WOMENS DAY SPECIAL | ಊರಿನ ಮಕ್ಕಳ ಓದಿಗೆ ತುಂಡು ಭೂಮಿಯನ್ನೇ ದಾನ ಮಾಡಿದ ʼಅಕ್ಷರದವ್ವʼ
x
ಶಾಲೆಯಲ್ಲಿ ಹುಚ್ಚಮ್ಮ ಮಕ್ಕಳಿಗೆ ಬಿಸಿ ಊಟ ಬಡಿಸುತ್ತಿರುವ ದೃಶ್ಯ

WOMEN'S DAY SPECIAL | ಊರಿನ ಮಕ್ಕಳ ಓದಿಗೆ ತುಂಡು ಭೂಮಿಯನ್ನೇ ದಾನ ಮಾಡಿದ ʼಅಕ್ಷರದವ್ವʼ

ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ ಕೊಪ್ಪಳದ ಹುಚ್ಚಮ್ಮ ಚೌದ್ರಿ ಅವರನ್ನು ʼದ ಫೆಡರಲ್‌ ಕರ್ನಾಟಕʼ ಪರಿಚಯಿಸಿದೆ. ಜೀವನಾಧಾರವಾಗಿದ್ದ ಎರಡು ಎಕರೆ ಜಮೀನನ್ನು ಶಾಲೆಗಾಗಿ ದಾನ ಮಾಡಿ, ಅದೇ ಶಾಲೆಯಲ್ಲಿ ಬಿಸಿಯೂಟದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಹುಚ್ಚಮ್ಮ ನಿಜವಾದ ಮಾದರಿ ಮಹಿಳೆ.


ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ನಿವಾಸಿಯಾಗಿರುವ 75 ವರ್ಷದ ಹುಚ್ಚಮ್ಮ ಚೌದ್ರಿ ಅವರು, ಊರಿನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತನ್ನ ಜೀವನಾಧಾರವಾಗಿದ್ದ 2 ಎಕರೆ ಭೂಮಿಯನ್ನು ಶಾಲೆಗಾಗಿ ದಾನ ಮಾಡಿ ಊರಿಗೇ ಅಕ್ಷರದವ್ವ ಆಗಿದ್ದಾರೆ.

ಕೋಟಿ ಕೋಟಿ ಹಣವಿದ್ದರೂ ಒಂದೇ ಒಂದು ರೂಪಾಯಿ ದಾನ ಮಾಡಲು ಹಿಂದೆ-ಮುಂದೆ ನೋಡುವ ಮತ್ತು ನೂರು ಬಾರಿ ಯೋಚಿಸುವ ಈ ಕಾಲದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಬಿಟ್ಟುಕೊಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ ಹುಚ್ಚಮ್ಮ.

ಹುಚ್ಚಮ್ಮ ಅವರ ಜೀವನದ ಹಾದಿ

ಹುಚ್ಚಮ್ಮ ಅವರ ತಂದೆ ಶಿವಪ್ಪ ರ್ಯಾವಣಕಿ, ಅವರು ಮೂಲತಃ ಕೊಪ್ಪಳ ತಾಲೂಕು ಹಂದ್ರಾಳ ಗ್ರಾಮದವರು. ಹುಚ್ಚಮ್ಮ ಅವರು ಮೂರು ವರ್ಷದ ಬಾಲಕಿಯಾಗಿರುವಾಗಲೇ ಕುಣಕೇರಿ ಗ್ರಾಮದ ಬಸಪ್ಪ ಚೌದ್ರಿ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡನ ಮುಖಪರಿಚಯವಾಗುವ ಮುನ್ನವೇ ಹುಚ್ಚಮ್ಮ ವಿಧವೆಯಾಗುತ್ತಾಳೆ. ಆನಂತರ ತಮ್ಮ ದೂರದ ಸಂಬಂಧಿಯ ಮಗು ದೀಪಾ ಎನ್ನುವ ಬಾಲಕಿಯನ್ನು ದತ್ತು ಪಡೆದರು. ತುಂಬಾ ಕಷ್ಟದ ದಿನಗಳಲ್ಲಿಯೇ ಮಗುವನ್ನು ಸಾಕಿಕೊಂಡು ಅವಳಿಗೆ ಮದುವೆ ಕೂಡ ಮಾಡಿಕೊಟ್ಟಿದ್ದಾಳೆ.

ಈ ಹಿಂದೆ ಕುಣಕೇರಿ ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಸರ್ಕಾರದಿಂದ ಜಾಗವೇ ಇರಲಿಲ್ಲ. ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಆಗ ಹುಚ್ಚಮ್ಮ ಅವರು, ತಮಗೆ ಸ್ವಂತ ಮಕ್ಕಳಿಲ್ಲ ಊರಿನ ಮಕ್ಕಳೇ ತನ್ನ ಮಕ್ಕಳು ಎಂದು ಭಾವಿಸಿ, ಅವರ ಗಂಡನಿಂದ ಬಂದಿದ್ದ 3 ಎಕರೆ ಜಮೀನಿನಲ್ಲಿ 1 ಎಕರೆ ಜಮೀನನ್ನು 1996ರಲ್ಲಿ ಶಾಲೆಗೆ ದಾನವಾಗಿ ನೀಡುತ್ತಾರೆ. ಆ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.

ಆ ನಂತರ 2004ರಲ್ಲಿ ಶಾಲಾ ಮಕ್ಕಳಿಗೆ ಮೈದಾನಕ್ಕೋಸ್ಕರ ಮತ್ತೊಂದು ಎಕರೆ ದಾನವಾಗಿ ನೀಡುತ್ತಾರೆ. ಸಧ್ಯ ಆ ಎರಡು ಎಕರೆ ಜಾಗದಲ್ಲಿ ಶಾಲಾ ಕಟ್ಟಡ ಹಾಗೂ ಮಕ್ಕಳಿಗೆ ಆಟದ ಮೈದಾನ ನಿರ್ಮಾಣವಾಗಿದೆ. ಉಳಿದಿರುವ 1 ಎಕರೆ ಜಮೀನಿನಲ್ಲಿ ಹುಚ್ಚಮ್ಮ ಕೃಷಿ ಮಾಡುತ್ತಿದ್ದಾಳೆ.

ಶಾಲೆಗೆ ಭೂಮಿ ದಾನ ಮಾಡಿದ ಹುಚ್ಚಮ್ಮರನ್ನು 1996ರಿಂದಲೇ ಆ ಶಾಲೆಯಲ್ಲಿ ಬಿಸಿ ಊಟದ ಮುಖ್ಯ ಅಡುಗೆದಾರರನ್ನಾಗಿ ನೇಮಿಸಿಕೊಳ್ಳಲಾಯಿತು. ಆಗ ಅವರು ಕೇವಲ 600ರೂ. ಗೆ ಕೆಲಸ ಮಾಡುತ್ತಿದ್ದರು ಇದೀಗ 3,500ರೂ.ಗೌರವಧನ ಬರುತ್ತಿದೆ. ಸರ್ಕಾರಿ ನಿಯಮದ ಪ್ರಕಾರ ೬೦ ವರ್ಷದವರಿಗೆ ನಿವೃತ್ತಿಗೊಳಿಸಬೇಕುತ್ತದೆ. ಆದರೆ ಅವರಿಗೆ 73ವರ್ಷ ಆಗುವವರೆಗೂ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಅವರನ್ನು ನಿವೃತ್ತಿಗೊಳಿಸಲಾಗಿದೆ. ಆದರೂ ಅವರು ಶಾಲೆಗೆ ಬಂದು ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಹುಚ್ಚಮ್ಮ ಅವರಿಗೆ ಉಪಜೀವನಕ್ಕೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಅವರ ಸಾಕು ಮಗಳನ್ನು ಮುಖ್ಯ ಅಡುಗೆದಾರರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ.

ಶಾಲೆಯಲ್ಲಿ ಬಿಸಿಯೂಟದ ಕೆಲಸ ಮಾಡುತ್ತಿರುವ ಹುಚ್ಚಮ್ಮ

ಹುಚ್ಚಮ್ಮ ಅವರು ಕೆಲವು ದಿನಗಳ ಹಿಂದಿನವರೆಗೂ ಬೆಳಿಗೆ 10ರಿಂದ ಮಧ್ಯಾಹ್ನ 02 ಗಂಟೆವರೆಗೂ ಶಾಲೆಯ ಅಡುಗೆ ಕೆಲಸ ಮುಗಿಸಿ ನಂತರ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈದೀಗ ವಯಸ್ಸಿನ ಕಾರಣ ಹಾಗೂ ಅನಾರೋಗ್ಯದ ಕಾರಣಕ್ಕಾಗಿ ಕೇವಲ ಶಾಲೆಯ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ.

ತನ್ನ ಊರನ್ನೇ ಮಗುವಿನಂತೆ ಪ್ರೀತಿಸುವ ಈಕೆಗೆ ಮಕ್ಕಳಿಲ್ಲ ಎಂಬ ಕೊರಗು ಇಲ್ಲ. ಈ ರೀತಿಯ ಮನೋಭಾವ ಇರುವ ಅಪರೂಪದಲ್ಲಿ ಅಪರೂಪವಾದ ವ್ಯಕ್ತಿತ್ವ ಈ ಅಜ್ಜಿಯದ್ದು. ತಾನು ಭೂಮಿ ದಾನ ಮಾಡಿ ಅದೇ ಶಾಲೆಯಲ್ಲಿ ಅಡುಗೆ ತಯಾರಕರಾಗಿ ಅಜ್ಜಿ ಕೆಲಸ ಮಾಡುತ್ತಿದ್ದಾರೆ. ತನಗೆ ಮಕ್ಕಳಿಲ್ಲ ಎಂಬ ಕೊರಗು ಇಲ್ಲ, ಶಾಲೆಯಲ್ಲಿರುವ 300ಕ್ಕೂ ಅಧಿಕ ಶಾಲಾ ಮಕ್ಕಳು ತನ್ನ ಮಕ್ಕಳು ಎಂದುಕೊಂಡು ನಿತ್ಯ ಕಾಳಜಿಯಿಂದ ಬಿಸಿಯೂಟ ತಯಾರಿ ಮಾಡಿ ಶಾಲಾ ಮಕ್ಕಳಿಗೆ ಪ್ರೀತಿಯಿಂದ ಉಣಬಡಿಸುತ್ತಿದ್ದಾರೆ. ಶಾಲೆಯ ಎಲ್ಲಾ ಮಕ್ಕಳು ತನ್ನ ಮಕ್ಕಳು ಎಂದುಕೊಂಡಿದ್ದಾರೆ.

ಕೋಟಿ ಕೋಟಿ ರೂ. ಬೆಲೆಬಾಳುವ ಭೂಮಿ ದಾನ

ಕುಣಿಕೇರಿ ಭಾಗದಲ್ಲಿ ಉಕ್ಕಿನ ಕಾರ್ಖಾನೆಗಳು ನಿರ್ಮಾಣವಾಗಿವೆ. ಕಾರ್ಖಾನೆಗಳಿಂದಾಗಿ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಕುಣಿಕೇರಿ ಶಾಲೆಗೆ ಹುಚ್ಚಮ್ಮ ನೀಡಿದ ಭೂಮಿಯ ಬೆಲೆ ಈಗಿನ ಮಾರುಕಟ್ಟೆಯ ದರದಲ್ಲಿ ಕನಿಷ್ಠವೆಂದರೂ 1.5 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಬೆಲೆ ಬಾಳುವ ಭೂಮಿ ದಾನವಾಗಿ ನೀಡಿದ್ದೇನೆ. ಇದರಿಂದ ತನಗೆ ಸಾಕಷ್ಟು ಹಣ ಬರುತ್ತಿತ್ತು ಎಂಬ ಭಾವನೆ ಅಜ್ಜಿಯ ಬಳಿ ಇಲ್ಲ. ಇರುವವರಿಗೂ ನನ್ನ ಹೊಟ್ಟೆ ತುಂಬಿದರೆ ಸಾಕು ಎಂಬ ಭಾವನೆ ಮಾತ್ರ ಸಾಕು ಎಂಬ ನಿಸ್ವಾರ್ಥ ಭಾವನೆಯಿಂದಾಗಿ ಹುಚ್ಚಮ್ಮ ವಿಶೇಷವಾಗಿ ಕಾಣುತ್ತಾರೆ.

ಹುಚ್ಚಮ್ಮಗೆ ರಾಜ್ಯೋತ್ಸವ ಪ್ರಶಸ್ತಿ

ಹುಚ್ಚಮ್ಮ ಚೌದ್ರಿಗೆ ಈ ಬಾರಿ (೨೦೨೩ ನವಂಬರ್‌ ೦೧) ರಾಜೋತ್ಸವ ಪ್ರಶಸ್ತಿ ದೊರತಿದೆ. ಅವರಿಗೆ ಸಮಾಜ ಸೇವೆ ವಿಭಾಗದಲ್ಲಿ ಪ್ರಶಸ್ತಿ ಒಲಿದು ಬಂದಿದೆ. 30 ವರ್ಷದ ಹಿಂದೆ ಸರ್ಕಾರಿ ಶಾಲೆಯ ನಿರ್ಮಾಣಕ್ಕೆ ಹುಚ್ಚಮ್ಮ ತನ್ನ 2 ಎಕರೆ ಭೂಮಿಯನ್ನು ದಾನ ಮಾಡಿದ್ದರು. ಆ ಮೂಲಕ ತನ್ನೂರಿನ ಮಕ್ಕಳು ಶಿಕ್ಷಣದಿಂದ‌ ವಂಚಿತರಾಗದಂತೆ ನೋಡಿಕೊಂಡಿದ್ದರು. ಹುಚ್ಚಮ್ಮಳ ಈ ಸೇವೆಯನ್ನು ಗಮನಿಸಿ ಸರ್ಕಾರ ಪ್ರಶಸ್ತಿಯನ್ನು ನೀಡಿದೆ.

ಹುಚ್ಚಮ್ಮ ಅವರು ಕೆಲಸ ಮಾಡುತ್ತಿರುವ ಶಾಲೆಯ ಸಹ ಶಿಕ್ಷಕರಾದ ಅರವಿಂದ್‌ ಪಾಟೀಲ್‌ ಅವರು ʼದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿದ್ದು, ʼʼ ಒಂದು ಕಾಲು ಕೋಟಿ ರೂ. ಬೆಲೆ ಬಾಳುವ ಜಮೀನನ್ನು ದಾನವಾಗಿ ನೀಡುವುದು ಸಾಮಾನ್ಯ ಕೆಲಸವಲ್ಲ, ಆದರೆ ಅವರು ಯಾವುದೇ ಫಲಾಪೇಕ್ಷ ಇಲ್ಲದೇ ಜಾಗವನ್ನು ಊರಿನ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿರುವುದು ಅವರ ದೊಡ್ಡ ಗುಣ ಎಂದು ಹೇಳಿದರು.

ಅವರ ಈ ಮಹತ್ಕಾರ್ಯವನ್ನು ಈವರೆಗೂ ಯಾರೂ ಗುರುತಿಸಿರಲಿಲ್ಲ ಇತ್ತೀಚೆಗೆ ಕೆಲವು ಎನ್‌ಜಿಒಗಳು, ಮಾಧ್ಯಮಗಳು ಗುರುತಿಸಿದ್ದರಿಂದ ಅವರ ಈ ಅತ್ಯುತ್ತಮ ಕೆಲಸ ಜಗತ್ತಿಗೆ ಪರಿಚಯವಾಗಿದೆ. ನಮ್ಮ ಭಾಗದವರೇ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಚಿವರು ಇದ್ದಿದ್ದರಿಂದ ಹುಚ್ಚಮ್ಮ ಅವರ ಸಮಾಜ ಸೇವೆಯನ್ನು ಗುರುತಿಸಿ 2023 ನವಂಬರ್‌ 1ರಂದು ರಾಜ್ಯೋತ್ಸವ ಪ್ರಶಸ್ತಿ ನೀಡಿದರು. ಹೀಗೆ ಅವರ ಸಾಮಾಜಿಕ ಕಾರ್ಯಕ್ಕೆ ಸಾಕಷ್ಟು ಪ್ರಶಸ್ತಿಗಳು ಅರಸಿಬಂದಿವೆ ಎಂದು ಅವರು ಅಭಿಮಾನ ವ್ಯಕ್ತಪಡಿಸಿದರು.

ಹುಚ್ಚಮ್ಮ ಅವರ ಈ ನಿಸ್ವಾರ್ಥ ಸೇವೆ ನಾಡಿನ ಹಲವೆಡೆ ಪಸರಿಸಿದ ಬಳಿಕ ಬಳ್ಳಾರಿ ಜಿಲ್ಲೆಯ ಮಹಿಳೆಯೊಬ್ಬರು ಒಂದು ಎಕರೆ ಜಮೀನನ್ನು ದಾನ ಮಾಡಿದ್ದಾರೆ. ಇತ್ತೀಚೆಗೆ ಹುಚ್ಚಮ್ಮ ಅವರನ್ನ ಭೇಟಿಯಾಗಲು ಬಂದು ಈ ವಿಚಾರವನ್ನು ತಿಳಿಸಿದರು. ಹುಚ್ಚಮ್ಮ ಅವರ ಈ ಕಾರ್ಯದಿಂದ ನಾಡಿನ ಜನತೆಗೆ ಮಾದರಿಯಾಗಿದ್ದಾರೆ.

ಅವರಿಗೆ ಈವರೆಗೂ ಯಾರಿಂದಲೂ ಯಾವುದೇ ಸಹಾಯದ ಅವಶ್ಯಕತೆ ಇರಲಿಲ್ಲ, ಅವರಿಗೂ ಕೂಡ ಈವೆರೆಗೂ ಯಾರಿಂದಲೂ ಹಣದ ಅಪೇಕ್ಷಗಳಿರಲಿಲ್ಲ. ಆದರೆ, ಇತ್ತಿಚೆಗೆ ಅವರ ವಯಸ್ಸಿನ ಕಾರಣಕ್ಕೆ ಆರೋಗ್ಯ ಸಮಸ್ಯೆ ಎದುರಾಗುತ್ತಿರುವುದರಿಂದ ಅವರಿಗೆ ಹಣದ ಅವಶ್ಯಕತೆ ಇದೆ. ಈಗಾಗಲೇ ನಾವುಗಳು, ಹೊರಗಿನ ಕೆಲವು ಜನರು ಸಹಾಯ ಮಾಡುತ್ತಿದ್ದಾರೆ. ಆದರೆ ಅವರಿಗೆ ಇನ್ನಷ್ಟು ಆರ್ಥಿಕ ಸಹಾಯ ಬೇಕಿದೆ. ದಯವಿಟ್ಟು ಹುಚ್ಚಮ್ಮ ಅವರಿಗೆ ಆರ್ಥಿಕ ಸಹಾಯ ನೀಡಬೇಕು ಎಂದು ನಿಮ್ಮ ಮಾಧ್ಯಮದ ಮೂಲಕ ನಾನು ಓದುಗರಲ್ಲಿ ಕೇಳಿಕೊಳ್ಳುತ್ತೇನೆʼʼ ಎಂದು ಮನವಿ ಮಾಡಿದರು.

Read More
Next Story