
Explainer: ಬೆಂಗಳೂರಿನಲ್ಲಿ ಹರ್ಕ್ಯುಲಸ್‌ಗೆ ವಿಶೇಷ 'ಆಸ್ಪತ್ರೆ': ರಕ್ಷಣಾ ವಲಯದಲ್ಲಿ ಕರ್ನಾಟಕದ ಹೊಸ ಮೈಲಿಗಲ್ಲು
ಅಮೆರಿಕ ನಿರ್ಮಿತ C-130J ಸೂಪರ್ ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನ ನಿರ್ವಹಣೆಗಾಗಿ ಹೊಸ ಘಟಕವೊಂದಕ್ಕೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಲಾಕ್ಹೀಡ್ ಮಾರ್ಟಿನ್ ಬೆಂಗಳೂರಿನಲ್ಲಿ ಶಿಲಾನ್ಯಾಸ ನಡೆಸಿವೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಮತ್ತೊಂದು ಪ್ರಮುಖ ಸಾಧನೆಯನ್ನು ಬರೆಯಲು ಸಿದ್ಧವಾಗಿದೆ. ಭಾರತೀಯ ವಾಯುಪಡೆಯ ಬೆನ್ನೆಲುಬಿನಂತಿರುವ ಅಮೆರಿಕ ನಿರ್ಮಿತ C-130J ಸೂಪರ್ ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (MRO) ಇನ್ನುಮುಂದೆ ದೇಶದಲ್ಲೇ ನಡೆಯಲಿದೆ.
ಸಿ‑130 MRO ಸೌಲಭ್ಯವು ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಸಮೀಪದ ಭಟ್ರಮಾರೇನಹಳ್ಳಿಯಲ್ಲಿ ಸ್ಥಾಪಿತವಾಗಿದೆ. ಈ ಕೇಂದ್ರದಲ್ಲಿ ಡೆಪೋ ಮಟ್ಟದ ಮತ್ತು ಭಾರೀ ನಿರ್ವಹಣೆ, ಘಟಕಗಳ ದುರಸ್ತಿ, ಕೂಲಂಕುಷ ಓವರ್‌ಹಾಲ್, ರಚನಾತ್ಮಕ ಪರಿಶೀಲನೆ ಮತ್ತು ಪರೀಕ್ಷೆ, ರಚನಾತ್ಮಕ ಪುನರ್ ಸ್ಥಾಪನೆ ಹಾಗೂ ಎವಿಯಾನಿಕ್ಸ್ ಅಪ್‌ಗ್ರೇಡ್‌ಗಳನ್ನು ನಡೆಸಲಾಗುತ್ತದೆ. ಜೊತೆಗೆ, ಭಾರತೀಯ ಎಂಜಿನಿಯರ್‌ಗಳು ಮತ್ತು ನಿರ್ವಹಣಾ ತಂತ್ರಜ್ಞರಿಗೆ ವಿಸ್ತೃತ ತರಬೇತಿ ನೀಡಲಾಗುವುದು ಮತ್ತು C‑130 ಪೂರೈಕೆ ಸರಪಳಿಯ ದಿಕ್ಕಿನಲ್ಲಿ ಭಾರತೀಯ ಪೂರೈಕೆದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ.
C-130J ಸೂಪರ್ ಹರ್ಕ್ಯುಲಸ್: ಭಾರತೀಯ ವಾಯುಪಡೆಯ ಕಣ್ಮಣಿ
C-130J ಸೂಪರ್ ಹರ್ಕ್ಯುಲಸ್ ಕೇವಲ ಸಾಮಾನ್ಯ ಸಾರಿಗೆ ವಿಮಾನವಲ್ಲ. ಇದು ಜಗತ್ತಿನಲ್ಲೇ ಅತ್ಯಂತ ವಿಶ್ವಾಸಾರ್ಹ ಮತ್ತು ಬಹುಮುಖಿ ಮಿಲಿಟರಿ ವಿಮಾನಗಳಲ್ಲಿ ಒಂದು. ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಂಪನಿ ತಯಾರಿಸುವ ಈ ವಿಮಾನವು ಭಾರೀ ಸರಕು, ಸೈನಿಕರು, ಯುದ್ಧ ಸಾಮಗ್ರಿಗಳನ್ನು ಎತ್ತರದ ಪರ್ವತ ಪ್ರದೇಶಗಳಿಂದ ಹಿಡಿದು ಮರುಭೂಮಿಯವರೆಗೆ ಎಲ್ಲೆಡೆಯೂ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಭಾರತೀಯ ವಾಯುಪಡೆಯು 2008ರಿಂದಲೇ ಈ ವಿಮಾನಗಳನ್ನು ಬಳಸುತ್ತಿದೆ. ಲಡಾಖ್‌ನಂತಹ ಗಡಿ ಪ್ರದೇಶಗಳಿಗೆ ಸೈನಿಕರು ಮತ್ತು ಸಾಮಗ್ರಿಗಳನ್ನು ಸಾಗಿಸುವುದು, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳು, ವಿಶೇಷ ಕಾರ್ಯಾಚರಣೆಗಳಲ್ಲಿ ಈ ವಿಮಾನಗಳು ಪ್ರಮುಖ ಪಾತ್ರ ವಹಿಸುತ್ತವೆ. 2011ರಲ್ಲಿ ಲಿಬಿಯಾದಿಂದ ಭಾರತೀಯರನ್ನು ರಕ್ಷಿಸಿದ ಆಪರೇಷನ್ ಸೇಫ್ ಹೋಮ್‌ಕಮಿಂಗ್, 2013ರ ಉತ್ತರಾಖಂಡ ಪ್ರವಾಹ ರಕ್ಷಣಾ ಕಾರ್ಯಾಚರಣೆ, ಕೋವಿಡ್ ಸಂಕಷ್ಟದ ಸಮಯದಲ್ಲಿ ಆಕ್ಸಿಜನ್ ಟ್ಯಾಂಕರ್‌ಗಳ ಸಾಗಣೆ ಎಲ್ಲೆಡೆಯೂ ಈ ವಿಮಾನಗಳು ತಮ್ಮ ಅಪಾರ ಸಾಮರ್ಥ್ಯವನ್ನು ಮರೆದಿವೆ.
MRO ಎಂದರೇನು? ಇದರ ಮಹತ್ವವೇಕೆ?
MRO ಎಂದರೆ Maintenance, Repair and Overhaul. ಅಂದರೆ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ. ಯಾವುದೇ ವಿಮಾನವೂ ನಿರಂತರವಾಗಿ ಹಾರಲು ಸಾಧ್ಯವಿಲ್ಲ. ನಿಯಮಿತ ಅಂತರದಲ್ಲಿ ಅದರ ಎಲ್ಲಾ ಭಾಗಗಳನ್ನು ಪರಿಶೀಲಿಸಬೇಕು, ಹಳೆಯ ಭಾಗಗಳನ್ನು ಬದಲಾಯಿಸಬೇಕು, ಎಂಜಿನ್‌ಗಳನ್ನು ಪರೀಕ್ಷಿಸಬೇಕು. ಮಿಲಿಟರಿ ವಿಮಾನಗಳ ವಿಷಯದಲ್ಲಿ ಈ ಪ್ರಕ್ರಿಯೆ ಇನ್ನೂ ಹೆಚ್ಚು ಕಟ್ಟುನಿಟ್ಟಾಗಿರುತ್ತದೆ.
ವಿದೇಶಗಳೀಗೆ ಹೋಗಬೇಕಾಗಿತ್ತು
ಇಲ್ಲಿಯವರೆಗೆ ಭಾರತದ C-130J ವಿಮಾನಗಳು ದುರಸ್ತಿ ಅಥವಾ ನಿರ್ವಹಣೆ ಕೆಲಸಕ್ಕಾಗಿ ಅಮೆರಿಕ ಅಥವಾ ಇತರ ದೇಶಗಳಿಗೆ ಹೋಗಬೇಕಾಗಿತ್ತು. ಇದರಲ್ಲಿ ಸಮಯ ವ್ಯರ್ಥ, ಭಾರೀ ವೆಚ್ಚ ಮತ್ತು ಆಯಕಟ್ಟಿನ ದೃಷ್ಟಿಯಿಂದ ಅನಾನುಕೂಲತೆ ಎಲ್ಲವೂ ಇತ್ತು. ವಿಶೇಷವಾಗಿ ಗಡಿಯಲ್ಲಿ ಉದ್ವಿಗ್ನತೆ ಇರುವ ಸಂದರ್ಭದಲ್ಲಿ ವಿಮಾನ ವಿದೇಶದಲ್ಲಿ ದುರಸ್ತಿಯಲ್ಲಿ ಇದ್ದರೆ, ಅದು ದೇಶದ ರಕ್ಷಣಾ ಸನ್ನದ್ಧತೆಯ ಮೇಲೆ ಪರಿಣಾಮ ಬೀರುತ್ತದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ MRO ಘಟಕ ಸ್ಥಾಪನೆಯಾಗುವುದು ಮಹತ್ವದ್ದಾಗಿದೆ. ಇದರಿಂದ ವಿಮಾನಗಳ ನಿರ್ವಹಣೆ ವೇಗವಾಗಿ ಮತ್ತು ಸುರಕ್ಷಿತವಾಗಿ ದೇಶದಲ್ಲೇ ನಡೆಯಲು ಸಾಧ್ಯ.
ಬೆಂಗಳೂರಿನಲ್ಲಿ ಏನು ನಡೆಯಲಿದೆ?
ಬೆಂಗಳೂರಿನ ಮೊಂಡಾ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿರುವ ಈ MRO ಸೌಲಭ್ಯದಲ್ಲಿ ವಿಮಾನದ ಸಂಪೂರ್ಣ ಆರೈಕೆ ನಡೆಯಲಿದೆ. ಇದು ಕೇವಲ ಸಣ್ಣ ರಿಪೇರಿ ಕೇಂದ್ರವಲ್ಲ, ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನಾ ಮತ್ತು ತರಬೇತಿ ಕೇಂದ್ರವಾಗಲಿದೆ.
ಈ ಘಟಕದಲ್ಲಿ ನಡೆಯುವ ಪ್ರಮುಖ ಕೆಲಸಗಳು
ಭಾರೀ ನಿರ್ವಹಣೆ: ವಿಮಾನದ ಎಲ್ಲಾ ಭಾಗಗಳನ್ನು ಎಂಜಿನ್, ಲ್ಯಾಂಡಿಂಗ್ ಗೇರ್, ರೆಕ್ಕೆಗಳು, ಎಲೆಕ್ಟ್ರಾನಿಕ್ ಸಿಸ್ಟಮ್‌ಗಳು - ಸಂಪೂರ್ಣವಾಗಿ ಪರಿಶೀಲಿಸಿ ಅಗತ್ಯವಿದ್ದರೆ ಬದಲಾಯಿಸುವುದು. ರಚನಾತ್ಮಕ ಪರಿಶೀಲನೆ: ದೀರ್ಘಕಾಲ ಹಾರಾಟದಿಂದ ವಿಮಾನದ ದೇಹದಲ್ಲಿ (ಫ್ಯೂಸೆಲೇಜ್) ಬಿರುಕುಗಳು ಬಂದಿರುತ್ತವೆಯೇ ಎಂಬುದನ್ನು ವಿಶೇಷ ಸಾಧನಗಳ ಮೂಲಕ ಪರೀಕ್ಷಿಸಿ ಸರಿಪಡಿಸುವುದು.
ಘಟಕ ದುರಸ್ತಿ: ವಿಮಾನದ ಸಾವಿರಾರು ಸಣ್ಣ ಭಾಗಗಳನ್ನು ರಿಪೇರಿ ಮಾಡುವುದು. ಇದರಲ್ಲಿ ಹೈಡ್ರಾಲಿಕ್ ಸಿಸ್ಟಂ, ಎಲೆಕ್ಟ್ರಿಕಲ್ ವೈರಿಂಗ್, ನ್ಯಾವಿಗೇಶನ್ ಸಿಸ್ಟಂಗಳು ಸೇರಿವೆ. ಕೂಲಂಕಷ ಪರೀಕ್ಷೆ (Overhaul) ನಡೆಸಲಾಗುವುದು. ಪ್ರತಿ ಕೆಲವು ವರ್ಷಗಳಿಗೊಮ್ಮೆ ವಿಮಾನವನ್ನು ಸಂಪೂರ್ಣವಾಗಿ ಬಿಚ್ಚಿ ಮತ್ತೆ ಜೋಡಿಸುವ ಪ್ರಕ್ರಿಯೆ. ಇದು 'ವಿಮಾನದ ಶಸ್ತ್ರಚಿಕಿತ್ಸೆ' ಎಂದು ಕರೆಯಬಹುದು.
ತರಬೇತಿ: ಭಾರತೀಯ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಗೆ C-130J ವಿಮಾನದ ನಿರ್ವಹಣೆಯಲ್ಲಿ ಪರಿಣಿತರಾಗಲು ವಿಶೇಷ ತರಬೇತಿ ನೀಡಲಾಗುತ್ತದೆ.
ಹೊಸ ಘಟಕದ ಬಗ್ಗೆ ಗಣ್ಯರ ಪ್ರತಿಕ್ರಿಯೆ
ಬೆಂಗಳೂರಿಗೇ ಯಾಕೆ?
ಬೆಂಗಳೂರು ಈಗಾಗಲೇ 'ಭಾರತದ ಏರೋಸ್ಪೇಸ್ ರಾಜಧಾನಿ' ಎಂದು ಪ್ರಸಿದ್ಧವಾಗಿದೆ. ಇಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಇಸ್ರೋ, ಡಿಆರ್‌ಡಿಒ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿವೆ. ವಿಮಾನಯಾನ ಕ್ಷೇತ್ರಕ್ಕೆ ಬೇಕಾದ ಪರಿಣಿತ ಎಂಜಿನಿಯರ್‌ಗಳು, ತಾಂತ್ರಿಕ ಸಂಸ್ಥೆಗಳು ಮತ್ತು ಪೂರಕ ಕೈಗಾರಿಕೆಗಳು ಬೆಂಗಳೂರಿನಲ್ಲಿ ಹೇರಳವಾಗಿವೆ. ಅದಲ್ಲದೆ, ಬೋಯಿಂಗ್ ಮತ್ತು ಏರ್‌ಬಸ್‌ನಂತಹ ಜಾಗತಿಕ ಕಂಪನಿಗಳು ತಮ್ಮ ಭಾರತೀಯ ಕೇಂದ್ರಗಳನ್ನು ಬೆಂಗಳೂರಿನಲ್ಲಿಯೇ ಹೊಂದಿವೆ. ಈ ಹಿನ್ನೆಲೆಯಲ್ಲಿ ಲಾಕ್‌ಹೀಡ್ ಮಾರ್ಟಿನ್ ಬೆಂಗಳೂರನ್ನು ಆರಿಸಿರುವುದು ಸ್ವಾಭಾವಿಕ.
ಭಾರತಕ್ಕೆ ಆಗುವ ಲಾಭಗಳು
ಸ್ವಾವಲಂಬನೆ: ಇಲ್ಲಿಯವರೆಗೆ ವಿಮಾನ ನಿರ್ವಹಣೆಗಾಗಿ ವಿದೇಶಗಳ ಮೇಲೆ ಅವಲಂಬಿತರಾಗಿದ್ದ ಭಾರತ, ಈಗ ತನ್ನ ವಿಮಾನಗಳನ್ನು ತಾನೇ ನೋಡಿಕೊಳ್ಳಬಲ್ಲದು.
ಸಮಯ ಉಳಿತಾಯ: ವಿಮಾನವೊಂದು ವಿದೇಶಕ್ಕೆ ಹೋಗಿ ಮರಳಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು. ಈಗ ದೇಶದಲ್ಲೇ ವಾರಗಳಲ್ಲಿ ಕೆಲಸ ಮುಗಿಯುತ್ತದೆ.
ಉದ್ಯೋಗ ಸೃಷ್ಟಿ: ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ ಏರೋನಾಟಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಿಗೆ ಅವಕಾಶ.
ತಂತ್ರಜ್ಞಾನ ಹಸ್ತಾಂತರ: ಲಾಕ್‌ಹೀಡ್ ಮಾರ್ಟಿನ್‌ನಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಕಲಿಯುವ ಅವಕಾಶ ಭಾರತೀಯ ಎಂಜಿನಿಯರ್‌ಗಳಿಗೆ ಸಿಗಲಿದೆ.
ಜಾಗತಿಕ ಹಬ್: ಭವಿಷ್ಯದಲ್ಲಿ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳು ಬಳಸುವ C-130 ವಿಮಾನಗಳೂ ಬೆಂಗಳೂರಿಗೆ ಬಂದು ದುರಸ್ತಿ ಮಾಡಿಸಿಕೊಳ್ಳಬಹುದು. ಆಗ ವಿದೇಶಿ ವಿನಿಮಯ ಆದಾಯವೂ ದೇಶಕ್ಕೆ ಬರುತ್ತದೆ.
ಯಾವಾಗ ಕಾರ್ಯಾರಂಭ?
ಲಾಕ್‌ಹೀಡ್ ಮಾರ್ಟಿನ್‌ನ ಅಧಿಕಾರಿಗಳು ಹೇಳಿರುವ ಪ್ರಕಾರ, ಈ MRO ಸೌಲಭ್ಯದ ನಿರ್ಮಾಣ 2026ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 2027ರ ಆರಂಭದಲ್ಲಿ ಮೊದಲ C-130J ವಿಮಾನವು ಅಧಿಕೃತ MRO ಕಾರ್ಯಾಚರಣೆಗಾಗಿ ಈ ಘಟಕಕ್ಕೆ ಬರುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ C-130J MRO ಘಟಕ ಸ್ಥಾಪನೆಯಾಗುವುದು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ವಿಷಯ. ಇದು 'ಮೇಕ್ ಇನ್ ಇಂಡಿಯಾ' ಕನಸು 'ಮೇಂಟೈನ್ ಇನ್ ಇಂಡಿಯಾ'ವಾಗಿ ಬದಲಾಗುತ್ತಿರುವ ಶುಭ ಸಂಕೇತ. ರಕ್ಷಣಾ ಸನ್ನದ್ಧತೆ, ತಾಂತ್ರಿಕ ಸ್ವಾವಲಂಬನೆ ಮತ್ತು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಇದು ಒಂದು ಕ್ರಾಂತಿಕಾರಿ ಹೆಜ್ಜೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ಸರಕು ಸಾಗಣೆ ವಿಮಾನಗಳು ಇನ್ನುಮುಂದೆ ನಮ್ಮ ಬೆಂಗಳೂರಿನಲ್ಲಿಯೇ 'ಚಿಕಿತ್ಸೆ' ಪಡೆಯಲಿವೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ.

