That boy is no more. He has no more experience; DKSH attacks MP Tejaswi
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ತೇಜಸ್ವಿ ಸೂರ್ಯ

ಆ ಹುಡುಗ ಇನ್ನು ಎಳಸು; ಸಂಸದ ತೇಜಸ್ವಿ ವಿರುದ್ಧ ಡಿಕೆಶಿ ಏಕವಚನದಲ್ಲಿ ಟೀಕೆ

ಏನೋ ಹೋಗಲಿ ಎಂದು ಗೌರವ ಕೊಟ್ಟು ನನ್ನ ಜೊತೆ ಮಾತನಾಡಲು ಅವಕಾಶ ನೀಡಿದರೆ ಏನೇನೋ ಮಾತನಾಡುತ್ತಿದ್ದಾನೆ. ಆದರೆ ನಾನು ತೇಜಸ್ವಿ ಸೂರ್ಯನ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂಬುದು ಡಿಕೆಶಿ ಉವಾಚ.


Click the Play button to hear this message in audio format

"ಆ ಹುಡುಗ ಇನ್ನು ಎಳಸು. ಆತನಿಗೆ ಇನ್ನು ಅನುಭವವಿಲ್ಲ. ಅವನೊಬ್ಬ ವೇಸ್ಟ್ ಮೆಟೀರಿಯಲ್. ಗೌರವ ಕೊಟ್ಟು ಕರೆದು ಮಾತಾಡಿದರೆ ಬಾಯಿಗೆ ಬಂದಂತೆ ಒದರುತ್ತಿದ್ದಾನೆ," ಎಂದು ಸಂಸದ ತೇಜಸ್ವಿ ಸೂರ್ಯನ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸುರಂಗ ರಸ್ತೆ ಬೇಡ ಎಂದು ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು? ಈ ದೇಶದಲ್ಲಿ, ಪ್ರಪಂಚದಲ್ಲಿಯೇ ಸುರಂಗ ರಸ್ತೆಗಳೇ ಬೇಡ ಎಂದು ಕೇಂದ್ರ ಸಚಿವನಾದ ಮೇಲೆ ಲೋಕಸಭೆಯಲ್ಲಿ ತೀರ್ಮಾನ ಮಾಡಲಿ," ಎಂದು ಏಕವಚನದಲ್ಲೇ ಎಂದು ಕಿಡಿ ಕಾರಿದರು.

"ಏನೋ ಹೋಗಲಿ ಎಂದು ಗೌರವ ಕೊಟ್ಟು ನನ್ನ ಜೊತೆ ಮಾತನಾಡಲು ಅವಕಾಶ ನೀಡಿದರೆ ಏನೇನೋ ಮಾತನಾಡುತ್ತಿದ್ದಾನೆ. ಆದರೆ ನಾನು ಆತನ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಸಂಸದ ತೇಜಸ್ವಿ ಸೂರ್ಯನಿಗೆ ಪ್ರಪಂಚ ಹೇಗಿದೆ ಎಂಬುದೇ ಗೊತ್ತಿಲ್ಲ," ಎಂದರು.

ಈತ ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ ?

"ನಾನು ಹುಡುಗನ ಬಳಿ ಕಾರಿಲ್ಲದಿದ್ದರೆ ಹೆಣ್ಣು ನೀಡುವುದಿಲ್ಲ ಎಂದಿದ್ದೆ. ಅದನ್ನೇ ಹಿಡಿದುಕೊಂಡು ಮಾತಾಡುತ್ತಿದ್ದಾನೆ. ಈತ ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ? ಆತ, ಆತನ ಕುಟುಂಬ ಸದಸ್ಯರು ಮೆಟ್ರೋ, ಸರ್ಕಾರಿ ಬಸ್ ಬಳಸಲಿ. ಅವರ ಪಕ್ಷದ ಶಾಸಕರು ಮೆಟ್ರೋ, ಆಟೋರಿಕ್ಷಾ, ಸಾರ್ವಜನಿಕ‌ ಸಾರಿಗೆಗಳಲ್ಲಿ ಓಡಾಡಲಿ. ಬೇಡ ಎಂದವರಾರು? ಇವರಿಗೆ ಕಾರುಗಳು ಏಕೆ ಬೇಕು? ಬೆಂಗಳೂರಿನಲ್ಲಿ 1.30 ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದನ್ನು ಆತ ಅರ್ಥ ಮಾಡಿಕೊಳ್ಳಬೇಕು, ಅವರಿಗೆಲ್ಲ ವಾಹನ ಬಳಸಬೇಡಿ ಎಂದು ಹೇಳಲು ಆಗುತ್ತದೆಯೇ," ಎಂದು ಟೀಕಿಸಿದರು.

ಮಾಧ್ಯಮದವರು ಕ್ಯಾಮೆರಾ ಹಿಡಿದುಕೊಂಡು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಿಕೊಂಡು ಕೆಲಸ ಮಾಡಲು ಆಗುತ್ತದೆಯೇ? ಶಾಲಾ ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸುತ್ತಾರೆ. ಅವರಿಗೆ ಸಾರ್ವಜನಿಕ ಸಾರಿಗೆಯಲ್ಲಿ‌ ಕಳುಹಿಸಿ ಎಂದು ಹೇಳಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಬೆಂಗಳೂರಿಗೆ ಬಿಜೆಪಿ ಕೊಡುಗೆ ಏನು ?

"ಈ ರಾಜ್ಯಕ್ಕೆ ಮೆಟ್ರೋ ತಂದವರು ನಾವು. ಅವರಿಗೆ ಅಧಿಕಾರ ಇದ್ದಾಗ ಏನು ಮಾಡಿದ್ದಾರೆ? ಕೇಂದ್ರದಿಂದ ಏನು ತೆಗೆದುಕೊಂಡು ಬಂದಿದ್ದಾರೆ? ಬೆಂಗಳೂರಲ್ಲಿ ಎಷ್ಟು ಪಿಲ್ಲರ್ ಹಾಕಿದ್ದಾರೆ? ಯೋಜನೆಗೆ ಹಣವೆಷ್ಟು ತಂದಿದ್ದಾರೆ? ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ಶೇ.12 ರಷ್ಟು ಹಣ ನೀಡುತ್ತಿದೆ. ಭೂ ಪರಿಹಾರ ಸೇರಿದಂತೆ ಎಲ್ಲವನ್ನೂ ನಾವೇ ನೀಡುತ್ತಿದ್ದೇವೆ" ಎಂದರು.

ಹೀ ಇಸ್ ವೇಸ್ಟ್ ಮೆಟಿರಿಯಲ್

"ಅವನ ಬಗ್ಗೆ ನನ್ನ ಬಳಿ ಯಾವ ಪ್ರಶ್ನೆಯನ್ನೂ ಕೇಳಬೇಡಿ. ಹೋಲಿಕೆ ಮಾಡಬೇಡಿ. ಹೀ ಇಸ್ ಎ ವೇಸ್ಟ್ ಮೆಟಿರಿಯಲ್, ಖಾಲಿ ಟ್ರಂಕ್ ಆತ. ಅವರ ಪಕ್ಷದ ಹಿರಿಯ ನಾಯಕರಾದ ಆರ್‌. ಅಶೋಕ್, ಅಶ್ವತ್ಥ ನಾರಾಯಣ್, ಬಸವರಾಜ ಬೊಮ್ಮಾಯಿ,‌ ಜಗದೀಶ್‌ ಶೆಟ್ಟರ್ ಅಂತಹವರು ಮಾತನಾಡಿದರೆ ಉತ್ತರ ನೀಡೋಣ. ಏಕೆಂದರೆ ‌ಅವರಿಗೆ ಇದೆಲ್ಲವೂ ಅರ್ಥವಾಗುತ್ತದೆ. ಶೆಟ್ಟರ್ ಅವರು ತಮ್ಮ ಊರಿನಲ್ಲಿ ಬಿಆರ್‌ಟಿಎಸ್ ಮಾಡಲು ಪ್ರಯತ್ನ ಮಾಡಿದರೂ ಆಗಲಿಲ್ಲ. ಬೆಂಗಳೂರಿನಲ್ಲಿ ಬಿಆರ್‌ಟಿಎಸ್ ಮಾಡಲು ಜಾಗವಿದೆಯೇ? ಭೂ ಪರಿಹಾರ ಎಷ್ಟಾಗುತ್ತದೆ ಎನ್ನುವ ಅರಿವು ತೇಜಸ್ವಿ ಸೂರ್ಯನಿಗೆ ತಲೆಯಲ್ಲಿಯೇ ಇಲ್ಲ" ಎಂದರು.

Read More
Next Story