ಬಾಲ್ಯವಿವಾಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ| ಹೆಚ್ಚುತ್ತಿರುವ ಬಾಲ ಗರ್ಭಿಣಿಯರ ಸಂಖ್ಯೆ, ಹೆಣ್ಣು ಶಿಶು ಹತ್ಯೆ,; ಕಣ್ಣು ಮುಚ್ಚಿ ಕುಳಿತ ಸರ್ಕಾರ
x
ಸಾಂದರ್ಭಿಕ ಚಿತ್ರ

ಬಾಲ್ಯವಿವಾಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ| ಹೆಚ್ಚುತ್ತಿರುವ ಬಾಲ ಗರ್ಭಿಣಿಯರ ಸಂಖ್ಯೆ, ಹೆಣ್ಣು ಶಿಶು ಹತ್ಯೆ,; ಕಣ್ಣು ಮುಚ್ಚಿ ಕುಳಿತ ಸರ್ಕಾರ

ರಾಜ್ಯದಲ್ಲಿ ಬಾಲ್ಯ ವಿವಾಹದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಬಾಲ ಗರ್ಭಿಣಿಯರ ಸಂಖ್ಯೆ ಯಾವುದೇ ರೀತಿಯಲ್ಲೂ ಇಳಿಮುಖ ಕಾಣದಿದ್ದರೂ, ಹೆಣ್ಣು ಭ್ರೂಣ ಹತ್ಯೆ ಯಾವುದೇ ಯಗ್ಗಿಲ್ಲದೆ ಕಾನೂನಿನ, ಅಧಿಕಾರಿಗಳ ಮೂಗಿನ ಕೆಳಗೇ ನಡೆಯುತ್ತಿದ್ದರೂ. ತನಗೂ ಅದಕ್ಕೂ ಯಾವುದೇ ಸಂಬಂಧವಿಲ ಎನ್ನುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ.


ಕರ್ನಾಟಕದ ವಿಧಾನ ಸಭೆಯ ಮುಂಗಾರು ಅಧಿವೇಶನ ಎರಡನೇ ಹಂತಕ್ಕೆ ಕಾಲಿಟ್ಟರೂ, ಜನರ ಸಮಸ್ಯೆಗಳು ಚರ್ಚೆಯಾಗುವ ಬದಲು, ಮೂಡಾ, ಹಗರಣ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಹಗರಣಗಳೇ ಚರ್ಚೆಯ ವಸ್ತುಗಳಾಗಿ, ಮುಕ್ತಾಯವಾಗುವಂತೆ ತೋರುತ್ತಿದೆ. ಆದರೆ, ರಾಜ್ಯದ ಇತ್ತೀಚಿನ ಸಾಮಾಜಿಕ ಸಮಸ್ಯೆಗಳು ಸದನದಲ್ಲಿ ಚರ್ಚೆಯಾಗಬಹುದೆಂಬ ನಂಬಿಕೆ ಸುಳ್ಳಾಗುತ್ತಿದೆ.

ಬಾಲ್ಯ ವಿವಾಹದ ಪ್ರಕರಣಗಳ ವಿಷಯಕ್ಕೆ ಬಂದರೆ, ಕರ್ನಾಟಕ ಎರಡನೇ ಸ್ಥಾನಕ್ಕೇರಿರುವುದಾಗಲಿ, ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವ ವಿಚಾರವಾಗಿ ಚುನಾಯಿತ ಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತುತ್ತಾರೆನೋ ಎಂಬ ನಿರೀಕ್ಷೆ ಕೂಡ ಸುಳ್ಳಾಗುತ್ತಿದೆ. ಇತ್ತೀಚೆಗೆ ವರದಿಯಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಂತೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದರೂ, ರಾಜ್ಯದ ವಿಧಾನ ಪರಿಷತ್‌, ವಿಧಾನ ಸಭೆಯ ಸದಸ್ಯರು ರಾಜಕಾರಣದಲ್ಲಿ ಮಗ್ನರಾಗಿ, ರಾಜಕೀಯ ಮೇಲಾಟದಲ್ಲಿ ನಿರತರಾಗಿ, ಚುನಾಯಿತ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದು ಹೇಗೆ? ಎಂಬ ತಂತ್ರಗಾರಿಕೆಯಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ.

ದೇಶದಲ್ಲಿ ಹೆಚ್ಚಾಗುತ್ತಿರುವ ಬಾಲ್ಯ ವಿವಾಹದ ಸಮಸ್ಯೆಯನ್ನು ಗಮನಿಸಿ, ಅದನ್ನು ಎಲ್ಲ ಸರ್ಕಾರಗಳ ಗಮನಕ್ಕೆ ತಂದರೂ, ಪ್ರತಿಕ್ರಿಯಿಸದ ಸರ್ಕಾರದ ವಿರುದ್ಧ ಮಕ್ಕಳ ಹಕ್ಕುಗಳ ಕಾರ್ಯಕರ್ತರೊಬ್ಬರು ಸರ್ವೋಚ್ಛ ನ್ಯಾಯಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation) ಸಲ್ಲಿಸಿದ್ದರು. ಬಾಲ್ಯ ವಿವಾಹವನ್ನು ನಿಯಂತ್ರಿಸಲು ಸರ್ವೋಚ್ಛ ನ್ಯಾಯಾಲಯ ಮಾರ್ಗಸೂಚಿ ಹೊರಡಿಸಬೇಕೆಂದು ಈ ಸ್ವಯಂ ಸೇವಾ ಸಂಸ್ಥೆ ಮನವಿ ಮಾಡಿತ್ತು.ಈ ಮಹತ್ವದ ಸಾಮಾಜಿಕ ಸಮಸ್ಯೆಯನ್ನು ಕುರಿತು, ವಿವರವಾದ ವಿವರಣೆಯನ್ನು ನೀಡುವಂತೆ ಸರ್ವೋಚ್ಛ ನ್ಯಾಯಾಲಯ ಕೇಂದ್ರದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಈ ಕುರಿತು ವಿಚಾರಣೆ ನಡೆಸಿದ್ದು, ಚೀಫ್‌ ಜಸ್ಟೀಸ್‌ ಡಿ.ವೈ ಚಂದ್ರಚೂಡ್‌, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್‌ ಮಿಶ್ರಾ ಅವರುಗಳ ತ್ರಿಸದಸ್ಯ ಪೀಠ.

ಇತ್ತೀಚೆಗೆ, ಕೇಂದ್ರದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಸಚಿವಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರು ಸರ್ವೋಚ್ಛ ನ್ಯಾಯಲಯಕ್ಕೆ ದೇಶದಲ್ಲಿ ಘಟಿಸಿರುವ ಬಾಲ್ಯ ವಿವಾಹದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಿದರು.

ಬಾಲ್ಯ ವಿವಾಹ; ಕರ್ನಾಟಕಕ್ಕೆ 2ನೇ ಸ್ಥಾನ

ಸಲ್ಲಿಕೆಯಾಗಿರುವ ವರದಿಯನ್ನು ಗಮನಿಸಿದರೆ ನಾಗರಿಕ ಸಮಾಜ ಬೆಚ್ಚಿ ಬೀಳುವಂಥ ವಿವರ ಅದರಲ್ಲಿ ಅಡಕವಾಗಿದೆ. ಈ ವರದಿಯಲ್ಲಿ ಅತಿಹೆಚ್ಚು ಬಾಲ್ಯ ವಿವಾಹಗಳು ನಡೆಯುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದಿರುವ ಬಾಲ್ಯ ವಿವಾಹದ ಅಂಕಿ ಅಂಶಗಳ ವಿವರದ ಪಟ್ಟಿ ಇದು. ಅದರಲ್ಲಿ ತಮಿಳುನಾಡಿನಲ್ಲಿ ಅತಿಹೆಚ್ಚು 8966 ಬಾಲ್ಯ ವಿವಾಹಗಳು ನಡೆದಿದ್ದು, ಮೊದಲ ಸ್ಥಾನದ ʻಹೆಗ್ಗಳಿಕೆʼಗೆ ಪಾತ್ರವಾಗಿದ್ದರೆ, 8348 ಬಾಲ್ಯ ವಿವಾಹಗಳನ್ನು ದಾಖಲಿಸುವುದರ ಮೂಲಕ ಕರ್ನಾಟಕ ಎರಡನೇ ಸ್ಥಾನಗಳಿಸಿದೆ. ಕರ್ನಾಟಕವನ್ನು ಅನುಸರಿಸಿ, ಪಶ್ಚಿಮ ಬಂಗಾಳ ಮೂರನೇ ಸ್ಥಾನ (8324) ತೆಲಂಗಾಣ ನಾಲ್ಕನೇ ಸ್ಥಾನ (4440) ಆಂಧ್ರ ಪ್ರದೇಶ ಐದನೇ ಸ್ಥಾನ (3416) ಅಸ್ಸಾಂ ಆರನೇ ಸ್ಥಾನ (3316), ಮಹಾರಾಷ್ಟ್ರ ಏಳನೇ ಸ್ಥಾನ (2043) ಗುಜರಾತ್‌ ಒಂಭತ್ತನೇ ಸ್ಥಾನ (1206) ಹಾಗೂ ಉತ್ತರ ಪ್ರದೇಶ (1197) ಬಾಲ್ಯವಿವಾಹಗಳನ್ನು ದಾಖಲಿಸಿವೆ. ದೇಶದ ವಿವಿಧ ರಾಜ್ಯಗಳ ಸಂಬಂಧ ಪಟ್ಟ ಇಲಾಖೆಗಳಿಂದ ಸಂಗ್ರಹಿತವಾದ ಅಂಕಿ ಸಂಖ್ಯೆಗಳನ್ನು ಆಧರಿಸಿಯೇ ಈ ವಿವರಗಳನ್ನು ಸಲ್ಲಿಸಲಾಗಿದೆ.

ಇದೇ ವೇಳೆಗೆ ಇಷ್ಟೇ ಸಂಖ್ಯೆಯ ಬಾಲ್ಯವಿವಾಹಗಳನ್ನು ಇಲಾಖೆ ತಡೆದಿದೆ ಎಂದು ನ್ಯಾಯಾಲಯಕ್ಕೆ ಸಚಿವಾಲಯ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ. ಆದರೂ, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಅಡಿಯಲ್ಲಿ ಇಂಥ ವಿವಾಹಗಳ ಬಗ್ಗೆ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (FIR) ಬೆರಳೆಣಿಕೆಯಷ್ಟು ಎಂಬ ಸಂಗತಿಯನ್ನೂ ಸಚಿವಾಲಯ ಮುಕ್ತವಾಗಿ ಒಪ್ಪಿಕೊಂಡಿದೆ.

ಸರ್ವೋಚ್ಛ ನ್ಯಾಯಾಲದ ಮಾರ್ಗಸೂಚಿ

ಈ ಸಾಮಾಜಿಕ ಪಿಡುಗನ್ನು ಕುರಿತು, ತಮ್ಮ ವಾದವನ್ನು ಮಂಡಿಸಿದ ಸ್ವಯಂ ಸೇವಾ ಸಂಸ್ಥೆಯ ವಕೀಲರು “ಬಾಲ್ಯ ವಿವಾಹದ ಆರೋಪಿಗಳ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರಗುತ್ತಿಲ್ಲ. ರಾಜ್ಯಗಳು ಸರಿಯಾದ ಅಂಕಿ ಅಂಶಗಳನ್ನು ನೀಡುತ್ತಿಲ್ಲ. ಹಾಗಾಗಿ ಬಾಲ್ಯ ವಿವಾಹದಂಥ ದುಷ್ಟ ಸಾಮಾಜಿಕ ಸಮಸ್ಯೆಯನ್ನು ತಡೆಗಟ್ಟಲು ಪ್ರಭಾರ ಅಧಿಕಾರಿಗಳ ಬದಲು ವಿಶೇಷ ಅಧಿಕಾರಿಗಳನ್ನು ನೇಮಿಸಲು ಸರ್ಕಾರಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತ್ರಿಮೂರ್ತಿ ನ್ಯಾಯಾಧೀಶರ ಪೀಠಕ್ಕೆ ಪ್ರಾರ್ಥನೆ ಸಲ್ಲಿಸಿದರು. ವಾದ ವಿವಾದವನ್ನು ಆಲಿಸಿದ ಪೀಠವು “ಈ ಸಾಮಾಜಿಕ ಅನಿಷ್ಠದ ಪಿಡುಗಿಗೆ ಅಂತ್ಯ ಹಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಬೇಕು. ಅಷ್ಟೇ ಅಲ್ಲ ದೃಢ ಸಂಕಲ್ಪ ಮಾಡಬೇಕು. ಈ ರೀತಿಯ ಕಾರ್ಯಕ್ರಮಕ್ಕಾಗಿ ನ್ಯಾಯಾಲಯ ಯಾವ ರೀತಿ ನಿರ್ದೇಶನಗಳನ್ನು ನೀಡಬೇಕು, ಮತ್ತು ಮಾರ್ಗ ಸೂಚಿಗಳನ್ನು ಸೂಚಿಸಬಹುದು ಎಂಬುದರ ಬಗ್ಗೆ ದೀರ್ಘವಾಗಿ ಚರ್ಚಿಸಿ, ಆದೇಶ ನೀಡಲಿದೆ” ಎಂದು ಹೇಳಿದೆ.

ಆದರೆ, ಕರ್ನಾಟಕದ ಅಂಕಿ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಕ್ಕಳ Child Rights Trust ನ Executive Trustee ವಾಸುದೇವ ಶರ್ಮ ಅವರು ದ ಫೆಡರಲ್‌-ಕರ್ನಾಟಕದೊಂದಿಗೆ ಮಾತನಾಡಿ ; “ಕರ್ನಾಟಕದ ರಾಜ್ಯ ಸರ್ಕಾರ ಯಾವ ಆಧಾರ ಮತ್ತು ದಾಖಲೆಗಳನ್ನಿಟ್ಟುಕೊಂಡು ಈ ಅಂಕಿ ಅಂಶ ಕ್ರೂಢೀಕರಿಸಿದೆ ತಿಳಿಯುತ್ತಿಲ್ಲ. ನಮ್ಮ ತಿಳುವಳಿಕೆ ಪ್ರಕಾರ, ಈ ಸಂಖ್ಯೆ ಇನ್ನಷ್ಟ ಹೆಚ್ಚಿದೆ” ಎನ್ನುತ್ತಾರೆ.

“ಇದು ಬೆಳಕಿಗೆ ಬಂದು ದಾಖಲಾಗಿರುವ ಬಾಲ್ಯ ವಿವಾಹಗಳ ಲೆಕ್ಕವಾದರೆ, ಬೆಳಕಿಗೆ ಬಾರದೆಯೇ ಇದರ ಹತ್ತಾರು ಪಟ್ಟು ಬಾಲ್ಯ ವಿವಾಹಗಳು ನಡೆದಿರುವ ಸಾಧ್ಯತೆ ಇದೆ” ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ಸತೀಶ್‌ ಹೇಳುತ್ತಾರೆ. ದೇಶವು ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸಾಕಷ್ಟು ಮುಂದುವರೆದಿರುವ ಈ ದಿನಗಳಲ್ಲಿ ಬಾಲ್ಯ ವಿವಾಹ ಇಷ್ಟೊಂದು ಸಂಖ್ಯೆಯಲ್ಲಿ ನಡೆದಿರುವುದು ಆಶ್ಚರ್ಯದ ಸಂಗತಿ. ಏನೇ ಇದ್ದರೂ, ಈ ಅಂಕಿ ಸಂಖ್ಯೆಗಳು ಬಾಲ್ಯ ವಿವಾಹದ ಬಗ್ಗೆ ಮತ್ತು ಬಾಲ್ಯ ವಿವಾಹದಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಜನರಲ್ಲಿ ಇರುವ ಅರಿವಿನ ಕೊರತೆಯನ್ನು ತೋರಿಸುತ್ತದೆ.

ಕೈಲಾಶ್‌ ಸತ್ಯಾರ್ಥಿ ಮಕ್ಕಳ ಫೌಂಡೇಷನ್‌ ವರದಿ

ಈ ಕುರಿತು ಕೈಲಾಶ್‌ ಸತ್ಯಾರ್ಥಿ ಮಕ್ಕಳ ಫೌಂಡೇಷನ್‌ 2022ರಲ್ಲಿ ತನ್ನ ವರದಿಯೊಂದನ್ನು ಪ್ರಕಟಿಸಿದೆ. ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಸಮಸ್ಯೆ ಇಂದು ದೇಶ ಎದುರಿಸುತ್ತಿರುವ ಪ್ರಮುಖ ಸಾಮಾಜಿಕ ಸಮಸ್ಯೆಗಳಲ್ಲಿ ಒಂದೆಂದು ಗುರುತಿಸಿದೆ. ಈ ವರದಿಯ ಪ್ರಕಾರ ದೇಶದಲ್ಲಿ 2021ರಲ್ಲಿ ಒಟ್ಟು 1,49,404 ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಪ್ರತಿದಿನ 409 ಪ್ರಕರಣಗಳು ದಾಖಲಾಗಿರುವುದಾಗಿ ಹೇಳಿದೆ. ಈ 1,49,404 ಪ್ರಕರಣಗಳ ಪೈಕಿ ಶೇ 5 ರಷ್ಟು ಪ್ರಕರಣಗಳು ಅಂದರೆ 7261 ಪ್ರಕರಣಗಳು ಕರ್ನಾಟಕದಲ್ಲಿಯೇ ಪತ್ತೆಯಾಗಿದ್ದು ದೇಶದಲ್ಲಿ ಏಳನೇ ಸ್ಥಾನದಲ್ಲಿದೆ. ಹಾಗೆಂದರೆ ಕರ್ನಾಟಕ ರಾಜ್ಯದ ಸ್ಥಿತಿ ಯಾವ ರೀತಿ ಇದೆ ಎಂದು ಯಾರಾದರೂ ಊಹಿಸಬಹುದು.

ಅರಿವಿನ ಕೊರತೆ ಕಾರಣವೇ?

ಬಾಲ್ಯ ವಿವಾಹ ನಡೆಸುವುದು, ಅದಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ನೆರವು ನೀಡುವುದು ಒಂದು ಕ್ರಿಮಿನಲ್‌ ಕ್ರಿಯೆ. ಯುವಕರಿಗೆ 21 ವರ್ಷ ತುಂಬುವುದರೊಳಗೆ ಮಾಡುವಂತಿಲ್ಲ. ಹಾಗೆ ಮಾಡಿದರೆ, ಅವರ ಪೋಷಕರನ್ನು ಹಾಗೂ ಅದಕ್ಕೆ ಬೆಂಬಲ ನೀಡುವ ಬಂಧುಗಳಿಗೆ ಸೆರೆಮನೆ ವಾಸದ ಶಿಕ್ಷೆ ವಿಧಿಸಲು ಕಾನೂನಲ್ಲಿ ಅವಕಾಶವಿದೆ. ಕಾಯ್ದೆಗಳು ಶಕ್ತವಾಗಿದ್ದರೂ, ಬಾಲ್ಯ ವಿವಾಹಗಳನ್ನು ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕುತ್ತಿಲ್ಲ. ವಿಚಾರಣೆ ವೇಳೆ ಸರ್ವೋಚ್ಛ ನ್ಯಾಯಲಯ ಕೂಡ ಕೇವಲ ಶಿಕ್ಷೆ ವಿಧಿಸುವುದರಿಂದ ಬಾಲ್ಯ ವಿವಾಹಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳು ಸಾಮಾಜಿಕ, ದೈಹಿಕ ಹಾಗೂ ಆರ್ಥಿಕ ಅಭದ್ರತೆಯಂಥ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವರ ಶೈಕ್ಷಣಿಕ ಭವಿಷ್ಯ ನಾಶವಾಗುತ್ತದೆ. ಮಹಿಳಾ ಸಬಲೀಕರಣಕ್ಕೆ ಬಾಲ್ಯ ವಿವಾಹ ಅಡ್ಡಿಯಾಗುತ್ತದೆ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಜನರಲ್ಲಿ ಬಾಲ್ಯ ವಿವಾಹ ಪಿಡುಗನ್ನು ಕುರಿತು ಅರಿವು ಮೂಡಿಸಬೇಕು. ಅದಕ್ಕಾಗಿ ಸರ್ಕಾರಗಳು ನಾಮಕಾವಸ್ತೆ ಪ್ರಯತ್ನಗಳನ್ನು ಮಾಡುತ್ತಿದ್ದರೂ ಅದು ರಾವಣಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ ಎಂಬಂತಾಗಿದೆ. ಹಾಗಾಗಿ ಸರ್ಕಾರಗಳು ಕೂಡಲೇ ಎಚ್ಚೆತ್ತು ಕೊಳ್ಳಬೇಕಿದೆ. ಎಲ್ಲೆ ಬಾಲ್ಯ ವಿವಾಹದ ವಾಸನೆ ಸಿಕ್ಕಿದರೂ, ಕೂಡಲೇ ಜನರು ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಿ, ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಅದು ಜನರ ಸಾಮಾಜಿಕ ಜವಾಬ್ದಾರಿ ಎಂದು ಎಲ್ಲರೂ ಭಾವಿಸಬೇಕಿದೆ. ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.

“ಹೆಣ್ಣು ಮಕ್ಕಳಿಗೆ 7 ಮತ್ತು 8ನೇ ತರಗತಿಯ ನಂತರ ಶಿಕ್ಷಣ ಮುಂದುವರಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಆ ಹೆಣ್ಣು ಮಕ್ಕಳಿಗೆ 18 ವರ್ಷವಾಗುವ ವರೆಗೂ ಅವರೊಂದಿಗೆ ಸರ್ಕಾರ ನಿಲ್ಲಬೇಕು. ಅವರಿಗೆ ವಸತಿ ನಿಲಯಗಳ ಸೌಲಭ್ಯ ಕಲ್ಪಿಸಬೇಕು, ಅವರನ್ನು ಶಿಕ್ಷಣ ಸಂಸ್ಥೆಗೆ ಕರೆದೊಯ್ಯಲು, ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು. ಹೆಣ್ಣು ಮಕ್ಕಳಿಗೆ ವಯೋವರ್ಧಮಾನಕ್ಕೆ ಬರುವ ಕಾಲದಲ್ಲಿ ಎದುರಾಗುವ ಸಮಸ್ಯೆಗಳು; ಮುಟ್ಟಿನ ಸಮಸ್ಯೆ, ಗರ್ಭಧಾರಣೆಗೆ ಕಾರಣಗಳು, ಹದಿಹರೆಯದ ದೈಹಿಕ ಬೆಳವಣಿಗೆ, ಪಾಕ್ಸೋ (POCSO) ಮತ್ತಿತರ ಕಾನುಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು” ಎಂದು ವಾಸುದೇವ ಶರ್ಮ ಹೇಳುತ್ತಾರೆ.

ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚು

ಬಾಲ್ಯ ವಿವಾಹದ ಬಗ್ಗೆ ಏನೆಲ್ಲ ಜಾಗ್ರತೆ ಮೂಡಿಸಿದರೂ, ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ 39392. ಬೆಂಗಳೂರಿನಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ 4500ನ್ನು ದಾಟಿದೆ. “ಬಾಲ ಗರ್ಭಿಣಿಯರ ಸಂಖ್ಯೆ ಏರುತ್ತಿದೆ. ವಿಶೇಷ ಮಕ್ಕಳ ಪೊಲೀಸ್‌ ಘಟಕ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪರಸ್ಪರ ಕುಳಿತು ಚರ್ಚಿಸಿ, ಬಾಲ ಗರ್ಭಿಣಿಯರ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವ ಪ್ರಯತ್ನ ಮಾಡಬೇಕಿದೆ. ಆದರೆ ದುರಾದೃಷ್ಟವಶಾತ್‌ ಬಾಲ್ಯ ವಿವಾಹಗಳು ನಡೆದರೂ, ಅದನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಪ್ರಕರಣಗಳು ಪತ್ತೆಯಾದಾಗ ಹೆಣ್ಣು ಮಕ್ಕಳೊಡನೆ ಮಹಿಳಾ ವೈದ್ಯ ತಜ್ಞರು ಆಪ್ತ ಸಮಾಲೋಚನೆ ನಡೆಸಿ, ಧೈರ್ಯ, ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ, ಅವರಿಗೆ ಕಾನೂನು ಪ್ರಜ್ಞೆಯನ್ನೂ ಮೂಡಿಸುವ ಅಗತ್ಯವಿದೆ” ಎನ್ನುವುದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಂ. ವೆಂಕಟೇಶ್‌ ಅವರ ಅಭಿಪ್ರಾಯ.

ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಲು ಬಾಲ್ಯ ವಿವಾಹವೊಂದು ಕಾರಣವಾದರೆ, ಹದಿಹರೆಯದಲ್ಲೇ, ಪ್ರೇಮಪಾಶಕ್ಕೆ ಸಿಕ್ಕು ಹೆಣ್ಣು ಮಕ್ಕಳು ವಿವಾಹ ಬಂಧನಕ್ಕೊಳಗಾಗುತ್ತಿರುವುದು ಮತ್ತೊಂದು ಕಾರಣ ಎಂಬುದು ಮಕ್ಕಳ ಹಕ್ಕುಗಳ ಆಯೋಗ ನಡೆಸಿದ ಸಮೀಕ್ಷೆಗಳಿಂದ ತಿಳಿದು ಬರುವ ಅಂಶ ಎನ್ನುವುದು ಮತ್ತೊಬ್ಬ ಸದಸ್ಯರ ಅಭಿಪ್ರಾಯ.

ಉತ್ತರದಾಯಿತ್ವದ ಪ್ರಶ್ನೆ

ಶಾಲಾ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಹರೆಯದ ಹೆಣ್ಣು ಮಕ್ಕಳೇ ಹಸುಗೂಸುಗಳ ಲಾಲನೆ-ಪಾಲನೆ ಮಾಡಬೇಕಾಗಿ ಬಂದಿರುವ ದುರಾದೃಷ್ಟ ದಿನಗಳಿವು. ಇದಕ್ಕೆ ಯಾರು ಹೊಣೆ? ಸರ್ಕಾರ ಅಥವಾ ಅಧಿಕಾರಿಗಳನ್ನು ದೂರುವುದು ಸುಲಭದ ಮಾರ್ಗ. ಆದರೆ ಇಂಥ ಪಿಡುಗನ್ನು ತಡೆಗಟ್ಟಲು, ಮಕ್ಕಳು ಮತ್ತು ಪೋಷಕರ ಪಾತ್ರವೂ ದೊಡ್ಡದು.

ಸರ್ಕಾರದ ಪ್ರಕಾರ ಸಾಮೂಹಿಕ ವಿವಾಹದ ಆಯೋಜಕರು ಅಧಾರ್‌ ಕಾರ್ಡ್ಗಳನ್ನು ಪಡೆದೇ ಅನುಮತಿ ನೀಡುತ್ತಾರೆ. ಆರೆ ಗುಟ್ಟಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ತಮಗಿಷ್ಟಬಂದ ವ್ಯಕ್ತಿಗಳ ಜೊತೆಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ಸಂಪ್ರದಾಯವನ್ನು ತಡೆಗಟ್ಟುವವರು ಯಾರು? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಬೆಂಗಳೂರಂಥ ಮೆಟ್ರೋಪಾಲಿಟನ್‌ ನಗರದಲ್ಲಿ ಈ ದುಷ್ಟ ವ್ಯವಸ್ಥೆ ಯಾವುದೇ ಯಗ್ಗಿಲ್ಲದೆ ನಡೆಯುತ್ತಿರಬೇಕಾದರೆ, ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಈ ಪಿಡುಗನ್ನು ತಡೆಗಟ್ಟುವುದು ಹೇಗೆ? ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಅನಿಯಂತ್ರಿತ ಸಾಮಾಜಿಕ ಜಾಲತಾಣಗಳ ಅವಾಂತರ, ಕಿರುತೆರೆ, ಸಿನಿಮಾಗಳಿಂದ ಪ್ರಭಾವಿತರಾಗಿ ಜಗತ್ತಿಗೆ ಕಣ್ಣು ಬಿಡುತ್ತಿರುವ ಹದಿಹರೆಯದ ಮಕ್ಕಳೇ ತಾಯಂದಿರಾಗುವ ದೌರ್ಭಾಗ್ಯವನ್ನು ತಡೆಗಟ್ಟುವುದಾದರೂ ಹೇಗೆ? ಈ ಪ್ರಶ್ನೆಗಳಿಗೆ ಉತ್ತರಿಸುವ ಉತ್ತರದಾಯಿತ್ವ ಯಾರದು?

ಹದಿನೆಂಟು ವರ್ಷದೊಳಗಿನ ಹೆಣ್ಣುಮಕ್ಕಳ ಜತೆ ದೈಹಿಕ ಸಂಪರ್ಕ ಬೆಳೆಸಿದರೆ ಅದು ಪೋಕ್ಸೋದಡಿ ಶಿಕ್ಷಾರ್ಹ ಅಪರಾಧ. 14 ವರ್ಷದಿಂದ 19 ವರ್ಷದ ಹೆಣ್ಣು ಮಕ್ಕಳಿಗೆ ಮಗುವನ್ನು ಹೆರುವಷ್ಟು ಶಕ್ತಿ ಇರುವುದಿಲ್ಲ. ಜೊತೆಯಲ್ಲಿ ಈ ರೀತಿ ಮಗುವನ್ನು ಹೆತ್ತವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗೆ ಹುಟ್ಟುವ ಮಗು ಕೂಡ ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 2021-22ರಲ್ಲಿ ರಾಜ್ಯದಲ್ಲಿ 45279 ಬಾಲಗರ್ಭಿಣಿಯರಿದ್ದರೆ, 2022-23ರಲ್ಲಿ 49291 ಬಾಲ ಗರ್ಭಿಣಿಯರಿರುವುದು ದಾಖಲಾಗಿದೆ. 2023-24ರಲ್ಲಿ ಈ ಸಂಖ್ಯೆ 39392 ರಷ್ಟಾಗಿದೆ. ಅಂದರೆ, ರಾಜ್ಯದಲ್ಲಿ ಕೇವಲ ಮೂರು ವರ್ಷಗಳಲ್ಲಿ 1.33 ಲಕ್ಷ ಬಾಲ ಗರ್ಭಿಣಿಯರನ್ನು ಗುರುತಿಸಲಾಗಿದೆ.

ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು

“ಈ ಬೆಲ್ಲ ತಿನ್ನು, ಸ್ವರ್ಗಕ್ಕೆ ಹೋಗು, ಹಿಂದಕ್ಕೆ ಬರಬೇಡ…..ಅಲ್ಲಿಂದ ನಿನ್ನ ತಮ್ಮನನ್ನು ಕಳುಹಿಸು….

ಈ ಹಿಂದೆ ಹೆಣ್ಣು ಶಿಶುಗಳನ್ನು ಹತ್ಯೆ ಮಾಡಲು ಗ್ರಾಮಾಂತರ ಪ್ರದೇಶದಲ್ಲಿ ಹಾಡುತ್ತಿದ್ದ ಜೋಗುಳವಿದು. ಆಗ ತಾನೇ ಹುಟ್ಟಿದ ಹೆಣ್ಣು ಕಂದಮ್ಮಗಳು ತಮ್ಮ ಪುಟ್ಟ ಕಣ್ಣುಗಳಿಂದ ಜಗತ್ತನ್ನು ನೋಡುವ ಮುನ್ನ ಬೆಲ್ಲದ ಚೂರು ತಿನ್ನಿಸಿ ಸಿಹಿಯಾಗಿ ಕೊಲ್ಲುತ್ತಿದ್ದ ಬಗೆ ಇದು. ಈಗ ಕಾಲ ಬದಲಾಗಿದೆ. ಈಗ ಹೆಣ್ಣು ಶಿಶುಗಳು ಹುಟ್ಟುವ ಮೊದಲೇ ಅವುಗಳ ಭ್ರೂಣ ಲಿಂಗ ಪತ್ತೆಯಾಗುತ್ತದೆ. ನಂತರ ಆ ಭ್ರೂಣಗಳು ಗರ್ಭದಲ್ಲಿಯೇ ಮಣ್ಣಾಗುತ್ತಿವೆ.

ಈ ನಡುವೆ ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ನಡೆದಿರುವುದು, ನಡೆಯುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಧನದಾಹಿಗಳು ಸ್ಕ್ಯಾನಿಂಗ್‌ ಸೆಂಟರ್‌ ಗಳನ್ನು ಎಟಿಎಂಗಳಂತೆ ಮಾಡಿಕೊಂಡಿದ್ದಾರೆ. ಸ್ಕ್ಯಾನಿಂಗ್‌ ಸೆಂಟರ್‌ಗಳುʻವಧಾʼ ಕೇಂದ್ರಗಳಾಗಿಬಿಟ್ಟಿವೆ. ಕಿರಾತಕರು, ಕರುಳುಬಳ್ಳಿ ಕತ್ತರಿಸುವ ಮೊದಲೇ ಕೊರಳು ಕೊಯ್ಯುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ರಾಜಾರೋಷವಾಗಿ ಕಾನೂನು ಉಲ್ಲಂಘನೆಯಾಗುತ್ತಿದ್ದರೂ, ಸಂಬಂಧಿಸಿದ ಇಲಾಖೆಯವರು ತಮಗೂ ಅದಕ್ಕೂ ಸಂಬಂಧ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ.

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಲಿಂಗಾನುಪಾತದ ಅಂಕೆ-ಸಂಖ್ಯೆಗಳನ್ನು ಗಮನಿಸಿದರೆ, ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಾಗೂ, ಹೆಣ್ಣು ಭ್ರೂಣ ಹತ್ಯೆ ಕಾಯ್ದೆ (Pre Conception and Pre Natal Diagnostic Techniques Act PCPNDT) ಕಟ್ಟುನಿಟ್ಟಾಗಿ ಜಾರಿಯಾಗದಿರುವುದು ಸ್ಪಷ್ಟವಾಗುತ್ತದೆ. ಈ ಹಿಂದೆ ಹೆಣ್ಣು ಶಿಶುಗಳು ಹುಟ್ಟಿದ ನಂತರ ಹತ್ಯೆಗೊಳಗಾಗುತ್ತಿದ್ದವು. ಈಗ ಹುಟ್ಟುವ ಮೊದಲೇ ಗರ್ಭದಲ್ಲೇ ಕಣ್ಣು ಮುಚ್ಚುತ್ತಿವೆ.

ಚುನಾವಣೆಯಲ್ಲಿ ಮತಗಳಿಕೆಯ ದೃಷ್ಟಿಯಿಂದ ಆಡಳಿತರೂಢ ಸರ್ಕಾರಗಳು ಹೆಣ್ಣು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಪ್ರಕಟಿಸುತ್ತವೆ. ರಾಜಕಾರಣದಲ್ಲಿ ಅವರಿಗಾಗಿ ಮೀಸಲಾತಿಯನ್ನು ಪ್ರಕಟಿಸಿದೆ. ಅಷ್ಟೇ ಅಲ್ಲ. ಈಗಿನ ಕಾಂಗ್ರೆಸ್‌ ಪಕ್ಷ ನೇತೃತ್ವದ ರಾಜ್ಯ ಸರ್ಕಾರ ತಮ್ಮ ಗ್ಯಾರಂಟಿಗಳನ್ನು ಹೆಣ್ಣು ಮಕ್ಕಳಿಗಾಗಿಯೇ ಪ್ರಕಟಿಸಿ, ಜಾರಿಗೆ ತಂದಿದೆ.

ಆದರೆ, ರಾಜ್ಯದಲ್ಲಿ ಬಾಲ್ಯ ವಿವಾಹದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಬಾಲ ಗರ್ಭಿಣಿಯರ ಸಂಖ್ಯೆ ಯಾವುದೇ ರೀತಿಯಲ್ಲೂ ಇಳಿಮುಖ ಕಾಣದಿದ್ದರೂ, ಹೆಣ್ಣು ಭ್ರೂಣ ಹತ್ಯೆ ಯಾವುದೇ ಯಗ್ಗಿಲ್ಲದೆ ಕಾನೂನಿನ, ಅಧಿಕಾರಿಗಳ ಮೂಗಿನ ಕೆಳಗೇ ನಡೆಯುತ್ತಿದ್ದರೂ. ತನಗೂ ಅದಕ್ಕೂ ಯಾವುದೇ ಸಂಬಂಧವಿಲ ಎನ್ನುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಈಗ ಸರ್ಕಾರದ ವಿಧಾನ ಸಭೆಯ ಅಧಿವೇಶನದಲ್ಲಿ ಈ ಪ್ರಶ್ನೆಯನ್ನು ವಿರೋಧ ಪಕ್ಷದವರಾದರೂ ಎತ್ತಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

Read More
Next Story