ ಹಾಗೂ ನಕ್ಸಲ್‌ ಶರಣಾಗತಿ ಸಮಿತಿಯವರಿಗೆ ಶರಣಾಗತಿ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಿದ್ದೆ. ಈಗ ʼಕಾಡಿನಿಂದ ಜೈಲಿಗೆ- ಜೈಲಿನಿಂದ ನಾಡಿಗೆʼ ಅನ್ವಯ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲಾಗಿದೆ. ಅವರಿಗೆ ಸರ್ಕಾರ ಅಗತ್ಯ ಕಾನೂನು ನೆರವು ನೀಡಲಿದೆ ಎಂದು ತಿಳಿಸಿದರು.

ನಕ್ಸಲ್‌ ಮುಕ್ತ ಕರ್ನಾಟಕದ ಯೋಜನೆಯಡಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಅಭಿಲಾಷೆ ನಮ್ಮದಾಗಿತ್ತು. ಸದ್ಯ ಆರು ಮಂದಿ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದಾರೆ. ಅವರನ್ನು ಕರೆತಂದಿರುವ ನಕ್ಸಲ್‌ ಶತಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ಸಮಿತಿ, ಪೊಲೀಸ್‌ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.


ನಕ್ಸಲ್ ಮುಕ್ತ ರಾಜ್ಯ ನಿರ್ಮಾಣದ ಉದ್ದೇಶ

ರಾಜ್ಯವನ್ನು ನಕ್ಸಲ್‌ ಮುಕ್ತ ರಾಜ್ಯವನ್ನಾಗಿ ನಿರ್ಮಾಣ ಮಾಡುವ ಉದ್ದೇಶ ನಮ್ಮದಾಗಿದೆ. ಇಂದು ಬೆಳಿಗ್ಗೆ ನಕ್ಸಲರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಎದುರು ಶರಣಾಗಿದ್ದರು. ಈಗ ನಮ್ಮೆಲ್ಲರ ಮುಂದೆ ಬಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಎಎನ್ಎಫ್ ನಲ್ಲಿ ಕೆಲಸ ಮಾಡಿರುವ ಪೊಲೀಸರೂ ಶರಣಾಗತಿಗೆ ಪ್ರಯತ್ನ ಮಾಡಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯೇ ಗುಪ್ತಚರ ವಿಭಾಗದ ಎಡಿಜಿಪಿ ಅವರು ನಕ್ಸಲರ ಶರಣಾಗಿಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ನಾನು ಎಲ್ಲಿಯೂ ಅದನ್ನು ಹೇಳಿರಲಿಲ್ಲ. ಶರಣಾದ ಎಲ್ಲ ನಕ್ಸಲರಿಗೂ ಶುಭವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹಕ್ಕೊತ್ತಾಯ ಪರಿಶೀಲನೆ ಭರವಸೆ

ನಕ್ಸಲರ ಹಕ್ಕೊತ್ತಾಯವನ್ನು ಸಹಾನುಭೂತಿಯಿಂದ ಪರಿಶೀಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ನಕ್ಸಲರ ಮೇಲಿನ ಪ್ರಕರಣಗಳ ಕುರಿತಂತೆ ಕೇರಳ ಹಾಗೂ ತಮಿಳುನಾಡು ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಿ, ಸಹಾನುಭೂತಿ ತೋರುವಂತೆ ಮನವಿ ಮಾಡಲಾಗುವುದು. ಪ್ರಕರಣಗಳ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ ವಿಚಾರಣೆ ಮುಗಿಸಲಾಗುವುದು ಎಂದು ಸಿಎಂ ಹೇಳಿದರು.

Read More
Next Story