
ಕನ್ನಡಿಗ ಸೋಮಣ್ಣಗೆ ಜಲಶಕ್ತಿ ಖಾತೆಗೆ ತ.ನಾಡು ಕ್ಯಾತೆ
ಕನ್ನಡಿಗ ವಿ. ಸೋಮಣ್ಣ ಅವರು ಜಲಶಕ್ತಿ ಸಚಿವರಾಗಿರುವುದರಿಂದ ತಾರತಮ್ಯವಾಗಲಿದೆ ಎಂಬ ತಮಿಳುನಾಡು ವಾದವನ್ನುತಳ್ಳಿ ಹಾಕಿರುವ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರೆಂದರೆ ಇಡೀ ದೇಶಕ್ಕೆ ಸಚಿವರು, ರಾಜ್ಯಕ್ಕಲ್ಲ ಎಂದು ಹೇಳಿದ್ದಾರೆ.
ಸೋಮಣ್ಣ ಅವರು ಜಲಶಕ್ತಿ ಸಚಿವರಾಗಿರುವುದರಿಂದ ತಾರತಮ್ಯವಾಗಲಿದೆ ಎಂಬ ತಮಿಳುನಾಡು ಕಾಂಗ್ರೆಸ್ ಪ್ರಧಾನಿಗೆ ಬರೆದಿರುವ ಪತ್ರದ ಬಗ್ಗೆ ಕೇಳಿದ ಪತ್ರಕತರ್ತರಿಗೆ ಅವರು ಉತ್ತರಿಸಿದರು. “ಒಮ್ಮೆ ಸಚಿವರಾದರೆ ಅವರು, ಇಡೀ ದೇಶಕ್ಕೆ ಸಚಿವರಾಗುತ್ತಾರೆಯೇ ಹೊರತು ಅವರು ಪ್ರತಿನಿಧಿಸುವ ರಾಜ್ಯಕ್ಕೆ ಸಚಿವರಾಗುವುದಿಲ್ಲ, ಎಂದು ಹೇಳಿದರು.
“ಯಾವುದೇ ರಾಜಕಾರಣಿಯಾದರೂ ತಮ್ಮ ರಾಜ್ಯ ಹಾಗೂ ಊರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದು ಸಹಜ,. ನಾನು ಸಚಿವನಾಗಿದ್ದಾಗ ಪೈಲೆಟ್ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ದೆ. ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಕಲುಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆ ಕಟ್ಟಿಸಿದರು. ಇದು ಸಹಜ. ಸೋಮಣ್ಣ ಅವರು ಈಗಷ್ಟೇ ಸಚಿವರಾಗಿ ಕಣ್ಣು ಬಿಡುತ್ತಿದ್ದಾರೆ. ನಮ್ಮ ರಾಜ್ಯದಿಂದ ಮಂತ್ರಿಯಾದವರು ರಾಜ್ಯಕ್ಕೆ ಶಕ್ತಿ ತುಂಬಲಿ,” ಎಂದು ಆಶಿಸಿದರು.
“ನಿರ್ಮಲಾ ಸೀತರಾಮನ್ ಅವರು ಹಣಕಾಸು ಸಚಿವೆಯಾಗಿ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಘೋಷಣೆ ಮಾಡಿದರು. ಆದರೆ ಹಣ ಬರಲಿಲ್ಲ. ಏನು ಮಾಡಲು ಸಾಧ್ಯ? ಯಾವುದೇ ಕೆಲಸವಾದರೂ ಕಾನೂನು ಬದ್ಧವಾಗಿ ಅವಕಾಶ ಇದ್ದರೆ ಅದನ್ನು ಮಾಡುತ್ತಾರೆ. ಆದರೆ ಕಾವೇರಿ ವಿಚಾರ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ತಮಿಳುನಾಡಿನವರು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ಪ್ರಧಾನಮಂತ್ರಿಗಳು ಅಂತಿಮ ತೀರ್ಮಾನ ಮಾಡುತ್ತಾರೆ. ನಾವು ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ” ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಚಿವ ಸಂಪುಟದಲ್ಲಿ ಕನ್ನಡಿಗರಿಗೆ ನೀಡಿರುವ ಖಾತೆಗಳ ಬಗ್ಗೆ ಕೇಳಿದಾಗ, “ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೆ ಹೆಚ್ಚಿನ ಕೈಗಾರಿಕೆ ತಂದು, ಅನುದಾನ ತಂದು ಕರ್ನಾಟಕಕ್ಕೆ ಶಕ್ತಿ ತುಂಬಲಿ ಎಂದು ಪರೋಕ್ಷವಾಗಿ ತಮ್ಮ ರಾಜಕೀಯ ವಿರೋಧ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿದರು.