
ಹರೀಶ್ ಪೂಂಜಾ
Harish Poonja Speech | ಬ್ರಹ್ಮಕಲಶೋತ್ಸವದಲ್ಲಿ ಮುಸ್ಲಿಂಮರ ಬಗ್ಗೆ ಶಾಸಕ ಹರೀಶ್ ಪೂಂಜ ಅವಹೇಳನಕಾರಿ ಹೇಳಿಕೆ; ವಿಷಾದಿಸಿದ ದೇವಸ್ಥಾನ ಆಡಳಿತ ಮಂಡಳಿ
ದೇವಸ್ಥಾನದ ಅಧ್ಯಕ್ಷ ನಾಗಭೂಷಣ ರಾವ್ ಅವರ ಮನೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರ ಸಭೆ ನಡೆದಿದೆ. ಈ ಸಭೆಯಲ್ಲಿ ಉಪಸ್ಥಿತರಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ವಿಷಾದ ವ್ಯಕ್ತಪಡಿಸಿದರು.
ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿಯೇ ಸ್ಥಳೀಯ ಶಾಸಕ ಹರೀಶ್ ಪೂಂಜ ಗ್ರಾಮದ ಮುಸ್ಲಿಮರ ವಿರುದ್ಧ ಅತ್ಯಂತ ಅವಹೇಳನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಮುಖಂಡರ ಜತೆ ದೇವಸ್ಥಾನದ ಆಡಳಿತ ಮಂಡಳಿಯು ಸಭೆ ನಡೆಸಿ, ವಿಷಾದ ವ್ಯಕ್ತಪಡಿಸಿದ್ದಾರೆ.
'ನಿಮ್ಮ ಆಹ್ವಾನದ ಮೇರೆಗೆ ಮುಸ್ಲಿಂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ನಿಮ್ಮ ವೇದಿಕೆಯಲ್ಲಿ ಮುಸ್ಲಿಮರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದು, ಬೇಸರ ತಂದಿದೆ. ಟ್ಯೂಬ್‌ಲೈಟ್ ಹಾಗೂ ಡೀಸೆಲ್ ಕದ್ದ ಆರೋಪದ ಬಗ್ಗೆ ಸ್ಪಷ್ಟ ಸಾಕ್ಷ್ಯ ಇಲ್ಲದೆ, ನಮ್ಮ ಸಮುದಾಯದ ಮೇಲೆ ಆರೋಪ ಮಾಡಿರುವ ಬಗ್ಗೆ ಉತ್ತರ ನೀಡಬೇಕು' ಎಂದು ತೆಕ್ಕಾರಿನ ಮುಸ್ಲಿಂ ಒಕ್ಕೂಟದವರು ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು.
ಇದಕ್ಕೆ ಸ್ಪಷ್ಟಿಕರಣ ನೀಡಲು, ದೇವಸ್ಥಾನದ ಅಧ್ಯಕ್ಷ ನಾಗಭೂಷಣ ರಾವ್ ಅವರ ಮನೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರ ಸಭೆ ನಡೆದಿದೆ. ಈ ಸಭೆಯಲ್ಲಿ ಉಪಸ್ಥಿತರಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ಸೌಹಾರ್ದದಿಂದ ಇರೋಣ ಎಂಬ ಪತ್ರವನ್ನೂ ಮುಸ್ಲಿಂ ಸಮುದಾಯದವರಿಗೆ ನೀಡಿದರು.
ಸ್ಥಳೀಯ ಮುಸ್ಲಿಮರು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ಮಾಡಿದ್ದರು. ಮುನೀರ್ ಎಂಬವರು ಮರವನ್ನು ನೀಡಿದ್ದರು. ಅಬ್ಬಾಸ್ ಎಂಬವರು ವೇದಿಕೆ ನಿರ್ಮಿಸಲು ಸ್ಥಳವನ್ನು ನೀಡಿದ್ದರು. ಭಕ್ತಾದಿಗಳಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಟಿ.ಎಚ್ ಉಸ್ತಾದರ ಮಕ್ಕಳ ಒಡೆತನದ ಜಮೀನಿನಲ್ಲಿ ನೀಡಲಾಗಿತ್ತು. ನೀರಿನ ವ್ಯವಸ್ಥೆಗೆ ಮತ್ತು ಅನ್ನ ಸಂತರ್ಪಣೆಗೆ ಮುಸ್ಲಿಮರ ಜಾಗವನ್ನೇ ಉಪಯೋಗಿಸಲಾಗಿತ್ತು. ಇದಲ್ಲದೆ ಆರ್ಥಿಕವಾಗಿಯೂ ಗ್ರಾಮದ ಮುಸ್ಲಿಮರು ದೇವಸ್ಥಾನಕ್ಕೆ ಸಹಾಯವನ್ನು ನೀಡಿದ್ದರು, ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಸ್ಥಳೀಯ ಮುಸ್ಲಿಮರು ಬ್ಯಾನರ್ ಗಳನ್ನು ಅಳವಡಿಸಿದ್ದರ ಬಗ್ಗೆ ಮುಸ್ಲಿಂ ಒಕ್ಕೂಟದ ಪ್ರತಿನಿಧಿಗಳು ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ತಿಳಿಸಿದರು.
ಘಟನೆಯ ಹಿನ್ನೆಲೆ
ಮೇ 03ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಭಟ್ರಬೈಲು ತೆಕ್ಕಾರು ಇಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಮಾರೋಪ ವೇದಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡುತ್ತಾ ತೆಕ್ಕಾರಿನ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ, ದಿನ ಬೆಳಗಾದರೆ ಡೀಸೆಲ್ ಕದಿಯುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು.
ತೆಕ್ಕಾರು ಗ್ರಾಮದಲ್ಲಿ ಹಿಂದುಗಳದ್ದು 150 ಮನೆಗಳು, 1200 ಕುಟುಂಬಗಳಿರುವುದು ಮುಸ್ಲಿಮರದ್ದು. ಒಂದು ಹತ್ತು ವರ್ಷ ಕಳೆದರೆ 1200 ಇರುವ ಮುಸ್ಲಿಮರ ಸಂಖ್ಯೆ 600 ಕ್ಕೆ ಇಳಿವುದಿಲ್ಲ. ಇನ್ನು ಹತ್ತು ವರ್ಷ ಕಳೆದರೆ ತೆಕ್ಕಾರಿನ ಬ್ಯಾರಿಗಳ ಸಂಖ್ಯೆ 5000 ದಿಂದ 10000 ಆಗುತ್ತದೆ ಎಂದಿದ್ದರು.
ಊರಿನ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರಿಂದ ಮುಸ್ಲಿಂ ಮುಖಂಡ ಎಸ್ ಎಂ ಎಸ್ ಇಬ್ರಾಹಿಂ ಮುಸ್ಲಿಯಾರ್ ಎಂಬವರು ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದ್ದು. ಮೇ 20ರಂದು ವಿಚಾರಣೆ ನಡೆಯಲಿದೆ.