ಭೂಕುಸಿತ, ಪ್ರಹಾರ ಮುನ್ನೆಚ್ಚರಿಕೆ | ಜನರ ಪ್ರಾಣ ಉಳಿಸಲು ನಿಷ್ಠುರ ಕ್ರಮ ಕೈಗೊಳ್ಳಿ: ಸಚಿವ ಕೃಷ್ಣ ಬೈರೇಗೌಡ
x

ಭೂಕುಸಿತ, ಪ್ರಹಾರ ಮುನ್ನೆಚ್ಚರಿಕೆ | ಜನರ ಪ್ರಾಣ ಉಳಿಸಲು ನಿಷ್ಠುರ ಕ್ರಮ ಕೈಗೊಳ್ಳಿ: ಸಚಿವ ಕೃಷ್ಣ ಬೈರೇಗೌಡ


ಮಡಿಕೇರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆಗಳಿರುವ ಸ್ಥಳಗಳಲ್ಲಿ ವಾಸಿಸುವ ಜನರನ್ನು ನಿಷ್ಠುರವಾಗಿ ಬೇರೆ ಕಡೆಗೆ ಬಲವಂತವಾಗಿ ಸ್ಥಳಾಂತರ ಮಾಡಬೇಕು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ಪ್ರವಾಸದಲ್ಲಿರುವ ಸಚಿವರು, ಬುಧವಾರ ಭೂಕುಸಿತ ಸಂಭವಿಸಿರುವ ಚಾರ್ಮಾಡಿ ಮತ್ತು ಶಿರಾಡಿ ಘಾಟಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಪ್ರಾಣ ಹೋದ ಮೇಲೆ ಪರಿಹಾರ ಕೊಡಲು ಮಾತ್ರವೇ ನಾವಿಲ್ಲ. ಪ್ರಾಣ ಉಳಿಸಲೂ ನಾವಿದ್ದೇವೆ. ಎಷ್ಟು ಸಾಧ್ಯವೋ ಅಷ್ಟು ಜನರ ಪ್ರಾಣಗಳನ್ನು ಉಳಿಸಬೇಕಿದೆ. ಅದಕ್ಕಾಗಿ ಕೆಲವೊಂದು ನಿಷ್ಠುರ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು" ಎಂದರು.

"ರಾಜ್ಯದಲ್ಲಿ ಸಿಡಿಲು ಬಡಿತದಿಂದ 8, ಮರ ಬಿದ್ದು 6. ಮನೆ ಕುಸಿತದಿಂದ 14, ನೀರಿಗೆ ಇಳಿದು 12 ಮಂದಿ, ಭೂಕುಸಿತದಿಂದ 8 ಮಂದಿ ಸೇರಿದಂತೆ ಈವರೆಗೆ ಒಟ್ಟು 48 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ. ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುವವರು ನಮ್ಮನ್ನು ಬೈಯ್ದುಕೊಂಡರೂ ಚಿಂತೆ ಇಲ್ಲ. ಅವರನ್ನು ಕೂಡಲೇ ಸ್ಥಳಾಂತರಿಸಿ, ಅವರ ಜೀವ ಉಳಿಸಿ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗುವುದು" ಎಂದರು.

ಮೋಜು ಮಸ್ತಿ ಮಾಡುವವರಿಗೆ ಲಾಠಿ ರುಚಿ

"ಹೊಳೆ ಉಕ್ಕಿ ಹರಿಯುವಾಗ ಮೀನು ಹಿಡಿಯಲು ಹೋದರೆ, ಮೋಜು ಮಸ್ತಿ ಮಾಡಲು ಹೋದವರಿಗೆ ಲಾಠಿಯ ರುಚಿ ತೋರಿಸಬೇಕು. ಜನರಿಗೂ ತಮ್ಮ ಜೀವ ಉಳಿಸಿಕೊಳ್ಳುವ ಜವಾಬ್ದಾರಿ ಇದೆ ಎನ್ನುವುದನ್ನು ಅವರು ಮರೆಯಬಾರದು. ಹಾಗಾಗಿ, ಇನ್ನು ಮುಂದೆ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಹೇಳಿದರು.

“ವಯನಾಡು ದುರಂತ ನಮಗೆಲ್ಲ ಎಚ್ಚರಿಕೆಯ ಗಂಟೆ. 2018ರಲ್ಲಿ ಕೊಡಗಿನಲ್ಲಿ ಆದ ಘಟನೆಯ ಮುಂದುವರಿದ ಭಾಗ ವಯನಾಡಿನಲ್ಲಿ ಆಗಿದೆ. ಪರಿಸರದ ತಾಳ್ಮೆಗೂ ಇತಿಮಿತಿಗಳಿವೆ. ಎಗ್ಗಿಲ್ಲದ ಭೂಪರಿವರ್ತನೆ ಮೂಲಕ ನಾವೇ ನಮ್ಮ ಕಾಲ ಮೇಲೆ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಜನರು ಮಿತಿಗಳನ್ನು ದಾಟಬಾರದು. ಎಲ್ಲ ಸರ್ಕಾರಗಳೂ ಪರಿಸರ ಉಳಿಸುವ ಕಡೆಗೆ ಚಿಂತನೆ ನಡೆಸದೇ ಇದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ" ಎಂದು ಅಭಿಪ್ರಾಯಪಟ್ಟರು.

"ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ'ದವರು ರಾಜ್ಯದಲ್ಲಿ ಎಲ್ಲೆಲ್ಲಿ ಭೂಕುಸಿತ ಸಂಭವಿಸಬಹುದು ಎಂಬ ಮಾಹಿತಿ ನೀಡಿದ್ದಾರೆ. ಅದನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಅವರಿಂದ ಪ್ರಸ್ತಾವ ತರಿಸಿಕೊಂಡು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಈ ವರ್ಷ 100 ಕೋಟಿ, ಮುಂದಿನ ವರ್ಷ 200 ಕೋಟಿ ಸೇರಿದಂತೆ ಒಟ್ಟು ಮುನ್ನೂರು ಕೋಟಿ ವಿನಿಯೋಗಿಸಲಾಗುವುದು" ಎಂದು ಹೇಳಿದರು.

"ಪ್ರಹ್ಲಾದ ಜೋಶಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಪಾಲರಿಗೆ ಅರ್ಜಿಗಳನ್ನು ಕೊಟ್ಟು ಸರ್ಕಾರಕ್ಕೆ ಪತ್ರಗಳನ್ನು ಬರೆಸಿ ಏನಾದರೂ ಮಾಡಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ಬುಡಮೇಲು ಮಾಡಲು ಹೊರಟರೆ ನಾವು ನ್ಯಾಯಾಲಯದ ಕದ ತಟ್ಟುತ್ತೇವೆ" ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Read More
Next Story