
Pahalgam Terror Attack | ಮಗನ ʼಪಿಯುಸಿ ಸಾಧನೆʼ ನಡುವೆಯೇ ದುರಂತವಾದ ಕಾಶ್ಮೀರ ಪ್ರವಾಸ
ಪುತ್ರ ಅಭಿಜೇಯ ಮೊನ್ನೆ ತಾನೆ ಬಂದ ಪಿಯುಸಿ ಫಲಿತಾಂಶದಲ್ಲಿ ಶೇ.97 ಅಂಕ ಗಳಿಸಿದ್ದ. ಇದೇ ಸಂತೋಷಕ್ಕಾಗಿ ಮಂಜುನಾಥ್, ತಮ್ಮ ಪತ್ನಿ, ಪುತ್ರನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪಾಲಗಾಂವ್ ಬಳಿ ಖುಷಿ ಖುಷಿಯಾಗಿದ್ದಾಗಲೇ ಭಯೋತ್ಪಾದಕರ ಗುಂಡು ಮಂಜುನಾಥ್ ತಲೆ ಸೀಳಿದೆ.
ಮಗನ ಸಾಧನೆಯ ಸಂಭ್ರಮದಲ್ಲಿದ್ದ ಶಿವಮೊಗ್ಗದ ಯುವ ಉದ್ಯಮಿ ಮಂಜುನಾಥ್ ರಾವ್ ಮನೆಯಲ್ಲಿ ನೀರವ ಮೌನ! ಜನಪ್ರತಿನಿಧಿಗಳು,ಸ್ನೇಹಿತರು, ಬಂಧುಗಳು ಹಾಗೂ ದೇಶ ಪ್ರೇಮಿಗಳ ಜನಸಾಗರ.
ಅವರು, ಕಾಶ್ಮೀರ ಪ್ರವಾಸದ ವೇಳೆ, ಭಯೋತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಪಿಯುಸಿ ಪರೀಕ್ಷೆಯಲ್ಲಿ ಮಗ ಅತಿ ಹೆಚ್ಚುಅಂಕ ಗಳಿಸಿ ಉತ್ತೀರ್ಣನಾದ ಖುಷಿಗೆ, ಪತ್ನಿ, ಮಗನ ಜತೆಗೆ ಕಾಶ್ಮೀರ ಪ್ರವಾಸ ತೆರಳಿದ್ದರು. ಆದರೆ, ಭಯೋತ್ಪಾದಕನ ಗುಂಡಿನ ದಾಳಿಗೆ ಬಲಿಯಾದ ಮಂಜುನಾಥ್ ಅವರ ಕನಸುಗಳೂ ನುಚ್ಚುನೂರಾದವು!
ಆದರೆ, ಪುತ್ರ ಅಭಿಜೇಯ ರಾವ್ ಸಣ್ಣಪುಟ್ಟ ಗಾಯಗಳಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜತೆಗೆ ಅವರ ಪತ್ನಿ ಪಲ್ಲವಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಮಗನ ಸಂಭ್ರಮಕ್ಕೆ ವಿಧಿಯಿಂದ ಬರೆ
ಇತ್ತೀಚೆಗಷ್ಟೇ ಮಗ ಪಿಯುಸಿಯಲ್ಲಿ ಶೇ 97 ಅಂಕ ಪಡೆದು ಉತ್ತೀರ್ಣನಾಗಿದ್ದ, ಒಬ್ಬನೇ ಮಗನ ಶೈಕ್ಷಣಿಕ ಸಾಧನೆಯ ಸಂಭ್ರಮ ಕಂಡು ಕ್ರೂರ ವಿಧಿ ಕರುಬಿದನೊ ಏನೊ ಗೊತ್ತಿಲ್ಲ. ಆ ಮನೆಯಲ್ಲಿ ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಭಯೋತ್ಪಾದಕ ದಾಳಿಯ ರೂಪದಲ್ಲಿ ಬಂದ ಸಾವಿನ ಸುದ್ದಿ ಮಂಜುನಾಥ್ ರಾವ್ ಮನೆಯಲ್ಲಿ ಕರಾಳ ಮೌನ ಆವರಿಸುವಂತೆ ಮಾಡಿದೆ.
ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಶಿವಮೊಗ್ಗ ವಿಜಯ ನಗರದಲ್ಲಿರುವ ಮಂಜುನಾಥ್ ರಾವ್ ಅವರ ಮನೆಯ ಮುಂದೆ ಜನಜಂಗುಳಿ. ಬಂಧುಗಳು, ಹಿತೈಷಿಗಳು, ಸ್ನೇಹಿತರು ಬರುತಿದ್ದಾರೆ. ನಿರುಪದ್ರವಿ ಮಂಜುನಾಥ್ ಸಾವಿಗೆ ಕಂಬನಿ ಮಿಡಿಯುತಿದ್ದಾರೆ.

ಭಯೋತ್ಪಾದಕರ ದಾಳಿಯಿಂದ ಮೃತರಾದ ಉದ್ಯಮಿ ಮಂಜುನಾಥ್ ಮನೆಗೆ ಧಾವಿಸುತ್ತಿರುವ ಸಂಬಂಧಿಗಳು, ಹಿತೈಷಿಗಳು
ಕಾಶ್ಮೀರದ ಪಾಲಗಾಂವ್‌ಬಳಿ ನಡೆದಿರುವ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೂಲತಃ ಕೊಪ್ಪ ತಾಲೂಕು ಹರಿಹರಪುರದವರು. ಇವರ ಪತ್ನಿ ಪಲ್ಲವಿ ಮ್ಯಾಮ್ ಕೋಸ್ ಉದ್ಯೋಗಿಯಾಗಿದ್ದು, ಕಡೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಗ ಅಭಿಜೇಯ ಮೊನ್ನೆ ತಾನೆ ಬಂದ ಪಿಯುಸಿ ಫಲಿತಾಂಶದಲ್ಲಿ ಶೇ.97 ಅಂಕ ಗಳಿಸಿದ್ದ. ಇದೇ ಸಂತೋಷಕ್ಕಾಗಿ ಮಂಜುನಾಥ್ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಏ.19 ರಂದು ಹೋಗಿದ್ದ ಮಂಜುನಾಥ್ ಕುಟುಂಬ ಮಂಗಳವಾರ ಪಾಲಗಾಂವ್‌ಗೆ ಭೇಟಿ ನೀಡಿತ್ತು. ಕುದುರೆ ಸವಾರಿ ಮೂಲಕ ಪ್ರವಾಸಿ ತಾಣದಲ್ಲಿ ಖುಷಿಯಾಗಿದ್ದ ಸಂದರ್ಭದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಪತ್ನಿ ಮತ್ತು ಮಗನೊಂದಿಗೆ ಸಂಭ್ರಮದಲ್ಲಿದ್ದ ಮಂಜುನಾಥ್ ತಲೆಗೆ ಗುಂಡು ತಗುಲಿ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ.

ಘಟನೆ ಬಗ್ಗೆ ಕಾಶ್ಮೀರದಲ್ಲಿ ಮಾಧ್ಯಮದ ಜತೆ ಕಣ್ಣೀರಿಡುತ್ತಾ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಪತ್ನಿ ಪಲ್ಲವಿ ಅವರು, ಏ.19ರಂದು ಪ್ರವಾಸಕ್ಕೆ ಹೋಗಿದ್ದೆವು. ಉಗ್ರರು ಬಂದು ನಮ್ಮ ಧರ್ಮವನ್ನು ವಿಚಾರಿಸಿ, ನಮ್ಮ ಕಣ್ಣೆದುರಿಗೇ ಪತಿಯನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಅವರನ್ನು ಕೊಲ್ಲು ವೇಳೆ ನನ್ನನ್ನು ಹಾಗೂ ಮಗನನ್ನು ಕೊಂದುಬಿಡಿ ಎಂದು ನಾವು ಉಗ್ರರಿಗೆ ಕೋರಿಕೊಂಡೆವು. ಆಗ ಅವರು ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳಿ ಎಂದು ತಿಳಿಸಿದ್ದಾರೆ," ಎಂದು ಹೇಳಿದ್ದಾರೆ. ಆ ವೇಳೆ, ಅವರ ರೋದನೆ ಅಲ್ಲಿದ್ದವರನ್ನು ಅಶ್ರುಭರಿತರನ್ನಾಗಿಸಿತು ಎಂದು ಕಾಶ್ಮೀರ ಮಾಧ್ಯಮ ಹೇಳಿಕೊಂಡಿದೆ.
ಆರ್‌ಎಸ್‌ಎಸ್ ನಂಟು
ಮಂಜುನಾಥ್ ಅವರು ಆರ್.ಎಸ್.ಎಸ್. ನಾಯಕ ಹಿರಿಯೂರು ಕೃಷ್ಣಮೂರ್ತಿ ಅವರ ಸಂಬಂಧಿಯಾಗಿದ್ದು, ನಾಡು-ನುಡಿ ಮತ್ತು ದೇಶದ ವಿಚಾರದಲ್ಲಿ ಯಾವತ್ತೂ ಮುಂದಿರುತ್ತಿದ್ದರು. ಆಟೋಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದ ಅವರು, ವಾಹನ ಬಿಡಿಭಾಗಗಳನ್ನು ತಯಾರಿಸುವ ಫ್ಯಾಕ್ಟರಿ ಮಾಡಿದ್ದರು. ಅದರಲ್ಲಿ ನಷ್ಟವಾಗಿದ್ದರಿಂದ ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಪತ್ನಿ ಪಲ್ಲವಿ ಅವರು ಮ್ಯಾಮ್‌ಕೋಸ್‌ನಲ್ಲಿ ಒಳ್ಳೆ ಉದ್ಯೋಗದಲ್ಲಿದ್ದರು. ಮಂಜುನಾಥ್ ತಂದೆಯೂ ಮ್ಯಾಮ್ ಕೋಸ್ ಉದ್ಯೋಗಿದ್ದರು ಆದರೆ ಅವರು ಈಗ ಇಲ್ಲ. ತಾಯಿಯೊಂದಿಗೆ ಮಗ, ಪತ್ನಿಯೊಂದಿಗೆ ಮಂಜುನಾಥ್ ವಿಜಯನಗರದಲ್ಲಿ ವಾಸಿಸುತ್ತಿದ್ದರು.
ಅನಾರೋಗ್ಯದ ಕಾರಣ ಮಗನೊಂದಿಗೆ ಪ್ರವಾಸಕ್ಕೆ ಹೋಗಿದ್ದ ಮಂಜುನಾಥ್ ತಾಯಿ ಒಬ್ಬರೇ ಮನೆಯಲ್ಲಿದ್ದಾರೆ. ಮನೆಯ ಮುಂದೆ ಜನ ಸೇರುತ್ತಿರುವುದನ್ನು ಕಂಡು ಅವರೂ ಗಾಬರಿಯಾಗಿದ್ದಾರೆ. ನಿಖರ ಮಾಹಿತಿಯನ್ನು ಅವರಿಗೆ ಇನ್ನೂ ಹೇಳಿಲ್ಲವಾದರೂ, ಅಲ್ಲಿನ ವಾತಾವರಣ, ಮಾಧ್ಯಮಗಳ ಕ್ಯಾಮೆರಾ ನೋಡಿ ಏನೋ ಅನಾಹುತ ಆಗಿದೆ ಎಂದು ಗಾಬರಿಯಾಗಿದ್ದಾರೆ.

ಭಯೋತ್ಪಾದಕರ ದಾಳಿಯಿಂದ ಮೃತರಾದ ಉದ್ಯಮಿ ಮಂಜುನಾಥ್ ಮನೆಗೆ ಧಾವಿಸುತ್ತಿರುವ ಸಂಬಂಧಿಗಳು, ಹಿತೈಷಿಗಳು
ಶಿವಮೊಗ್ಗ ಶಾಸಕ ಎಸ್.ಎನ್.ಚೆನ್ನಬಸಪ್ಪ, ಮಂಜುನಾಥ್ ಭಾವ ಹಾಗೂ ಆರ್.ಎಸ್.ಎಸ್. ಪ್ರಮುಖರಾದ ಡಾ. ರವಿಕಿರಣ್ , ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಸ್ಥಳದಲ್ಲಿದ್ದಾರೆ.ಸಂಸದ ತೇಜಸ್ವಿ ಸೂರ್ಯ ಅವರೂ ಕಾಶ್ಮೀರ ಪ್ರವಾಸದಲ್ಲಿದ್ದು, ಅವರೊಂದಿಗೆ ಮಾತನಾಡಿದ್ದೇನೆ. ಅವರೂ ಸ್ಥಳಕ್ಕೆ ಹೋಗುವ ಸಾಧ್ಯತೆ ಇದೆ. ಮಂಜುನಾಥ್ ನಮಗೆ ಪರಿಚಿತನಾಗಿದ್ದು, ಅವರ ಕುಟುಂಬದೊಂದಿಗೆ ನಾವಿರುತ್ತೇವೆ ಎಂದು ಶಾಸಕ ಚೆನ್ನಬಸಪ್ಪ ಸಾಂತ್ವನ ಹೇಳಿದರು.
ಮಂಜುನಾಥ್ ಭಯೋತ್ಪಾದಕರ ದಾಳಿಗೆ ಬಲಿಯಾಗಿರುವುದು ತುಂಬಾ ನೋವು ತಂದಿದೆ. ಅವರ ಕುಟುಂಬದೊಂದಿಗೆ ನಾವಿರುತ್ತೇವೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.