There are terrorists not only in the Central Jail but also in the Vidhan Soudha: Minister HDK
x

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಕಾರಾಗೃದಲ್ಲಷ್ಟೇ ಅಲ್ಲ, ವಿಧಾನಸೌಧದಲ್ಲೂ ಉಗ್ರರಿದ್ದಾರೆ: ಸಚಿವ ಹೆಚ್‌ಡಿಕೆ ಟೀಕೆ

ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎನ್ನುವುದು ಹಳೆಯ ವಿಚಾರವಲ್ಲ. ಹಿಂದೆ ಇದೇ ವಿಷಯದ ಬಗ್ಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದರು ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.


Click the Play button to hear this message in audio format

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸರಣಿ ಅತ್ಯಾಚಾರಿ ಹಾಗೂ ಉಗ್ರರಿಗೆ ಮೊಬೈಲ್ ಫೋನ್ ಸೌಲಭ್ಯ ಸೇರಿ ರಾಜಾತಿಥ್ಯ ಕಲ್ಪಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕಾರಾಗೃಹದಲ್ಲಿ ಅಷ್ಟೇ ಭಯೋತ್ಪಾದಕರಿಲ್ಲ, ಅದಕ್ಕಿಂತಲೂ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲಿಯೇ ಇದ್ದಾರೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ(ನ.10) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಾಗೂ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಪಾತಕಿಗಳಿಗೆ ಜೈಲು ಸಿಬ್ಬಂದಿ ರಾಜಾತಿಥ್ಯ ನೀಡುತ್ತಿರುವುದು ನಾಚಿಕೆಗೇಡು. ರಾಜ್ಯದ ಜನ ಈ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದರು.

ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎನ್ನುವುದು ಹಳೆಯ ವಿಚಾರವಲ್ಲ. ಹಿಂದೆ ಇದೇ ವಿಷಯದ ಬಗ್ಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದರು. ಆಮೇಲೆ ಇನ್ನೊಂದು ಪ್ರಕರಣದಲ್ಲಿ ಸ್ವತಃ ನ್ಯಾಯಾಲಯಗಳೇ ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಲು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅದಾದ ನಂತರ ಮತ್ತೆ ಅಂಥವೇ ಪ್ರಕರಣಗಳು ಜೈಲಿನಲ್ಲಿ ಮರುಕಳಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಗುರುತರ ಅಪರಾಧ ಮಾಡಿದವರಿಗೆ ಎಲ್ಲಾ ರೀತಿಯ ಸೌಲಭ್ಯ ಕೊಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಹೊಸದಾಗಿ ಶುರುವಾದುದಲ್ಲ. ವಿಧಾನಸೌಧದಲ್ಲಿ ಉಗ್ರರನ್ನು ಇಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿನ ಉಗ್ರರ ಬಗ್ಗೆ ಏನು ಚರ್ಚೆ ಮಾಡುವುದು? ನೀವು ಯಾರ ಬಗ್ಗೆ ತನಿಖೆ ಮಾಡುತ್ತೀರಿ? ಇವೆಲ್ಲಾ ಕಾಲಹರಣ, ಸಮಯ ವ್ಯರ್ಥ ಮಾಡುವುದಕ್ಕೆ ನಡೆಯುತ್ತಿರುವ ತನಿಖೆಯಷ್ಟೇ ಎಂದು ಟೀಕಿಸಿದರು.

ಸಿಎಂ, ಗೃಹ ಸಚಿವರನ್ನು ಪ್ರಶ್ನಿಸಿ

ಜೈಲು ನಿರ್ವಹಣೆಯಲ್ಲಿ ಪದೆ ಪದೇ ನಡೆಯುತ್ತಿರುವ ವೈಫಲ್ಯಗಳ ಬಗ್ಗೆ ಮಾಧ್ಯಮಗಳು ಹಾಗೂ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರನ್ನು ಪ್ರಶ್ನಿಸಬೇಕು. ಪ್ರತಿ ದಿನವೂ ಈ ಸರ್ಕಾರದ ವೈಪಲ್ಯ ಎದ್ದು ಕಾಣಿಸುತ್ತಿದೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಸಿಎಂ ಬೊಬ್ಬೆ ಹಾಕುತ್ತಾರೆ. ಆದರೆ ಇವರಿಗೇನಿದೆ‍ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.

ಸಿಎಂ ಅವರಿಗೆ ದೀರ್ಘ ಅನುಭವವಿದೆ. ಇಷ್ಟು ಅನುಭವ ಇಟ್ಟುಕೊಂಡು ಇಷ್ಟೆಲ್ಲಾ ಲಘುವಾಗಿ ತೆಗೆದುಕೊಳ್ಳುವುದು ಎಷ್ಟು ಸರಿ? ಮುಖ್ಯಮಂತ್ರಿಗಳಿಗೆ ಗುಪ್ತದಳ ಎನ್ನುವುದು ಇರುವುದಿಲ್ಲವೇ? ಇವರೇ ಕೆಟ್ಟ ಶಕ್ತಿಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಒತ್ತಾಯ ಮಾಡಿದಾಕ್ಷಣ ರಾಜಿನಾಮೆ ಕೊಡುವ ಕಾಲವೇ ಇದು? ಅಷ್ಟೊಂದು ನೈತಿಕತೆ ಯಾವ ರಾಜಕಾರಣಿಗಿದೆ ಎಂದು ಪ್ರಶ್ನಿಸಿದರು.

ನಮಾಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಿ

ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಅನೇಕ ಜನರು ಇಲ್ಲಿಗೆ ಬರುತ್ತಾರೆ. ಬೇರೆ ಬೇರೆ ಧರ್ಮದವರು ಪ್ರಾರ್ಥನೆ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುತ್ತದೆ. ನಾವು ಸಣ್ಣತನ ತೋರುವ ಅಗತ್ಯವಿಲ್ಲ. ಅವರಿಗೊಂದು ಪ್ರತ್ಯೇಕ ಕೊಠಡಿ ಮಾಡಿಕೊಡಬೇಕು. ಆಗ ಬಹಿರಂಗವಾಗಿ ಇಂಥ ದೃಶ್ಯಗಳನ್ನು ನೋಡುವುದು ತಪ್ಪುತ್ತದೆ ಎಂದರು.

Read More
Next Story