ನಟ ಅಂಬರೀಶ್‌ಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ತಾರಾ ಮನವಿ
x

ನಟ ಅಂಬರೀಶ್‌ಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ತಾರಾ ಮನವಿ

ನಟಿ ತಾರಾ ಅನುರಾಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ, ನಟ ಅಂಬರೀಶ್‌ಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡುವಂತೆ ಕೋರಿದರು.


Click the Play button to hear this message in audio format

ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಮತ್ತು ಹಿರಿಯ ನಟಿ ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ನಟ, ರಾಜಕಾರಣಿ ರೆಬಲ್‌ಸ್ಟಾರ್‌ ಅಂಬರೀಶ್‌ ಅವರಿಗೂ ಸಹ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಈ ಸಂಬಂಧ ನಟಿ ತಾರಾ ಅನುರಾಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅಂಬರೀಶ್‌ ಅವರು ಸಹ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಮನೋಜ್ಞ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಡಾ.ವಿಷ್ಣುವರ್ಧನ್‌ ಮತ್ತು ಬಿ.ಸರೋಜಾ ದೇವಿಯವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಸಂತಸದ ವಿಷಯ. ಅದೇ ರೀತಿ ಅಂಬರೀಶ್‌ ಅವರಿಗೂ ಕೂಡ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಅಭಿಮಾನಿಗಳ ಪರವಾಗಿ ಕೋರಿದರು. ಈ ಮನವಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ತಾರಾ ಬರೆದ ಪತ್ರದಲ್ಲಿ ಏನಿದೆ?

ʼನಟ, ರಾಜಕಾರಣಿ ಅಂಬರೀಷ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎನ್ನುವುದು ಎಲ್ಲ ಕಲಾವಿದರ ಹಾಗೂ ಅಭಿಮಾನಿಗಳ ಕೋರಿಕೆ. ತಾವು ಅವರನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದೀರಿ. ಅವರಿಗೆ ಸಲ್ಲಬೇಕಾದ ಸನ್ಮಾನ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

1952ರಲ್ಲಿ ಮಳವಳ್ಳಿಯಲ್ಲಿ ಜನಿಸಿದ ಅಂಬರೀಷ್‌ ಅವರ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್‌. 1955ರಲ್ಲಿ ತೆರೆಕಂಡ ʼಶಿವಶರಣೆ ನಂಬೆಕ್ಕʼ ಚಿತ್ರದಲ್ಲಿ ಬಾಲಕಲಾವಿದನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಂಬರೀಷ್‌ ಬಳಿಕ 1972ರಲ್ಲಿ ರಿಲೀಸ್‌ ಆದ ʼನಾಗರಹಾವುʼ ಸಿನಿಮಾದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದರು. ಅದರಲ್ಲಿನ ಜಲೀಲ ಪಾತ್ರ ಇಂದಿಗೂ ಜನಪ್ರಿಯ. ಕನ್ನಡ ಜತೆಗೆ ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದ ಅವರು ಪೊಲೀಸ್‌ ಪಾತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಅಂಬರೀಷ್‌ ಅವರನ್ನು ಹುಡುಕಿಕೊಂಡು ಇದುವರೆಗೆ ಹಲವು ಪ್ರಶಸ್ತಿಗಳು ಬಂದಿವೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್‌ ಅವಾರ್ಡ್‌, ಎನ್‌ಟಿಆರ್‌ ನ್ಯಾಶನಲ್‌ ಅವಾರ್ಡ್‌, ಆಂಧ್ರ ಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಡಾ. ವಿಷ್ಣುವರ್ಧನ್‌ ಪ್ರಶಸ್ತಿ ಮುಂತಾದ ಗೌರವ ಅಂಬರೀಷ್‌ ಅವರಿಗೆ ಸಂದಿದೆ. ವಿಷ್ಣುವರ್ಧನ್‌, ಡಾ. ರಾಜ್‌ ಕುಮಾರ್‌ ಸಮಕಾಲೀನವರಾಗಿದ್ದ ಅಂಬರೀಷ್‌ ಅಭಿನಯದ ಕೊನೆ ಚಿತ್ರ 2019ರಲ್ಲಿ ತೆರೆಕಂಡ ʼಕುರುಕ್ಷೇತ್ರʼ. ದರ್ಶನ್‌ ನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಅಂಬರೀಷ್‌ ಅವರು ಭೀಷ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ʼಡ್ರಾಮಾʼ, ʼಬುಲ್‌ಬುಲ್‌ʼ, ʼಅಂಬರೀಷʼ, ʼದೊಡ್ಮನೆ ಹುಡ್ಗʼ, ʼಅಂಬಿ ನಿಂಗ್‌ ವಯಸ್ಸಾಯ್ತೋʼ ಮೊದಲಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. 1994ರಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಅಂಬರೀಷ್‌ ಸಂಸದ, ಸಚಿವರಾಗಿಯೂ ಆಯ್ಕೆಯಾಗಿದ್ದರು. ಅಂಬರೀಷ್‌ 2018ರ ನವೆಂಬರ್ 24ರಂದು ತಮ್ಮ 66ನೇ ವರ್ಷದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೂ ಮರಣೋತ್ತರವಾಗಿ ಕರ್ನಾಟಕ ಪ್ರಶಸ್ತಿ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.



Read More
Next Story