
Pahalgam Terror Attack | ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ; ಬೆಂಗಳೂರಿನ ಟೆಕ್ಕಿ ಸಾವು
ಮೂಲತಃ ಆಂಧ್ರಪ್ರದೇಶದ ಮಧುಸೂಧನ್ ಅವರು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಭಾನುವಾರ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಉಗ್ರರ ದಾಳಿಯಲ್ಲಿ ಮಧುಸೂಧನ್ ಮೃತಪಟ್ಟಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮತ್ತೊಬ್ಬ ಆಂಧ್ರ ಮೂಲದ ಕನ್ನಡಿಗ ಮೃತಪಟ್ಟಿರುವುದು ಖಚಿತವಾಗಿದೆ. ಮೃತ ಕನ್ನಡಿಗನನ್ನು ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಮಧುಸೂಧನ್ ಎಂದು ಗುರುತಿಸಲಾಗಿದೆ.
ಮೂಲತಃ ಆಂಧ್ರಪ್ರದೇಶದ ಮಧುಸೂಧನ್ ಅವರು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಬೆಂಗಳೂರು ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಮಧುಸೂಧನ್ ಅವರು ಕಳೆದ ಭಾನುವಾರ ಪತ್ನಿ, ಮಕ್ಕಳು ಹಾಗೂ ಸ್ನೇಹಿತರೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಪಹಲ್ಗಾಮ್‌ನಲ್ಲಿ ವಿಹರಿಸುತ್ತಿದ್ದ ವೇಳೆ ಭಯೋತ್ಪಾದಕರು ದಾಳಿ ನಡೆಸಿದ್ದರು.
ಘಟನೆ ವೇಳೆ ಮಕ್ಕಳು ಹಾಗೂ ಸ್ನೇಹಿತರು ತಿಂಡಿ ತರಲು ತೆರಳಿದ್ದರು. ಮಧುಸೂದನ್ ರಾವ್ ಮಾತ್ರ ಹುಲ್ಲಿನ ಮೇಲೆ ಕುಳಿತಿದ್ದರು ಎಂದು ತಿಳಿದು ಬಂದಿದೆ.
ಮಧುಸೂಧನ್ ಅವರು ರಾಮಮೂರ್ತಿ ನಗರದಲ್ಲಿ ಸುಮಾರು 15 ವರ್ಷಗಳಿಂದ ವಾಸವಾಗಿದ್ದರು. 3 ವರ್ಷಗಳ ಹಿಂದಷ್ಟೇ ಡೂಪ್ಲೆಕ್ಸ್ ಮನೆ ಕಟ್ಟಿದ್ದರು. ಪತ್ನಿ ಹಾಗೂ ಮಕ್ಕಳೊಂದಿಗೆ ವಾಕ್ ಮಾಡುವಾಗ ಅವರನ್ನು ಮಾತನಾಡಿಸುತ್ತಿದ್ದೆವು. ತುಂಬಾ ಸ್ನೇಹಜೀವಿಯಾಗಿದ್ದರು ಎಂದು ಮಧುಸೂಧನ್ ನೆರೆಹೊರೆಯವರಾದ ಹಿರಿಯ ನಾಗರಿಕರೊಬ್ಬರು ತಿಳಿಸಿದ್ದಾರೆ.