
ಡಿಕ್ಕಿ ರಭಸಕ್ಕೆ ನಜ್ಜುಗುಜ್ಜಾಗಿರುವ ಕಾರು
ಕೂಡ್ಲಿಗಿ ಬಳಿ ಭೀಕರ ಅಪಘಾತ: ಸೇತುವೆಗೆ ಕಾರು ಡಿಕ್ಕಿಯಾಗಿ ಬೆಂಗಳೂರಿನ ತಾಯಿ-ಮಗು ದುರ್ಮರಣ
ಬೆಂಗಳೂರು ನಿವಾಸಿ ಮೋಹನ್ ಕುಮಾರ್ ಅವರು ತಮ್ಮ ಕುಟುಂಬ ಮತ್ತು ಸಂಬಂಧಿಕರೊಂದಿಗೆ ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಹಿಂದಿರುಗುವಾಗ ಹಂಪಿಗೆ ಭೇಟಿ ನೀಡಿ, ನಗರಕ್ಕೆ ಮರಳುತ್ತಿದ್ದರು.
ಹಂಪಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ಕಾರೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ, ಬೆಂಗಳೂರಿನ ನಿವಾಸಿಗಳಾದ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಸಂಜೆ ನಡೆದಿದೆ.
ತಾಲ್ಲೂಕಿನ ಬಣವಿಕಲ್ಲು ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಪ್ರೀತಿ (35) ಮತ್ತು ಅವರ ಒಂದು ವರ್ಷ 10 ತಿಂಗಳ ಮಗು ಯಶ್ವಿತ್ ಎಂದು ಗುರುತಿಸಲಾಗಿದೆ.
ಕಾನಹೊಸಹಳ್ಳಿ ಠಾಣೆ ಪೊಲೀಸರ ಪ್ರಕಾರ, ಬೆಂಗಳೂರು ನಿವಾಸಿ ಮೋಹನ್ ಕುಮಾರ್ ಅವರು ತಮ್ಮ ಕುಟುಂಬ ಮತ್ತು ಸಂಬಂಧಿಕರೊಂದಿಗೆ ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಹಿಂದಿರುಗುವಾಗ ಹಂಪಿಗೆ ಭೇಟಿ ನೀಡಿ, ಬೆಂಗಳೂರಿಗೆ ಮರಳುತ್ತಿದ್ದರು. ಮೋಹನ್ ಕುಮಾರ್ ಅವರೇ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಯಶ್ವಿತ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಅವರ ತಾಯಿ ಪ್ರೀತಿ ಅವರನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗಕ್ಕೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಮೋಹನ್ ಕುಮಾರ್, ರಾಧಾ, ಮರಿರಂಗಯ್ಯ, ರೂಪಾ, ಲಕ್ಷ್ಮೀದೇವಿ, ಚರಿತ್ ಹಾಗೂ ಮಿಥುನ್ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗ ಮತ್ತು ದಾವಣಗೆರೆಯ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.