ಪ್ರಜ್ವಲ್ ಪಾಸ್‌ಪೋರ್ಟ್ ರದ್ದಿಗೆ ಕೇಂದ್ರ ಸ್ಪಂದಿಸಿಲ್ಲ: ಡಾ. ಜಿ.ಪರಮೇಶ್ವರ ಅಸಮಾಧಾನ
x
ಗೃಹ ಸಚಿವ ಡಾ. ಜಿ.ಪರಮೇಶ್ವರ

ಪ್ರಜ್ವಲ್ ಪಾಸ್‌ಪೋರ್ಟ್ ರದ್ದಿಗೆ ಕೇಂದ್ರ ಸ್ಪಂದಿಸಿಲ್ಲ: ಡಾ. ಜಿ.ಪರಮೇಶ್ವರ ಅಸಮಾಧಾನ

ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ, ಈವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಅಸಮಾಧಾನ ವ್ಯಕ್ತಪಡಿಸಿದರು.


Click the Play button to hear this message in audio format

ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಪ್ರಕರಣದ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್‌ ವಿದೇಶಕ್ಕೆ ಪರಾರಿಯಾಗಿದ್ದು, ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ, ಈವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಕೇಂದ್ರ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಬೇಕು. ಬರೀ ಟೀಕೆ ಮಾಡಿದರೆ ಅರ್ಥವಿಲ್ಲ. ಪ್ರಜ್ವಲ್ ರೇವಣ್ಣ ಅವರ ಮೇಲೆ ವಾರಂಟ್ ಜಾರಿ ಮಾಡಿರುವುದನ್ನು ತಿಳಿಸಲಾಗಿದೆ. ವಾರಂಟ್ ಜಾರಿಯಾದ ನಂತರ ಪಾಸ್‌ಪೋರ್ಟ್ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ತಿರುಗೇಟು

ಉಪಮುಖ್ಯಮಂತ್ರಿಯವರದ್ದು ಎನ್ನಲಾದ ಆಡಿಯೋ ಕುರಿತು ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಪ್ರತಿಯೊಂದಕ್ಕೂ ಮಾತನಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಎಸ್‌ಐಟಿ ಏನೆಲ್ಲ ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದೆ ಎಂದರು.

ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಈ ಕುರಿತು ನಾನು ಮತ್ತು ಮುಖ್ಯಮಂತ್ರಿಯವರು ಅಂಕಿ-ಅಂಶವನ್ನು ಪ್ರಕಟಿಸಿದ್ದೇವೆ. ಯಾರ ಕಾಲದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿದ್ದವು ಎಂಬುದಕ್ಕೆ ಅಂಕಿ-ಅಂಶಗಳಿವೆ. ಅದಕ್ಕೆ ಬಿಜೆಪಿಯವರು ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ.

Read More
Next Story