ಪ್ರಜ್ವಲ್‌ ರೇವಣ್ಣ ಬಂಧನ ನಿಶ್ಚಿತ: ಗೃಹ ಸಚಿವ ಡಾ. ಜಿ ಪರಮೇಶ್ವರ್
x

ಪ್ರಜ್ವಲ್‌ ರೇವಣ್ಣ ಬಂಧನ ನಿಶ್ಚಿತ: ಗೃಹ ಸಚಿವ ಡಾ. ಜಿ ಪರಮೇಶ್ವರ್


ಲೈಂಗಿಕ ಹಗರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಅವರ ಬಂಧನ ನಿಶ್ಚಿತ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋ ಹೇಳಿಕೆ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ʻʻಅವರೇ ಶರಣಾಗುತ್ತೇನೆ ಎಂದು ಹೇಳಿದ್ದಾರೆ ಹಾಗಾಗಿ ಅರೆಸ್ಟ್ ಅಂತೂ ಆಗುತ್ತಾರೆ. ಈಗಾಗಲೇ ಪ್ರಜ್ವಲ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗಿದೆ. ಬ್ಲೂ ಕಾರ್ನರ್ ನೋಟಿಸ್, ವಾರಂಟ್ ಜಾರಿ ಹಿನ್ನೆಲೆ ಅರೆಸ್ಟ್ ಮಾಡಬೇಕು. ಎಸ್​ಐಟಿಯವರು ಯಾವ ರೀತಿ ಕ್ರಮ ತೆಗೆದುಕೊಳ್ಳತ್ತಾರೆಂದು ನೋಡಬೇಕುʼʼ ಎಂದು ಹೇಳಿದ್ದಾರೆ.

ʻʻವಿದೇಶಕ್ಕೆ ಹೋಗುವ ವಿಚಾರದಲ್ಲಿ ತಪ್ಪಿಲ್ಲ ಎಂದು ಹೇಳಿರಬಹುದು. ಪ್ರಜ್ವಲ್​ ಹೇಳಿದಂತೆ ಅಲ್ಲಿಯವರೆಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಪ್ರಜ್ವಲ್ ರೇವಣ್ಣ ಏನು ಹೇಳಿಕೆ ಕೊಡುತ್ತಾರೋ ಕೊಡಲಿ. SITಯವರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳುತ್ತಾರೆ. ಒಂದು ದೇಶದಿಂದ ಒಬ್ಬರನ್ನು ಕರೆದುಕೊಂಡು ಬರುವುದು ಅಷ್ಟು ಸುಲಭವಲ್ಲʼʼ ಎಂದಿದ್ದಾರೆ.

ʻʻಮೇ 31ರಂದು ಬೆಳಗ್ಗೆ 10ಕ್ಕೆ ಎಸ್‌ಐಟಿ ತನಿಖೆಗೆ ಸಹಕರಿಸುತ್ತೇನೆಂದು ಹೇಳಿದ್ದಾರೆ, ಇದನ್ನು ಸ್ವಾಗತಿಸುವೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೇ ಮಾತನಾಡುವಂತಾಗಿದೆ. ಅವರನ್ನು ವಿದೇಶದಿಂದ ವಾಪಸ್ ಕರೆತರಲು ಪ್ರಯತ್ನಿಸಿದ್ದೆವೆʼʼ ಎಂದರು.

ʻʻಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು 2 ಬಾರಿ ಪತ್ರ ಬರೆದಿದ್ದರು, ಸಿಬಿಐಗೆ ಮನವಿ ಮಾಡಿದ್ದೆವು. ಇಂಟರ್‌ಪೋಲ್‌ಗೂ ಮನವಿ ಮಾಡಿದ್ದು, ಬ್ಲೂಕಾರ್ನರ್‌ ನೋಟಿಸ್ ಸಹ ನೀಡಿದ್ದರು. ಪಾಸ್‌ಪೋರ್ಟ್‌ ರದ್ದು ಮಾಡಿ ಎಂದು ಕೇಂದ್ರಕ್ಕೂ ಮನವಿ ಮಾಡಿದ್ದೆವು. ಪಾಸ್‌ಪೋರ್ಟ್‌ ರದ್ದು ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಕೇಂದ್ರ ಹೇಳಿತ್ತು. ಈ ಮಧ್ಯೆ ಪ್ರಜ್ವಲ್ ಬರುತ್ತೇವೆ ಎಂದು ಹೇಳಿದ್ದನ್ನು ಸ್ವಾಗತ ಮಾಡುತ್ತೇನೆ. ತಮ್ಮ ಬಳಿಯಿರುವ ಸಾಕ್ಷ್ಯ, ಮಾಹಿತಿ ಆಧರಿಸಿ SIT ತನಿಖೆ ಮುಂದುವರಿಸುತ್ತೆʼʼ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ನನ್ನದೇನು ತಪ್ಪಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ʻʻಎಲ್ಲರು ಹಾಗೇ ಹೇಳುತ್ತಾರೆ, ನಮ್ಮದು ತಪ್ಪಿಲ್ಲ ಎಂದು... ತಪ್ಪಿಲ್ಲ ಅಂದರೆ ತಪ್ಪು ಮಾಡಿದೋರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎಸ್​ಐಟಿ ಅವರು ಎಲ್ಲಾ ಮಾಹಿತಿ ಕಲೆಹಾಕಿ ಅದರ ಆಧಾರದ ಮೇಲೆ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ ಎಂದು ಹೇಳುತ್ತಾರೆ. ಒಂದು ವೇಳೆ 31ನೇ ತಾರೀಖನಂದೂ ಬರದಿದ್ದರೆ, ಮುಂದೆ ಏನಾಗುತ್ತೆ ನೋಡೋಣ. ಇನ್ನು ಮೂರು ನಾಲ್ಕು ದಿನ ಇರೋದು ಅಷ್ಟೇʼʼ ಎಂದು ಹೇಳಿದ್ದಾರೆ.

Read More
Next Story