
ಶಿಕ್ಷಕ ಇಮ್ತಿಯಾಜ್ ಹತ್ಯೆ ಪ್ರಕರಣ: ಪತ್ನಿ ಲಕ್ಷ್ಮಿ. ಪ್ರಿಯಕರನಿಗೆ ಮರಣದಂಡನೆ
ಪ್ರಕರಣದ ತನಿಖೆ ನಡೆಸಿದ್ದ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು (ಆಗಿನ ಇನ್ಸ್‌ಪೆಕ್ಟರ್‌ಗಳಾದ ಪ್ರಭು ಬಿ. ಸೂರಿನ್ ಮತ್ತು ಟಿ.ಕೆ. ಚಂದ್ರಶೇಖರ್) ಮೂವರನ್ನೂ ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಮರಣದಂಡನೆ ವಿಧಿಸಿ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
2016ರ ಜುಲೈ 7 ರಂದು ಭದ್ರಾವತಿಯ ಜನ್ನಾಪುರದಲ್ಲಿ ಈ ಘಟನೆ ನಡೆದಿತ್ತು. ಶಿಕ್ಷಕ ಇಮ್ತಿಯಾಜ್ ಅಹಮದ್ ಅವರನ್ನು ಕೊಲೆ ಮಾಡಿ, ಮೃತದೇಹವನ್ನು ನೈಲಾನ್ ಹಗ್ಗದಿಂದ ಕಟ್ಟಿ ಭದ್ರಾ ನದಿಗೆ ಎಸೆಯಲಾಗಿತ್ತು. ಈ ಕೃತ್ಯ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಇಮ್ತಿಯಾಜ್ ಹಾಗೂ ಲಕ್ಷ್ಮಿ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಶಿಕ್ಷಕಿಯಾಗಿದ್ದ ಪತ್ನಿ ಲಕ್ಷ್ಮಿ (29), ತನ್ನ ಬಾಲ್ಯದ ಸ್ನೇಹಿತನಾದ ಚಾಲಕ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ (30) ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಸಂಬಂಧಕ್ಕೆ ಪತಿ ಇಮ್ತಿಯಾಜ್ ವಿರೋಧ ವ್ಯಕ್ತಪಡಿಸಿದ್ದೇ ಕೊಲೆಗೆ ಕಾರಣವಾಗಿತ್ತು.
ಪತಿಯನ್ನು ಮುಗಿಸಲು ನಿರ್ಧರಿಸಿದ ಲಕ್ಷ್ಮಿ, ಪ್ರಿಯಕರ ಕೃಷ್ಣಮೂರ್ತಿ ಹಾಗೂ ಆತನ ಸ್ನೇಹಿತ ಶಿವರಾಜ್ ಅಲಿಯಾಸ್ ಶಿವು (32) ಜೊತೆ ಸೇರಿ ಸಂಚು ರೂಪಿಸಿದ್ದಳು. ಯೋಜನೆಯಂತೆ, ಜನ್ನಾಪುರದ ಮನೆಯಲ್ಲಿ ಇಮ್ತಿಯಾಜ್ ಅವರ ತಲೆಗೆ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದರು.
ತನಿಖೆ ಮತ್ತು ತೀರ್ಪು
ಪ್ರಕರಣದ ತನಿಖೆ ನಡೆಸಿದ್ದ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು (ಆಗಿನ ಇನ್ಸ್‌ಪೆಕ್ಟರ್‌ಗಳಾದ ಪ್ರಭು ಬಿ. ಸೂರಿನ್ ಮತ್ತು ಟಿ.ಕೆ. ಚಂದ್ರಶೇಖರ್) ಮೂವರನ್ನೂ ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೊದಲನೇ ಆರೋಪಿ ಲಕ್ಷ್ಮಿ ಮತ್ತು ಎರಡನೇ ಆರೋಪಿ ಕೃಷ್ಣಮೂರ್ತಿಗೆ ಮರಣದಂಡನೆ ವಿಧಿಸಿದರು. ಕೊಲೆಗೆ ಸಹಕರಿಸಿದ ಮೂರನೇ ಆರೋಪಿ ಶಿವರಾಜ್‌ಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.