
ಕೇಂದ್ರದ ತೆರಿಗೆ ಸುಧಾರಣೆಗೆ ಟೆಕ್ಸ್‌ಟೈಲ್ ಉದ್ಯಮದಿಂದ ವಿರೋಧ: ಹೋರಾಟದ ಎಚ್ಚರಿಕೆ
2,500 ರೂ.ಗಿಂತ ಹೆಚ್ಚಿನ ಬೆಲೆಯ ಬಟ್ಟೆ ಖರೀದಿ ಮಾಡಿದರೆ ಶೇ.18 ರಷ್ಟು ತೆರಿಗೆ ಪಾವತಿಸಬೇಕಾಗಿದೆ. ಇದು ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ಸ್ ಉದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಸುಧಾರಣೆ ಕೈಗೊಂಡಿದ್ದು, ನವರಾತ್ರಿಯಿಂದ ದಿನಬಳಕೆಯ ಹಲವು ವಸ್ತುಗಳು ಅಗ್ಗವಾಗಲಿವೆ ಎಂದು ಹೇಳಿದೆ. ಆದರೆ, ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ಸ್ ಕ್ಷೇತ್ರದಿಂದ ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಂದೆಡೆ ಕೇಂದ್ರದ ನಡೆಯ ಬಗ್ಗೆ ಹಲವು ಕ್ಷೇತ್ರದಿಂದ ಶ್ಲಾಘನೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಸದ್ದಿಲ್ಲದೆ ಹಬ್ಬ, ಶುಭ-ಸಮಾರಂಭದ ವೇಳೆ ಬಟ್ಟೆ ಖರೀದಿಸುವವರ ಜೇಬಿಗೆ ಕತ್ತರಿಯಾಗಿದೆ. ಅಲ್ಲದೇ, 2,500 ರೂ.ಗಿಂತ ಹೆಚ್ಚಿನ ಬೆಲೆಯ ಬಟ್ಟೆ ಖರೀದಿ ಮಾಡಿದರೆ ಶೇ.18 ರಷ್ಟು ತೆರಿಗೆ ಪಾವತಿಸಬೇಕಾಗಿದೆ. ಇದು ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ಸ್ ಉದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಸ್ತಾವಿತ ಜಿಎಸ್‌ಟಿ ಸುಧಾರಣೆಗಳ ಅಡಿಯಲ್ಲಿ 2,500 ರೂ.ಗಿಂತ ಹೆಚ್ಚಿನ ಮೊತ್ತದ ಬಟ್ಟೆಗಳ ಮೇಲಿನ ತೆರಿಗೆಯನ್ನು ಶೇ. 18 ರಷ್ಟು ಹೆಚ್ಚಿನ ಸ್ಲ್ಯಾಬ್‌ಗೆ ಸೇರಿಸುವ ಸರ್ಕಾರದ ಪ್ರಸ್ತಾವನೆಯು ಮಧ್ಯಮ ವರ್ಗದ ಗ್ರಾಹಕರು ಮತ್ತು ಸಂಘಟಿತ ತಯಾರಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪ್ರಸ್ತುತ ಇರುವ ನಾಲ್ಕು ಹಂತದ ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಿಸಿ, ಕೇವಲ ಎರಡು ಹಂತದ ತೆರಿಗೆ ರಚನೆಗೆ ಅನುಮೋದನೆ ನೀಡಲಾಗಿದೆ. ಈ ಮೂಲಕ, ಜನಸಾಮಾನ್ಯರ ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಭಾರವನ್ನು ಗಣನೀಯವಾಗಿ ಇಳಿಸಲಾಗಿದೆ. ಸೆ. 22ರ ನವರಾತ್ರಿಯ ಮೊದಲ ದಿನದಿಂದ ಜಾರಿಗೆ ಬರಲಿರುವ ಸ್ಲ್ಯಾಬ್‌ಗಳನ್ನು ಶೇಕಡ 5 ಮತ್ತು ಶೇಕಡ 18ಕ್ಕೆ ಸೀಮಿತಗೊಳಿಸಿ, ಜಿಎಸ್‌ಟಿ ಮಂಡಳಿ ದರಗಳನ್ನು ಪರಿಷ್ಕರಿಸಿದೆ. ಎರಡು ಹಂತದ ತೆರಿಗೆ ರಚನೆ ಮಾಡಿರುವ ಸರ್ಕಾರವು 2,500 ರೂ.ಗಿಂತ ಹೆಚ್ಚಿನ ಬೆಲೆಯ ಬಟ್ಟೆ ಖರೀದಿಗೆ ಇದ್ದ ಶೇ.12ರ ಬದಲು ಶೇ.18ಕ್ಕೆ ಹೆಚ್ಚಳ ಮಾಡಿದೆ. ಇದಕ್ಕೆ ಉಡುಪು ಉದ್ಯಮದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮಧ್ಯಮ ವರ್ಗ ಮತ್ತು ಸಂಘಟಿತ ಉಡುಪು ಉತ್ಪಾದನಾ ವಲಯಕ್ಕೆ ಇದು ಗಮನಾರ್ಹ ಹೊಡೆತ ಎಂಬುದು ಉದ್ಯಮಿಗಳ ಅಳಲಾಗಿದೆ. ಅನೇಕ ಉಣ್ಣೆಯ ಉಡುಪುಗಳ ಬೆಲೆ 3,500 ರೂ.ನಿಂದ 7ಸಾವಿರ ರೂ.ರವರೆಗೆ ಇರುತ್ತದೆ. ಇದೀಗ ಶೇ.18 ರಷ್ಟು ಜಿಎಸ್‌ಟಿ ಸ್ಲ್ಯಾಬ್ ಇದನ್ನು ಸೇರ್ಪಡೆ ಮಾಡಿರುವುದರಿಂದ ಈ ವಸ್ತುಗಳ ಬೆಲೆಯನ್ನು ಗಮನಾರ್ಹವಾಗಿ ಹೆಚ್ಚಳವಾಗಲಿದೆ. ಇದು ಅನೇಕ ಮಧ್ಯಮ ವರ್ಗದ ಗ್ರಾಹಕರಿಗೆ ಪೆಟ್ಟು ಬೀಳಲಿದೆ. ಅಲ್ಲದೇ, ಹಬ್ಬಗಳು ಸರದಿಯಾಗಿ ಬರುತ್ತಿದೆ. ಅಲ್ಲದೇ, ಮದುವೆ, ಗೃಹಪ್ರವೇಶದಂತಹ ಸಮಾರಂಭಗಳು ನಡೆಯುತ್ತವೆ. ಅವುಗಳಿಗೆ ಸಾಮಾನ್ಯವಾಗಿ ಕಡಿಮೆ ದರದಲ್ಲಿ ಬಟ್ಟೆಗಳನ್ನು ಯಾರು ಖರೀದಿಸುವುದಿಲ್ಲ. 2,500 ರೂ.ಗಿಂತ ಹೆಚ್ಚಿನ ಬೆಲೆಯ ಬಟ್ಟೆ ಖರೀದಿ ಮಾಡುತ್ತಾರೆ. ಆಗ ಜನಸಾಮಾನ್ಯರು ಶೇ.18ರಷ್ಟು ಜಿಎಸ್‌ಟಿಯನ್ನು ಪಾವತಿಸಲೇ ಬೇಕಾಗುತ್ತದೆ. ಈ ಮೊದಲು ಇದೇ ಬೆಲೆಯ ಬಟ್ಟೆಗಳ ಖರೀದಿಗೆ ಶೇ.12ರಷ್ಟು ಜಿಎಸ್‌ಟಿ ಪಾವತಿಸಬೇಕಾಗಿದೆ. ಇನ್ನು ಮುಂದೇ ಶೇ.18ರಷ್ಟು ಜಿಎಸ್‌ಟಿ ನೀಡಬೇಕಾಗುತ್ತದೆ ಎಂದು ಉದ್ಯಮಿಗಳು ಹೇಳಿದ್ದಾರೆ.
ಸಂಘಟನೆಯಲ್ಲಿ ಚರ್ಚಿಸಿ ತೀರ್ಮಾನ
ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ಸ್ ಉದ್ಯಮದ ತೆರಿಗೆ ಸ್ಲ್ಯಾಬ್ ಹೆಚ್ಚಳ ಮಾಡಿರುವ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ಸ್ ಅಸೋಸಿಯೇಷನ್ ಮುಖ್ಯ ಕನ್ವೆನರ್ ಹಾಗೂ ಎಫ್‌ಕೆಸಿಸಿಐ ನಿರ್ದೇಶಕ ಪಿ.ಎಚ್.ರಾಜ್ ಪುರೋಹಿತ್, ಹಲವು ಉತ್ಪನ್ನಗಳಿಗೆ ತೆರಿಗೆ ಕಡಿಮೆ ಮಾಡಿರುವುದು ಸ್ವಾಗತಾರ್ಹ. ಅಲ್ಲದೇ, ಕೆಲವೊಂದು ಉತ್ಪನ್ನಗಳಿಗೆ ಶೂನ್ಯ ಮಾಡಿರುವುದು ಒಳ್ಳೆಯದು. ಆದರೆ, ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ಸ್ ಉದ್ಯಮಕ್ಕೆ ಒಳ್ಳೆಯ ಬೆಳವಣಿಗೆ ಇಲ್ಲ. ಶೇ.12ರಷ್ಟು ತೆರಿಗೆ ಸ್ಲ್ಯಾಬ್‌ನಿಂದ ಶೇ.18ರಷ್ಟು ತೆರಿಗೆ ಸ್ಲ್ಯಾಬ್‌ಗೆ ಸೇರ್ಪಡೆ ಮಾಡಿರುವುದು ಕ್ಷೇತ್ರಕ್ಕೆ ಪೆಟ್ಟು ನೀಡಿದಂತಾಗಿದೆ ಎಂದರು.
ಪ್ರತಿ ಮನುಷ್ಯನಿಗೆ ಬಟ್ಟೆ, ಊಟ ಮತ್ತು ಆಶ್ರಯ ಬೇಕು. ಆದರೆ, ಮನುಷ್ಯನ ಅತ್ಯಗತ್ಯಗಳಲ್ಲಿ ಒಂದಾದ ಉಡುಪು ಉದ್ಯಮಕ್ಕೆ ಕೇಂದ್ರ ಸರ್ಕಾರವು ಹೊಡೆತ ನೀಡಿದೆ. ಒಂದು ಸಾವಿರ ರೂ.ವರೆಗಿನ ಉಡುಪುಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ಇದೆ. ಆದರೆ 2,500 ರೂ. ಗಿಂತ ಹೆಚ್ಚಿನ ದರ ಉಡುಪುಗಳಿಗೆ ಶೇ.18ರಷ್ಟು ಜಿಎಸ್‌ಟಿ ಸ್ಲ್ಯಾಬ್‌ಗೆ ಸೇರಿಸಲಾಗಿದೆ. ಈ ಕ್ರಮ ಸರಿಯಲ್ಲ. ಮೊದಲು ಶೇ.12ರಷ್ಟು ತೆರಿಗೆಯ ಸ್ಲ್ಯಾಬ್‌ನಲ್ಲಿತ್ತು. ಆ ಸ್ಲ್ಯಾಬ್‌ನಲ್ಲಿರುವಾಗಲೇ ಜನರು ಹೆಚ್ಚಾಗಿ ಬಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಇದೀಗ ಶೇ.18ರ ತೆರಿಗೆ ಸ್ಲ್ಯಾಬ್‌ಗೆ ಸೇರ್ಪಡೆ ಮಾಡಿರುವುದು ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಒಂದು ದೇಶ, ಒಂದು ತೆರಿಗೆ ಎಂಬುದಾಗಿ ಹೇಳುತ್ತದೆ. ಆದರೆ, ಜಿಎಸ್‌ಟಿಯಲ್ಲಿ ಎರಡು ರೀತಿಯ ತೆರಿಗೆ ಹಂಚಿಕೆ ಮಾಡಿದೆ. ಇಲ್ಲಿಯೂ ಏಕರೂಪ ತೆರಿಗೆ ಮಾಡಿ, ಎಲ್ಲ ಉತ್ಪನ್ನಗಳಿಗೆ ಶೇ.5ರಷ್ಟು ತೆರಿಗೆ ನಿಗದಿ ಮಾಡಬೇಕಾಗಿತ್ತು. ಎರಡು ಹಂತದ ತೆರಿಗೆ ಹಂಚಿಕೆ ಮಾಡಿರುವುದರಿಂದ ಕೇಂದ್ರದ ಒಂದು ದೇಶ, ಒಂದು ತೆರಿಗೆ ನೀತಿ ಎಲ್ಲಿ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ ಉದ್ಯಮದ ಮೇಲೆ ವಿಧಿಸಿರುವ ತೆರಿಗೆಯನ್ನು ವಿರೋಧಿಸಲಾಗುತ್ತದೆ. ರಾಷ್ಟ್ರಮಟ್ಟದ ಸಂಘಟನೆಯು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು. ಕೇಂದ್ರದ ಧೋರಣೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಮಾಡಲಾಗುವುದು. ಮುಂಬೈನಲ್ಲಿ ಸಂಘಟನೆಯ ಕೇಂದ್ರ ಸ್ಥಾನ ಇದ್ದು, ಅಲ್ಲಿ ಸಭೆ ನಡೆಸಲಾಗುತ್ತದೆ. ತೆರಿಗೆ ಸ್ಲ್ಯಾಬ್ ಅನ್ನು ತಗ್ಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ಒಂದು ವೇಳೆ ಸರ್ಕಾರವು ಸ್ಪಂದಿಸದಿದ್ದರೆ ಹೋರಾಟದ ಹಾದಿ ತುಳಿಯಲಾಗುವುದು. ಈ ಬಗ್ಗೆ ದೇಶದ ಎಲ್ಲಾ ಸಂಘಟಕರೊಂದಿಗೆ ಚರ್ಚಿಸಿ ಹೋರಾಟದ ರೂಪು ರೇಷೆಗಳನ್ನು ರೂಪಿಸಲಾಗುವುದು ಎಂದರು.
ರಾಜ್ಯದಲ್ಲಿ 4,600ಕ್ಕೂ ಹೆಚ್ಚು ಉದ್ಯಮಗಳು
ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಹೊರತು ಪಡಿಸಿದರೆ ಅತಿ ಹೆಚ್ಚು ಉದ್ಯೋಗ ಗಾರ್ಮೆಂಟ್ಸ್ ಕ್ಷೇತ್ರದಲ್ಲಿದೆ. ಗಾರ್ಮೆಂಟ್ಸ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 4600ರಷ್ಟು ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ. ಸುಮಾರು 12 ಲಕ್ಷಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಶೇ.80ರಷ್ಟು ಮಹಿಳೆಯರೇ ಈ ಕ್ಷೇತ್ರದಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಟೆಕ್ಸ್‌ಟೈಲ್ ಉದ್ಯಮವು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಸುಮಾರು ಸಾವಿರದಷ್ಟು ಉದ್ಯಮಗಳು ಇರಬಹುದು. ಟೆಕ್ಸ್‌ಟೈಲ್ ಕ್ಷೇತ್ರವು ಗಾರ್ಮೆಂಟ್ ಕ್ಷೇತ್ರವನ್ನೇ ಅವಲಂಬಿತವಾಗಿದೆ ಎಂದು ಹೇಳಿದರು.
ಬೆಂಗಳೂರನ್ನೇ ಕೇಂದ್ರವಾಗಿಟ್ಟು ಗಾರ್ಮೆಂಟ್ಸ್ ಉದ್ಯಮ ಬೆಳೆಯುತ್ತಿದೆ. ಇದರಿಂದಾಗಿ ಪ್ರಸ್ತುತ ವಾರ್ಷಿಕ ಶೇ.25ರಷ್ಟಿರುವ ಬೆಂಗಳೂರಿನ ಜನಸಂಖ್ಯೆ ಏರಿಕೆ ಪ್ರಮಾಣ ಮುಂದಿನ ಐದು ವರ್ಷದಲ್ಲಿ ಶೇ.65ರಷ್ಟಾಗಲಿದೆ. ಗಾರ್ಮೆಂಟ್ಸ್ ಉದ್ಯಮ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದರೂ ಕಾರ್ಮಿಕರ ವೇತನ, ಸೌಲಭ್ಯಕ್ಕಾಗಿ ಶೇ.25ರಷ್ಟು ವೆಚ್ಚವಾಗುತ್ತಿದೆ ಎಂದು ಹೇಳಲಾಗಿದೆ.