ಬೆಂಗಳೂರಿನ ನಗರತ್ ಪೇಟೆಯಲ್ಲಿ ಉದ್ವಿಗ್ನ; ಶೋಭಾ ಕರಂದ್ಲಾಜೆ ಪೊಲೀಸರ ವಶಕ್ಕೆ
ನಗರತ್ ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ (ಮಾ. 19) ನಗರದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಇದರಿಂದಾಗಿ ನಗರತ್ ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಹಲರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲೆ ಖಂಡಿಸಿ ಹಿಂದೂಪರ ಸಂಘಟನೆಗಳು ಹಲ್ಲೆಗೊಳಗಾದ ಯುವಕ ಮುಖೇಶ್ ಅಂಗಡಿಯಿಂದ ಮಂಗಳವಾರ ಭಾಗವಧ್ವಜದೊಂದಿಗೆ ಹನುಮಾನ್ ಚಾಲೀಸ ಪಠಣ ಮಾಡಿಕೊಂಡು ಮೆರವಣಿಗೆ ಹಮ್ಮಿಕೊಂಡಿದ್ದರು.
ನೂರಾರು ಸಂಖ್ಯೆಯ ಹಿಂದೂಪರ ಕಾರ್ಯಕರ್ತರು ನಗರತ್ ಪೇಟೆಯಲ್ಲಿ ಸೇರಿದ್ದರು. ಈ ಮೆರವಣಿಗೆಗೆ ಬಿಜೆಪಿ ನಾಯಕರಾದ ಸುರೇಶ್ ಕುಮಾರ್ ಹಾಗೂ ಶೋಭಾ ಕರಂದ್ಲಾಜೆ ಕೂಡ ಭಾಗಿಯಾಗಿದ್ದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಪೊಲೀಸರು ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದರು.