
ಕೇಂದ್ರ ಸರ್ಕಾರ ನೀಡುವ ಇವಿ ಬಸ್‌ಗಳಲ್ಲಿ ತಾಂತ್ರಿಕ ವೈಫಲ್ಯ:ಸಚಿವ ರಾಮಲಿಂಗಾರೆಡ್ಡಿ ಆಗ್ರಹ
ಈ ವರ್ಷ ಇವಿ ಬಸ್ಸುಗಳಿಂದ 380ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ನಡೆದಿವೆ. ಎನ್‌ಟಿಪಿಸಿ ಮಾನದಂಡದ ಪ್ರಕಾರ ಅಪಘಾತ ದರ 0.2 ಇರಬೇಕಾಗಿದ್ದರೂ, ಕೆಲವು ಕಡೆ 1.09 ರಿಂದ 2.0 ರಷ್ಟಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಿದ್ಯುತ್ ಚಾಲಿತ (ಇವಿ) ಬಸ್ಸುಗಳಲ್ಲಿನ ಗಂಭೀರ ತಾಂತ್ರಿಕ ದೋಷಗಳು ಮತ್ತು ಹೆಚ್ಚುತ್ತಿರುವ ಅಪಘಾತಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್ ಪೂರೈಕೆದಾರ ಕಂಪನಿಗಳು ಒಪ್ಪಂದದ ಮಾನದಂಡಗಳನ್ನು ಪಾಲಿಸದ ಕಾರಣ, ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ 'ಫೇಮ್' (FAME) ಯೋಜನೆಯಡಿ, ಸಾರಿಗೆ ನಿಗಮಗಳು 'ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC)' ಮಾದರಿಯಲ್ಲಿ ಸುಮಾರು 1,700 ಇವಿ ಬಸ್ಸುಗಳನ್ನು ಪಡೆದಿವೆ. ಈ ಒಪ್ಪಂದದ ಪ್ರಕಾರ, ಬಸ್ಸಿನ ನಿರ್ವಹಣೆ ಮತ್ತು ಚಾಲಕರ ಜವಾಬ್ದಾರಿಯನ್ನು ಪೂರೈಕೆದಾರ ಕಂಪನಿಯೇ ಹೊರಬೇಕು. ಸಾರಿಗೆ ನಿಗಮವು ಕೇವಲ ನಿರ್ವಾಹಕರನ್ನು ಒದಗಿಸಿ, ಪ್ರತಿ ಕಿಲೋಮೀಟರ್‌ಗೆ ನಿಗದಿತ ಮೊತ್ತವನ್ನು ಪಾವತಿಸುತ್ತದೆ. ಆದರೆ, ಈ ಕಂಪನಿಗಳು ಒಪ್ಪಂದದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಸಚಿವರು ಆರೋಪಿಸಿದ್ದಾರೆ.
ಆತಂಕಕಾರಿ ಅಂಕಿ-ಅಂಶಗಳು ಬಯಲು
ಸುದ್ದಿಗೋಷ್ಠಿಯಲ್ಲಿ ಇವಿ ಬಸ್ಸುಗಳ ವೈಫಲ್ಯದ ಅಂಕಿ-ಅಂಶಗಳನ್ನು ಮುಂದಿಟ್ಟ ಸಚಿವರು, ಡೀಸೆಲ್ ಬಸ್ಸುಗಳಿಗಿಂತ ಇವಿ ಬಸ್ಸುಗಳಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಈ ವರ್ಷವೊಂದರಲ್ಲೇ 100ಕ್ಕೂ ಹೆಚ್ಚು ಬ್ರೇಕ್ ಫೇಲ್ ಪ್ರಕರಣಗಳು ದಾಖಲಾಗಿವೆ ಹಾಗೂ ಕಳೆದ ಏಳು ತಿಂಗಳಲ್ಲಿ 700 ಬ್ಯಾಟರಿ ಸಂಬಂಧಿತ ಸಮಸ್ಯೆಗಳು ವರದಿಯಾಗಿದ್ದು, ಈ ವರ್ಷ 1700ಕ್ಕೂ ಹೆಚ್ಚು ಬ್ಯಾಟರಿ ಅನಾಹುತಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.
ಈ ವರ್ಷ ಇವಿ ಬಸ್ಸುಗಳಿಂದ 380ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ನಡೆದಿವೆ. ಎನ್‌ಟಿಪಿಸಿ ಮಾನದಂಡದ ಪ್ರಕಾರ ಅಪಘಾತ ದರ 0.2 ಇರಬೇಕಾಗಿದ್ದರೂ, ಕೆಲವು ಕಡೆ 1.09 ರಿಂದ 2.0 ರಷ್ಟಿದೆ, ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ. ಒಪ್ಪಂದ ಉಲ್ಲಂಘನೆಗಾಗಿ ಕಂಪನಿಗಳಿಗೆ ಈಗಾಗಲೇ 9 ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, ಚಾಲಕರು ಮೊಬೈಲ್ ಬಳಸಿದ ಪ್ರಕರಣಗಳಿಗೆ 3 ಕೋಟಿ ರೂಪಾಯಿ ದಂಡ ಹಾಕಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರಕ್ಕೆ ಪತ್ರ ಬರೆದು ಮನವಿ
"ಇವಿ ಬಸ್ಗಳ ಕಳಪೆ ನಿರ್ವಹಣೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಇಲಾಖೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ, ಬಸ್ಗಳ ಸುರಕ್ಷತಾ ಕ್ರಮಗಳನ್ನು ಖಾತರಿಪಡಿಸುವಂತೆ ಮತ್ತು ಪೂರೈಕೆದಾರ ಕಂಪನಿಗಳು ಒಪ್ಪಂದವನ್ನು ಪಾಲಿಸುವಂತೆ ಮಾಡಲು ಮಧ್ಯಪ್ರವೇಶಿಸಬೇಕೆಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ ಮತ್ತು ಶೀಘ್ರದಲ್ಲೇ ಅವರನ್ನು ಖುದ್ದಾಗಿ ಭೇಟಿಯಾಗಿ ಚರ್ಚಿಸುತ್ತೇನೆ," ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಇದೇ ವೇಳೆ, ಬಿಎಂಟಿಸಿಯ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2008-09ರಲ್ಲಿ 690 ಇದ್ದ ಅಪಘಾತಗಳ ಸಂಖ್ಯೆ, ಕಳೆದ ವರ್ಷ 209ಕ್ಕೆ ಮತ್ತು ಈ ವರ್ಷ ಇದುವರೆಗೆ ಕೇವಲ 92ಕ್ಕೆ ಇಳಿದಿದೆ. ಆದರೆ, ಇವಿ ಬಸ್ಸುಗಳ ಅಪಘಾತ ಹೆಚ್ಚಾಗುತ್ತಿರುವ ಕಾರಣ ಕೆಲವು ಟ್ರಿಪ್‌ಗಳನ್ನು ಕಡಿಮೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

