
'ಲೈಂಗಿಕ ಕಿರುಕುಳ ಅಲ್ಲಿ- ಇಲ್ಲಿ ಮಾಮೂಲಿ': ವಿವಾದ ಸೃಷ್ಟಿಸಿದ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ
ಪರಮೇಶ್ವರ್ ಅವರು ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲಲ್ಲ. 2017ರ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಾಗಲೂ ಇದೇ ರೀತಿ ನೀಡಿದ್ದ ಹೇಳಿಕೆ ಟೀಕೆಗೆ ಗುರಿಯಾಗಿದ್ದವು.
ಬೆಂಗಳೂರಿನ ಬೀದಿಯೊಂದರಲ್ಲಿ ಮಹಿಳೆಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಇಂಥ ಸಂಗತಿಗಳು ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಆಗಾಗ ಸಂಭವಿಸುತ್ತವೆ ಎಂದು ಅವರು ಹೇಳಿರುವುದು ವಿವಾದಾತ್ಮಕವಾಗಿದೆ.
ಗೃಹ ಸಚಿವರ ಹೇಳಿಕೆ ಉಲ್ಲೇಖಿಸಿ 'ಇಂಡಿಯಾ ಟುಡೆ' ವರದಿ ಮಾಡಿದೆ. ಇದೇ ವೇಳೆ ಅವರು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಪೊಲೀಸರಿಗೆ ರಾತ್ರಿ ಗಸ್ತು ಹೆಚ್ಚಿಸುವಂತೆ ಸೂಚನೆ ನೀಡಿರುವುದಾಗಿ ಭರವಸೆ ಕೊಟ್ಟಿದ್ದಾರೆ.
"ಇಂತಹ ಘಟನೆಗಳು ಈ ರೀತಿಯ ದೊಡ್ಡ ನಗರದಲ್ಲಿ ಅಲ್ಲ- ಇಲ್ಲಿ ಸಂಭವಿಸುತ್ತವೆ. ಕಾನೂನಿನ ಪ್ರಕಾರ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಲಾಗುವುದು. ಪೊಲೀಸ್ ಆಯುಕ್ತರಿಗೆ ರಾತ್ರಿ ಗಸ್ತು ಹೆಚ್ಚಿಸುವಂತೆ ಸೂಚನೆ ನೀಡಿದ್ದೇನೆ," ಎಂದು ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಪರಮೇಶ್ವರ್ ಅವರು ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲಲ್ಲ. 2017ರ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಇದೇ ರೀತಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ''ಇಂಥ ಘಟನೆಗಳು ಹೊಸ ವರ್ಷದ ದಿನದಂದು ಸಂಭವಿಸುತ್ತವೆ. ನಮ್ಮ ಯುವಜನಾಂಗ ಪಾಶ್ಚಾತ್ಯ ಸಂಸ್ಕೃತಿ ಅನುಸರಿಸುವುದೇ ಸಮಸ್ಯೆಗೆ ಕಾರಣ,'' ಎಂದು ಹೇಳಿದ್ದರು. ಇದು ರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಏನಿದು ಘಟನೆ?
ಬೆಂಗಳೂರಿನ ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ಏಪ್ರಿಲ್ 3 ರ ಮುಂಜಾನೆ ನಡೆದ ಘಟನೆಯೊಂದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ/ ಒಬ್ಬ ವ್ಯಕ್ತಿ ಇಕ್ಕಟ್ಟಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರತ್ತ ಓಡಿ ಬಂದು ಅವರನ್ನು ಗೋಡೆಗೆ ಒತ್ತಿ, ಲೈಂಗಿಕ ದೌರ್ಜನ್ಯ ಎಸಗುವುದು ವಿಡಿಯೊದಲ್ಲಿದೆ. ಆರೋಪಿ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿ, ಅನಂತರ ಅಲ್ಲಿಂದ ಪರಾರಿಯಾಗಿದ್ದ.
ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಬೆಂಗಳೂರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.