
ಶಾಲಾ ಆವರಣದಲ್ಲಿ ನಾಯಿ ಲೆಕ್ಕಹಾಕುವುದೂ ಶಿಕ್ಷಕರ ಜವಾಬ್ದಾರಿ: ಮತ್ತೊಂದು ಹೊರೆ?
ಶಿಕ್ಷಕರು ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಬಿಸಿಯೂಟ ಯೋಜನೆ ನಿರ್ವಹಣೆ, ಜಾತಿ ಗಣತಿ, ಚುನಾವಣಾ ಕರ್ತವ್ಯ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಡೇಟಾ ಎಂಟ್ರಿಯಂತಹ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ
ಕರ್ನಾಟಕ ಸರ್ಕಾರ ಶಿಕ್ಷಕರಿಗೆ ಮತ್ತೊಂದು ಬೋಧನೇತರ ಜವಾಬ್ದಾರಿಯನ್ನು ವಹಿಸಿದೆ. ಈಗಾಗಲೇ ಬಿಸಿಯೂಟ ನಿರ್ವಹಣೆ, ಜಾತಿ ಗಣತಿ, ಮತ್ತು ಚುನಾವಣಾ ಕರ್ತವ್ಯಗಳಂತಹ ಅನೇಕ ಹೆಚ್ಚುವರಿ ಕೆಲಸಗಳ ಒತ್ತಡದಲ್ಲಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಈಗ ಶಾಲಾ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವ ಜವಾಬ್ದಾರಿಯೂ ಸೇರ್ಪಡೆಯಾಗಿದೆ.
ಶಾಲಾ ಆವರಣಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, 2025ರ ನವೆಂಬರ್ 7 ರಂದು ಸ್ವಯಂ ಪ್ರೇರಿತ ರಿಟ್ ಅರ್ಜಿ (ಸಂಖ್ಯೆ: 5/2025) ಮೂಲಕ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ತೀರ್ಪಿನಲ್ಲಿ ನಾಯಿಗಳ ನಿಯಂತ್ರಣದ ಜವಾಬ್ದಾರಿಯನ್ನು ನಗರ ಪಾಲಿಕೆ, ಪುರಸಭೆ ಅಥವಾ ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆಗಳೇ ವಹಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಆದರೆ, ರಾಜ್ಯ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ, ಈ ಕಾರ್ಯದ ಮೇಲುಸ್ತುವಾರಿ ಮತ್ತು ಸಮನ್ವಯದ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರ ಮೇಲೆ ಹೊರಿಸಲಾಗಿದೆ. ಮುಖ್ಯಶಿಕ್ಷಕರು, ಪ್ರಾಂಶುಪಾಲರು ಅಥವಾ ಹಿರಿಯ ಸಹಶಿಕ್ಷಕರನ್ನು 'ನೋಡಲ್ ಅಧಿಕಾರಿ'ಗಳನ್ನಾಗಿ ನೇಮಿಸುವಂತೆ ನಿರ್ದೇಶನ ನೀಡುವ ಮೂಲಕ ಪರೋಕ್ಷವಾಗಿ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗಿದೆ.
ಶಿಕ್ಷಕರ ಮೇಲಿನ ಹೊಸ ಕರ್ತವ್ಯಗಳು
ಸರ್ಕಾರದ ಹೊಸ ಸುತ್ತೋಲೆಯ ಪ್ರಕಾರ, ಶಾಲಾ ಆವರಣದಲ್ಲಿರುವ ನಾಯಿಗಳ ಸಂಖ್ಯೆಯನ್ನು ಗುರುತಿಸಿ ಗಣತಿ ಮಾಡುವುದು ಶಿಕ್ಷಕರ ಕೆಲಸವಾಗಿದೆ. ಹೀಗೆ ಗುರುತಿಸಿದ ನಾಯಿಗಳ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ, ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಶಿಕ್ಷಕರೇ ಮಾಡಬೇಕಿದೆ. ಜೊತೆಗೆ, ಶಾಲಾ ಆವರಣಕ್ಕೆ ನಾಯಿಗಳು ಬಾರದಂತೆ ತಡೆಯಲು ಭದ್ರವಾದ ಕಾಂಪೌಂಡ್ ನಿರ್ಮಾಣವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ಎಲ್ಲಾ ಪ್ರಕ್ರಿಯೆಗಳ ಕುರಿತು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನೂ ನೀಡಲಾಗಿದೆ.
ಬೋಧನೇತರ ಕೆಲಸಗಳ ಹೊರೆ ಮತ್ತು ಶಿಕ್ಷಕರ ಆತಂಕ
ಶಿಕ್ಷಕರು ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಬಿಸಿಯೂಟ ಯೋಜನೆ ನಿರ್ವಹಣೆ, ಜಾತಿ ಗಣತಿ, ಚುನಾವಣಾ ಕರ್ತವ್ಯ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಡೇಟಾ ಎಂಟ್ರಿಯಂತಹ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, "ನಮ್ಮ ಮೂಲ ಕರ್ತವ್ಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ಆದರೆ ಈಗ ನಾಯಿ ಎಣಿಸುವುದು, ಸಭೆ ಕರೆಯುವುದು ಮತ್ತು ವರದಿ ಬರೆಯುವುದೇ ನಮ್ಮ ಪ್ರಮುಖ ಕೆಲಸವಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಸಹಕರಿಸದಿದ್ದರೆ ಅಂತಿಮವಾಗಿ ಆ ತಪ್ಪು ನಮ್ಮ ತಲೆಗೆ ಬರುತ್ತದೆ," ಎಂದು ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ ಬೀದಿ ನಾಯಿಗಳ ನಿಯಂತ್ರಣ ಮತ್ತು ಆಶ್ರಯ ತಾಣಗಳ ನಿರ್ವಹಣೆ ಕಾನೂನುಬದ್ಧವಾಗಿ ಸ್ಥಳೀಯ ಆಡಳಿತಗಳ ಕರ್ತವ್ಯ. ಆದರೆ, 'ಸಮನ್ವಯಕಾರರು' ಎಂಬ ಹೆಸರಿನಲ್ಲಿ ಶಿಕ್ಷಕರನ್ನು ಈ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಅವರ ಮೂಲ ಬೋಧನಾ ಕರ್ತವ್ಯಕ್ಕೆ ಅಡ್ಡಿಯಾಗಲಿದೆ. ಇಂತಹ ಬೋಧನೇತರ ಕೆಲಸಗಳ ಹೊರೆಯಿಂದಾಗಿ ಅಂತಿಮವಾಗಿ ಶೈಕ್ಷಣಿಕ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಟೀಕೆಗಳು ಕೇಳಿಬರುತ್ತಿವೆ.

