The Federal Exclusive | ಟೆಂಡರ್‌ ಅಕ್ರಮ: ಶಿಕ್ಷಣ ಇಲಾಖೆ ನಿರ್ದೇಶಕಿ ಸುಮಂಗಲಾ ಅಮಾನತು
x

The Federal Exclusive | ಟೆಂಡರ್‌ ಅಕ್ರಮ: ಶಿಕ್ಷಣ ಇಲಾಖೆ ನಿರ್ದೇಶಕಿ ಸುಮಂಗಲಾ ಅಮಾನತು


ಬಹುಕೋಟಿ ಟೆಂಡರ್‌ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ನಿರ್ದೇಶಕಿ ವಿ ಸುಮಂಗಲಾ ಅವರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ನಿರ್ದೇಶಕಿಯಾಗಿರುವ ಸುಮಂಗಲಾ ಅವರು ಡಿಎಸ್‌ಇಆರ್‌ಟಿ ಮತ್ತು ಇತರೆ ಕಚೇರಿಗಳಲ್ಲಿ ಅನುಪಯುಕ್ತ ವಿದ್ಯುನ್ಮಾನ ಮತ್ತು ವಿದ್ಯುತ್‌ ಉಪಕರಣಗಳ ಇ-ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಟೆಂಡರ್‌ದಾರರೊಂದಿಗೆ ಕೈಜೋಡಿಸಿ ಸರ್ಕಾರಕ್ಕೆ ಬಹುಕೋಟಿ ರೂಪಾಯಿ ನಷ್ಟ ಮಾಡಿರುವುದೇ ಅಲ್ಲದೆ, ಗಂಭೀರ ಕರ್ತವ್ಯ ಲೋಪ, ದುರ್ನಡತೆ ಎಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಲಾಖಾ ತನಿಖೆಯನ್ನು ಕಾಯ್ದಿರಿಸಿ ತತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಗುರುವಾರ ಆದೇಶ ಹೊರಡಿಸಿದ್ದಾರೆ.

ಇ ತ್ಯಾಜ್ಯ ಟೆಂಡರ್‌ನಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ನಡೆಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದರು. ಸಚಿವರ ಸೂಚನೆ ಮೇರೆಗೆ ಈ ವ್ಯವಹಾರದ ಕುರಿತು ಪರಿಶೀಲಿಸಿದಾಗ ಟೆಂಡರ್‌ ನಿಯಮಾವಳಿ ಮೀರಿ ಮತ್ತು ಸರ್ಕಾರಕೆಕ ತಪ್ಪು ಮಾಹಿತಿ ನೀಡಿ ಕೋಟಿಗಟ್ಟಲೆ ನಷ್ಟ ಉಂಟುಮಾಡಲಾಗಿದೆ. ಟೆಂಡರ್‌ ಪಡೆದ ಖಾಸಗಿ ಕಂಪನಿಯ ಕುರಿತು ತಪ್ಪು ಮಾಹಿತಿ ನೀಡಿ ಅವರಿಗೆ ಟೆಂಡರ್‌ ಸಿಗುವಂತೆ ನೋಡಿಕೊಳ್ಳಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಗತ್ಯ ಪ್ರಮಾಣಪತ್ರದ ವಿಷಯದಲ್ಲಿಯೂ ಸರ್ಕಾರವನ್ನು ದಿಕ್ಕು ತಪ್ಪಿಸಲಾಗಿದೆ. ಮೂರು ಸಂಸ್ಥೆಗಳ ದಾಖಲೆಗಳನ್ನು ಒಂದೇ ಸಂಸ್ಥೆಯ ದಾಖಲೆಗಳೆಂದು ನೀಡಿ ಟೆಂಡರ್‌ ಅಂಗೀಕಾರ ಸಂಸ್ಥೆಯನ್ನು ದಿಕ್ಕುತಪ್ಪಿಸಲಾಗಿದೆ. ಅಲ್ಲದೆ, ಟೆಂಡರ್‌ ಕರೆಯಲಾದ ವಸ್ತುಗಳ ಮೌಲ್ಯ ನಿರ್ಣಯದಲ್ಲಿ ಕೂಡ ಸರ್ಕಾರಕ್ಕೆ ಭಾರೀ ನಷ್ಟ ಉಂಟುಮಾಡಲಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ಟೆಂಡರ್‌ ಅಕ್ರಮದ ಬಗ್ಗೆ ನಿರ್ದೇಶಕಿ ಸುಮಂಗಲಾ ಅವರಿಗೆ ಕೇಳಿದ ವಿವರಣೆಗೆ ಅವರು ನೀಡಿದ ಉತ್ತರ ಕೂಡ ಸಮಂಜಸವಾಗಿಲ್ಲ. ಜೊತೆಗೆ ವ್ಯಾತ್ಯಾಸ ಮತ್ತು ಅಕ್ರಮಗಳ ಕುರಿತು ಒಪ್ಪಬಹುದಾದ ಯಾವ ವಿವರಣೆಯನ್ನೂ ಅವರು ನೀಡಿಲ್ಲ. ಆರಂಭಿಕ ಹಂತದ ಪರಿಶೀಲನೆಯ ವೇಳೆ 1.66 ಕೋಟಿಗೂ ಅಧಿಕ ನಷ್ಟವಾಗಿರುವುದು ಕಂಡುಬಂದಿದೆ. ರಾಜ್ಯಾದ್ಯಂತ ಡಿಎಸ್‌ಇಆರ್‌ಟಿ ಮತ್ತು ಇಲಾಖೆಯ ಇತರೆ ಕಚೇರಿಗಳ ಇ ತ್ಯಾಜ್ಯ ವಿಲೇವಾರಿಯ ಹೊಣೆಯನ್ನು ಹೊತ್ತಿದ್ದ ಅವರು ಇನ್ನಷ್ಟು ಅಕ್ರಮ ನಡೆಸಿರುವ ಸಾಧ್ಯತೆ ಇದೆ ಎಂದೂ ಇಲಾಖೆಯ ಮೂಲಗಳು ಹೇಳುತ್ತಿವೆ.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಇ ತ್ಯಾಜ್ಯ ವಿಲೇವಾರಿಯಿಂದ ಹಿಡಿದು ಪರೀಕ್ಷಾ ಪ್ರಶ್ನೆ ಪತ್ರಿಕೆ, ಉತ್ತರಪತ್ರಿಕೆಗಳ ಮುದ್ರಣ ಮತ್ತು ಸರಬರಾಜು, ಹಾಗೂ ಪಠ್ಯಪುಸ್ತಕ ಮುದ್ರಣವೂ ಸೇರಿದಂತೆ ನೂರಾರು ಕೋಟಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇದೀಗ ಇ- ತ್ಯಾಜ್ಯ ವಿಲೇವಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಡಿಎಸ್‌ಇಆರ್‌ಟಿ ನಿರ್ದೇಶಕಿಯ ಅಮಾನತು ನಡೆದಿದೆ.

Read More
Next Story