ಡೆಂಗ್ಯೂ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ:  ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಸೂಚನೆ‌
x

ಡೆಂಗ್ಯೂ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಸೂಚನೆ‌


ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಹಾಗಾಗಿ ಡೆಂಗ್ಯೂ ತಡೆಗೆ ಕ್ರಮ ಕೈಗೊಳುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.

‌ʻʻಇಲ್ಲಿಯವರೆಗೂ ರಾಜ್ಯದಲ್ಲಿ 19,923 ಡೆಂಗ್ಯೂ ಪ್ರಕರಣ ದಾಖಲಾಗಿ 20 ಸಾವಿರ ಸನಿಹದತ್ತ ಮುನ್ನುಗ್ಗುತ್ತಿದೆ. ಬೆಂಗಳೂರಿನಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಆದರೆ ಕೇವಲ 51 ಹಾಟ್ ಸ್ಪಾಟ್ ಇದೆ ಎಂದು ಬಿಬಿಎಂಪಿ ಹೇಳುತ್ತಿದೆ. ಇನ್ನು ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಹೀಗಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.

ʻʻಸೊಳ್ಳೆ ಸಂತಾನೋತ್ಪತ್ತಿ ಪರಿಸರ ಸೃಷ್ಟಿಸಿದವರಿಗೆ ದಂಡ ವಿಧಿಸಬೇಕು. ಜೊತೆಗೆ ಸೊಳ್ಳೆ ಹೆಚ್ಚದಂತೆ ತಡೆಯಲು ಕೈಗೊಂಡ ಕ್ರಮದ‌ ಬಗ್ಗೆ ಮಾಹಿತಿ ನೀಡಬೇಕು. ಪ್ರದೇಶವಾರು, ವಾರ್ಡ್ ವಾರು ಸೊಳ್ಳೆ ಸಂತಾನೋತ್ಪತ್ತಿ ಪತ್ತೆ ಹಚ್ಚಬೇಕು. ಕಸದ ಸಮಸ್ಯೆ ಕೂಡ ಡೆಂಗ್ಯೂ ಇನ್ನಿತರ ವೈರಲ್ ರೋಗಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಕಸದ‌ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮದ ಬಗ್ಗೆ ಆಗಸ್ಟ್ 28ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕುʼʼ ಎಂದು ಹೈಕೋರ್ಟ್ ಸೂಚಿಸಿದೆ.

ಇನ್ನು ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಇದುವರೆಗೂ ವಿವಿಧ ಜಿಲ್ಲೆಗಳಲ್ಲಿ 10 ಜನ ಡೆಂಗ್ಯೂವಿಗೆ ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಸಾವು, ಶಿವಮೊಗ್ಗದಲ್ಲಿ ಇಬ್ಬರು, ಹಾಸನದಲ್ಲಿ ಇಬ್ಬರು ಸಾವು ಮತ್ತು ಧಾರವಾಡ ಮತ್ತು ಹಾವೇರಿಯಲ್ಲಿ ಒಂದೊಂದು ಸಾವಾಗಿದೆ. ಜೊತೆಗೆ ಪ್ರತಿನಿತ್ಯ 300ರ ಸನಿಹಕ್ಕೆ ಕೇಸ್‌ಗಳು ದಾಖಲಾಗುತ್ತಿವೆ. ಮಂಗಳವಾರ 259 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರು, ಧಾರವಾಡ, ಹಾವೇರಿ ಸೇರಿದಂತೆ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಕೇಸ್ ದಾಖಲಾಗುತ್ತಿದೆ.

ಇನ್ನೂ ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಮುಂಜಾಗ್ರತೆಯನ್ನು ವಹಿಸುತ್ತಾ ಇದೆ. ಆಸ್ಪತ್ರೆಗಳಲ್ಲಿ ಬೆಡ್ ಮೀಸಲು ಇಡುತ್ತಿದ್ದು, ಪ್ರತಿ ಶುಕ್ರವಾರ ಲಾರ್ವಾ ಸೈಟ್ಸ್ ನಾಶ ಮಾಡಲಾಗುತ್ತಿದೆ. ಮನೆಮನೆ ಸರ್ವೆ ಮಾಡಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಜನರು ಕೂಡಲೇ ಎಚ್ಚೆತ್ತುಕೊಂಡು ಡೆಂಗ್ಯೂ ರೋಗ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ.

Read More
Next Story