The area of 368 trees in Cantonment Railway Colony is a heritage site
x

ರೈಲ್ವೆ ಕಾಲೋನಿಯಲ್ಲಿ ಬೆಳೆದು ನಿಂತಿರುವ ಬೃಹತ್‌ ಮರಗಳು

ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯ 368 ಮರಗಳ ಪ್ರದೇಶ ಪಾರಂಪರಿಕ ತಾಣ

'ಕಂಟೋನ್ಮಂಟ್ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ 368 ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರ ಕಾರ್ಯಕರ್ತರು ವಿಶ್ವ ಪರಿಸರ ದಿನದಂದು ಮರಗಳಿಗೆ 'ವೃಕ್ಷ ರಕ್ಷಾ ಬಂಧನ'ವಾಗಿ ಕೆಂಪು ಪಟ್ಟಿ ಕಟ್ಟಿದ್ದರು.


ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿರುವ 368 ಮರಗಳಿರುವ ಪ್ರದೇಶವನ್ನು ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.

ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ವಿಶೇಷ ಸಭೆಯಲ್ಲಿ 'ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯ ಆವರಣದಲ್ಲಿರುವ ಸುಮಾರು ಎಂಟು ಎಕರೆಯಲ್ಲಿ 368 ವಿವಿಧ ಜಾತಿಯ ಮರಗಳ ಕುರಿತು ಚರ್ಚಿಸಿ, ಜೀವ ವೈವಿಧ್ಯ ಕಾಯ್ದೆ-2002 ಮತ್ತು ಕರ್ನಾಟಕ ಜೀವ ವೈವಿಧ್ಯ ನಿಯಮಗಳು-2005ರ ನಿಯಮ 20ರಡಿ ಆ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ನಿರ್ಧರಿಸಲಾಯಿತು' ಎಂದು ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿರುವ ಮರಗಳು, ಗಿಡಗಳು, ಪೊದೆಗಳು, ಪಕ್ಷಿ ಮತ್ತು ಪ್ರಾಣಿಗಳ ಸಮೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 30ರೊಳಗೆ ಆಕ್ಷೇಪಣೆ, ಸಲಹೆಗಳಿದ್ದರೆ ನೀಡಬಹುದು ಎಂದು ತಿಳಿಸಿದ್ದಾರೆ.

'ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ 368 ಮರೆಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರ ಕಾರ್ಯಕರ್ತರು, ವಿಶ್ವ ಪರಿಸರ ದಿನದಂದು ಮರಗಳಿಗೆ 'ವೃಕ್ಷ ರಕ್ಷಾ ಬಂಧನ'ವಾಗಿ ಕೆಂಪು ಪಟ್ಟಿಯನ್ನು ಕಟ್ಟಿದ್ದರು.

'ಮರಗಳನ್ನು ಕಡಿಯಲು ಅವಕಾಶ ನೀಡದೆ, ಪಾರಂಪರಿಕ ಮರಗಳನ್ನು ರಕ್ಷಿಸಬೇಕು' ಎಂದು 'ಪರಿಸರಕ್ಕಾಗಿ ನಾವು' ಸಂಘಟನೆ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಲ್ಲದೆ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೂ ಪತ್ರ ಬರೆದಿದ್ದರು.

Read More
Next Story