ಟೆಕ್ಕಿ ಅತುಲ್ ಸುಭಾಶ್ ಆತ್ಮಹತ್ಯೆ ಪ್ರಕರಣ: ಪೊಲೀಸರ ಕೈಗೆ ಸಿಗದ ಅತುಲ್ ಸುಭಾಷ್ ಪತ್ನಿ ಕುಟುಂಬ
ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಿಖಿತಾ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಮೂರು ದಿನದೊಳಗೆ ಹೇಳಿಕೆ ದಾಖಲಿಸುವಂತೆ ಸೂಚನೆ ನೀಡುವಂತೆ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ.
ಪತ್ನಿ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಎಐ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಆರೋಪಿಗಳಾದ ಆತನ ಪತ್ನಿ, ಅತ್ತೆ ತಮ್ಮ ಮನೆಯಿಂದ ಜಾಗ ಖಾಲಿ ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ತಂಡ ಗುರುವಾರ ಉತ್ತರ ಪ್ರದೇಶದ ಜಾನ್‌ಪುರ ತಲುಪಿದೆ. ಬೆಂಗಳೂರು ಪೊಲೀಸರ ತಂಡ ಅತುಲ್ ಸುಭಾಷ್ ಅವರ ಅತ್ತೆಯ ಮನೆಗೆ ತಲುಪಿ ವಿಚಾರಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಪೊಲೀಸ್ ತಂಡ ಬರುವ ಮುನ್ನವೇ ನಿಖಿತಾ ಸಿಂಘಾನಿಯಾ ಮನೆಯಿಂದ ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಬೆಂಗಳೂರು ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದಾಗ ಬೀಗ ನೇತಾಡುತ್ತಿರುವುದು ಕಂಡು ಬಂದಿದೆ. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಿಖಿತಾ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಮೂರು ದಿನದೊಳಗೆ ಹೇಳಿಕೆ ದಾಖಲಿಸುವಂತೆ ಸೂಚನೆ ನೀಡುವಂತೆ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ.
ಆರೋಪಿ ಪತ್ನಿಯ ಕುಟುಂಬ ಪರಾರಿ!
ಬಂಧನದ ಭೀತಿಯಿಂದ ನಿಖಿತಾ ಸಿಂಘಾನಿಯಾ ಅವರ ಕುಟುಂಬವು ಜಾನ್‌ಪುರದಲ್ಲಿರುವ ತಮ್ಮ ಮನೆಯನ್ನು ಖಾಲಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಸುಭಾಷ್ ಅವರ ಅತ್ತೆ ನಿಶಾ ಸಿಂಘಾನಿಯಾ ಗುರುವಾರ ಮುಂಜಾನೆ ಬೈಕ್‌ನಲ್ಲಿ ಮನೆಯಿಂದ ಹೊರಡುತ್ತಿರುವುದನ್ನು ಕಾಣಬಹುದು. ಆದರೆ ಸುಭಾಷ್ ಅವರ ಸೋದರ ಮಾವ ಅನುರಾಗ್ ಸಿಂಘಾನಿಯಾ ಅವರು ಪ್ಲಾನ್ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಅನುರಾಗ್ ಸಿಂಘಾನಿಯಾ ಕೂಡ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತುಲ್ ಸುಭಾಷ್ ಆತ್ಮಹತ್ಯೆ; ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದೇನು?
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರತ್ತಹಳ್ಳಿ ಠಾಣೆ ಇನ್ಸ್ಪೆಕ್ಟರ್ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಸಾಕ್ಷಿ ಸಂಗ್ರಹಿಸಲಾಗುತ್ತಿದೆ. ಇದುವರೆಗು ಯಾರ ಬಂಧನ ಆಗಿಲ್ಲ, ಶೋಧ ಕಾರ್ಯ ನಡೆಯತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಗುರುವಾರ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಸ್ಥಳೀಯ ಪೊಲೀಸರ ಸಹಾಯದಿಂದ ಅತುಲ್ ಸುಭಾಷ್ ಅವರ ಅತ್ತೆ ಮನೆಗೆ ಹೋಗಿದ್ದರು. ಆದರೆ, ಪೊಲೀಸರು ಬರುವ ಮುನ್ನವೇ ಅತುಲ್ ಅತ್ತೆ ಮನೆಯವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಮನೆಯ ಪ್ರವೇಶದ್ವಾರದಲ್ಲಿ ನೋಟಿಸ್ ಅಂಟಿಸಿದ್ದು, ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ನೋಟಿಸ್ನಲ್ಲಿ ಹೇಳಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರು ಡಿಸಿಪಿ ಶಿವಕುಮಾರ್ ಗುಣಾರೆ ಮಾತನಾಡಿ, ನಾವು ಸ್ಥಳೀಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶಂಕಿತರ ಪತ್ತೆಗೆ ಅವರು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.
ಬೆಂಗಳೂರಿನಲ್ಲಿ ಪ್ರತಿಭಟನೆ
ಅತುಲ್ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬೆಂಗಳೂರಿನ ಎಕೋಸ್ಪೇಸ್‌ನಲ್ಲಿ ಮೋಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದರು. ಫ್ಯಾಮಿಲಿ ಫೌಂಡೇಶನ್ ಆಶ್ರಯದಲ್ಲಿ ನಡೆದ ಕ್ಯಾಂಡಲ್ಲೈಟ್ ಪ್ರತಿಭಟನೆಯಲ್ಲಿ ಸಾಫ್ಟವೇರ್ ಉದ್ಯೋಗಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಗುರುವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಅತುಲ್ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ತತ್ಕ್ಷಣವೇ ಬಂಧಿಸಿ ವಿಚಾಣೆಗೆ ಒಳಪಡಿಸಬೇಕು. ಸಾವಿಗೆ ಕಾರಣವಾಗಿರುವ ಎಲ್ಲ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪುರುಷರ ಮೇಲೆ ನಡೆಯುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ತಕ್ಷಣ ಸಿಆರ್‌ಪಿಸಿ ಸೆಕ್ಷನ್ 498ಗೆ ತಿದ್ದುಪಡಿ ತರಬೇಕು. ತಕ್ಷಣವೇ ತಿದ್ದುಪಡಿ ತರುವುದು ಸಾಧ್ಯವಿಲ್ಲ, ಸಮಯ ಬೇಕು ಎಂದಾದರೆ ಅದನ್ನು ಹಿಂದಕ್ಕೆ ಪಡೆಯಬೇಕು. ಕಾನೂನಿಂದಾಗಿ ಪುರುಷರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಶೇಕಡಾ 95 ಪರುಷರೇ ಕೋರ್ಟ್‌ನಲ್ಲಿ ಕಾಣಸಿಗುತ್ತಾರೆ. ಮಹಿಳೆ ಹಾಗೂ ಪುರುಷರಿಗೆ ಸಾಮಾನ್ಯ ನ್ಯಾಯ ಸಿಗುವಂತೆ ತಿದ್ದುಪಡಿ ಮಾಡಿ ಹೊಸ ಕಾನೂನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವರದಕ್ಷಿಣೆ ಕಾಯಿದೆ ಕಾನೂನು ಬಹಳಷ್ಟು ದುರುಪಯೋಗ
ಭಾರತದಲ್ಲಿ ಮದುವೆ ಮತ್ತು ವಿಚ್ಛೇದನ ಕಾನೂನುಗಳು ಮಹಿಳೆ ಮತ್ತು ಪುರುಷರಿಗೆ ಸಮಾನವಾಗಿಲ್ಲ. ಮಹಿಳೆಯರು ಯಾವ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗುತ್ತದೆಯೋ ಅಂತಹ ಪ್ರಕರಣಗಳನ್ನು ಅವರು ದಾಖಲಿಸುತ್ತಾರೆ. ಆದರೆ ಪುರುಷರಿಗೆ ಇದು ಅಸಾಧ್ಯವಾಗಿದೆ. ಮಹಿಳೆಯರು ಪ್ರಕರಣವನ್ನು ಹಿಂದಕ್ಕೂ ತೆಗೆದುಕೊಳ್ಳಬಹುದು ಮತ್ತೂ ಕೂಡ ಪ್ರಕರಣ ದಾಖಲಿಸಬಹುದು. ಆದರೆ ಪುರುಷರಿಗೆ ಇದು ಅಸಾಧ್ಯವಾಗಿದೆ. ಪುರುಷರಿಗೆ ಇಂಥ ಕಾನೂನುಗಳೇ ಇಲ್ಲ. ಪುರುಷರಿಗೆ ಇಂಥ ಕಾನೂನು ಗಳು ಬೇಕು. ವರದಕ್ಷಿಣೆ ಕಾಯಿದೆ ಕಾನೂನು ಬಹಳಷ್ಟು ದುರುಪಯೋಗವಾಗುತ್ತಿದೆ. ಈ ಕಾಯಿದೆಯನ್ನು ಮತ್ತೆ ತಿದ್ದುಪಡಿಗೊಳಬೇಕು. ಇಂದು ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಭ್ರಷ್ಟಾಚಾರಗಳು ನಡೆಯುತ್ತಿವೆ. ಯಾವುದೇ ಎಫ್ ಐಆರ್ ಅನ್ನು ದಾಖಲಿಸಬೇಕಾದರೆ ಅವರು ಹಣವನ್ನು ಕೇಳುತ್ತಾರೆ. ರಾಜಕೀಯಕ್ಕಾಗಿ ಕೂಡ ಇಂದು ಪುರುಷರಿಗೆ ಯಾವುದೇ ಕಾನೂನುಗಳನ್ನು ಮಾಡುತ್ತಿಲ್ಲ. ಏಕೆಂದರೆ ಅವರಿಗೆ ಹೆಣ್ಣು ಮಕ್ಕಳ ಮತ ಮುಖ್ಯವಾಗಿರುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪುರುಷರ ಮೇಲೆ ದೌರ್ಜನ್ಯ
ಲಿಂಗ ಆಧಾರಿತ ಕಾನೂನಿಂದಾಗಿ ಇಂದು ಪುರುಷರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದು ಕೋರ್ಟ್ನಲ್ಲಿ 95% ಜನರು ಪುರುಷರನ್ನು ಕಾಣುತ್ತೀರಿ. ಪುರುಷರು ತಮ್ಮ ಕೆಲಸದೊಂದಿಗೆ ಕೋರ್ಟ್ ಕೇಸನ್ನು ಎದುರಿಸುತ್ತಾರೆ. ಮನೆ, ಮಕ್ಕಳು, ತಮ್ಮ ಅಪ್ಪ ಅಮ್ಮ ಹೀಗೆ ಹಲವಾರು ಜವಾಬ್ದಾರಿಗಳನ್ನು ಹೊರುತ್ತಿದ್ದಾರೆ. ಆದರೆ ಇಂದು ಪುರುಷರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪುರುಷರು ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಕೊಡಿ ಆದರೆ ಆತ ತಪ್ಪಿಸ್ಥನಿಲ್ಲದಿದ್ದರೆ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒಬ್ಬರು ಒತ್ತಾಯಿಸಿದರು.