
Swathi Murder Case | ರಟ್ಟೀಹಳ್ಳಿ ಸ್ವಾತಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ
ಲವ್ ಜಿಹಾದ್ ಆರೋಪಗಳ ಹಿನ್ನೆಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ರಟ್ಟೀಹಳ್ಳಿಯ ಸ್ವಾತಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವ ಮೂಲಕ ಹಾವೇರಿ ಪೊಲೀಸರು, ಪ್ರಕರಣ ಅಸಲೀ ಹಕೀಕತ್ತು ಬಯಲು ಮಾಡಿದ್ದಾರೆ
ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಹಾವೇರಿಯ ನರ್ಸ್ ಸ್ವಾತಿ ಕೊಲೆ ಪ್ರಕರಣದಲ್ಲಿ ಪೊಲೀಸರು ನಯಾಝ್ ಇಮಾಮ್ ಸಾಬ್ ಬೆಣ್ಣಿಗೇರಿ ಎಂಬಾತನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನೂ ಕೆಲವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಣೆಬೆನ್ನೂರು ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಮಾರ್ಚ್ 6ರಂದು ರಾಣೆಬೆನ್ನೂರು ತಾಲೂಕಿನ ಪತ್ತೇಪುರ ಬಳಿ ತುಂಗಾಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವರನ್ನು ಕೊಲೆ ಮಾಡಿ ನದಿಗೆಸೆದಿರುವುದಾಗಿ ವರದಿ ಬಂದಿತ್ತು.
ಆ ಹಿನ್ನೆಲೆಯಲ್ಲಿ ಸ್ವಾತಿ ಕೊಲೆ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು. ಕೊಲೆಗಾರರು ಮುಸ್ಲಿಮರು ಎಂಬ ವಿಷಯ ವ್ಯಾಪಕವಾಗಿ ಹರಡಿದ್ದರಿಂದ ಹಾವೇರಿ ಜಿಲ್ಲೆಯಾದ್ಯಂತ ಆತಂಕದ ವಾತಾವರಣಕ್ಕೂ ಈ ಘಟನೆ ಕಾರಣವಾಗಿತ್ತು. ಹಾವೇರಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಘಟನೆ ಲವ್ ಜಿಹಾದ್ ಎಂದು ಹೇಳುವ ಮೂಲಕ ಅದಕ್ಕೆ ಕೋಮು ಆಯಾಮ ಕೊಡುವ ಪ್ರಯತ್ನವನ್ನೂ ಮಾಡಿದ್ದರು.
ಇದೀಗ ಸ್ವಾತಿ (22) ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ನಯಾಝ್ ಇಮಾಮ್ ಸಾಬ್ ಬೆಣ್ಣಿಗೇರಿ (28) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಸಹಕರಿಸಿದ್ದಾರೆ ಎನ್ನಲಾದ ನಯಾಝ್‌ನ ಸ್ನೇಹಿತರಾದ ಮಾಸೂರಿನ ದುರ್ಗಾಚಾರಿ ಬಡಿಗೇರ ಮತ್ತು ವಿನಾಯಕ ಪೂಜಾರ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಏನಿದು ಕೊಲೆ ಪ್ರಕರಣ?
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಾಣೆಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್ 6ರಂದು ಅವರ ಮೃತದೇಹ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿತ್ತು. ಸ್ವಾತಿ ಅವರನ್ನು ಕೊಲೆ ಮಾಡಿ ನದಿಗೆ ಎಸೆಯಲಾಗಿದೆ ಎಂಬ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
ಅದರ ಬೆನ್ನಲ್ಲೇ ರಟ್ಟೀಹಳ್ಳಿ, ರಾಣೆಬೆನ್ನೂರು ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಹಿರೇಕೆರೂರು ತಾಲೂಕಿನ ಹಳೇ ವೀರಾಪುರ ಗ್ರಾಮದ ನಯಾಝ್ ಎಂಬಾತ ತನ್ನ ಸ್ನೇಹಿತರಾದ ದುರ್ಗಾಚಾರಿ ಮತ್ತು ವಿನಾಯಕನ ಎಂಬುವರೊಂದಿಗೆ ಸೇರಿ ಸ್ವಾತಿಯನ್ನು ಕೊಲೆ ಮಾಡಿದ್ದಾನೆ ಎಂಬ ಆಘಾತಕಾರಿ ಸಂಗತಿಯನ್ನು ಬಾಯಿಬಿಡಿಸಿದ್ದರು.
ಹೋರಿ ಹಬ್ಬದ ಸ್ನೇಹ ಕೊಲೆಯಲ್ಲಿ ಅಂತ್ಯ!
ಮೃತ ಸ್ವಾತಿ ಮತ್ತು ಆರೋಪಿಗಳಾದ ನಯಾಝ್, ದುರ್ಗಾಚಾರಿ ಮತ್ತು ವಿನಾಯಕ ಅವರ ನಡುವೆ ಹೋರಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಪರಿಚಯವಾಗಿತ್ತು. ಸ್ವಾತಿ ಮತ್ತು ನಯಾಝ್ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ತನ್ನನ್ನು ಮದುವೆಯಾಗುವಂತೆ ಸ್ವಾತಿ, ನಯಾಝ್‌ನನ್ನು ಒತ್ತಾಯಿಸುತ್ತಿದ್ದಳು. ಆದರೆ, ಧರ್ಮದ ಕಾರಣಕ್ಕೆ ನಯಾಝ್ ಆಕೆಯ ಒತ್ತಾಯಕ್ಕೆ ಮಣಿದಿರಲಿಲ್ಲ ಎನ್ನಲಾಗಿದೆ.
ಈ ನಡುವೆ ನಯಾಝ್ ಮತ್ತೊಂದು ಹುಡುಗಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ಈ ವಿಷಯ ತಿಳಿದ ಸ್ವಾತಿ ನಯಾಝ್ ಮನೆಗೆ ಹೋಗಿ ಗಲಾಟೆ ಮಾಡಿದ್ದಳು. ಮನೆಗೆ ಬಂದು ಗಲಾಟೆ ಮಾಡಿ ಅವಮಾನ ಮಾಡಿದಳು ಎಂಬ ಕಾರಣಕ್ಕೆ ಸಿಟ್ಟಿಗೆದ್ದಿದ್ದ ನಯಾಜ್, ಸ್ವಾತಿಯ ಕೊಲೆಗೆ ಸಂಚು ರೂಪಿಸಿದ್ದ ಎಂಬ ಸಂಗತಿ ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ತರಳುಬಾಳು ಶಾಲೆಯಲ್ಲಿ ಕೊಲೆ!
ಮದುವೆ ಪಟ್ಟು ಸಡಿಲಿಸದೇ ಹಠಕ್ಕೆ ಬಿದ್ದಿದ್ದ ಸ್ವಾತಿಯಿಂದ ಬಿಡುಗಡೆ ಪಡೆಯಲು ಕೊಲೆಯೊಂದೇ ದಾರಿ ಎಂಬ ತೀರ್ಮಾನಕ್ಕೆಬ ಬಂದಿದ್ದ ನಯಾಜ್, ಮಾರ್ಚ್ 3ರಂದು ಭೇಟಿಯ ನೆಪದಲ್ಲಿ ಸ್ವಾತಿಯನ್ನು ರಟ್ಟೀಹಳ್ಳಿಗೆ ಕರೆಸಿಕೊಂಡಿದ್ದ. ಆತನ ಮಾತು ನಂಬಿ ಅಲ್ಲಿಗೆ ಬಂದ ಆಕೆಯನ್ನು ಬಾಡಿಗೆ ಕಾರಿನಲ್ಲಿ ರಾಣೆಬೆನ್ನೂರಿಗೆ ಕರೆದೊಯ್ದಿದ್ದ. ಅಲ್ಲಿನ ಸುವರ್ಣ ಉದ್ಯಾನವನದಲ್ಲಿ ತನ್ನ ಗೆಳೆಯರಾದ ದುರ್ಗಾಚಾರಿ ಹಾಗೂ ವಿನಾಯಕರನ್ನು ಭೇಟಿಯಾಗಿ ಅವರನ್ನು ಕರೆದುಕೊಂಡ ನಯಾಜ್, ಮತ್ತೆ ಸ್ವಾತಿಯನ್ನು ರಟ್ಟೀಹಳ್ಳಿಯ ಕಬ್ಬಿಣಕಂತಿ ಮಠ ಬಳಿಯ ಪಾಳುಬಿದ್ದ ತರಳುಬಾಳು ಶಾಲೆಗೆ ಕರೆದೊಯ್ದಿದ್ದ. ಆ ಶಾಲೆಯಲ್ಲಿ ಮತ್ತೆ ಮದುವೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ನಯಾಝ್ ಮತ್ತು ಸ್ವಾತಿ ನಡುವೆ ಜಗಳ ಜೋರಾಗಿತ್ತು.
ಆ ವೇಳೆ ಮೂವರೂ ಆರೋಪಿಗಳು ಸೇರಿ ಸ್ವಾತಿ ಮೇಲೆ ಹಲ್ಲೆ ಮಾಡಿ, ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಶವವನ್ನು ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ನಂದಿಗುಡಿ ಗ್ರಾಮದ ಬಳಿ ತುಂಗಾಭದ್ರಾ ನದಿಗೆ ಎಸೆದಿದ್ದರು. ಆ ಶವ ತೇಲಿಕೊಂಡು ಹೋಗಿ ಮಾರ್ಚ್ 6ರಂದು ಪತ್ತೇಪುರ ಬಳಿ ಪತ್ತೆಯಾಗಿತ್ತು.
ಶವ ಪತ್ತೆಯಾದ ಒಂದೇ ದಿನದಲ್ಲಿ ಪೊಲೀಸರು ಶವ ಪರೀಕ್ಷೆ ನಡೆಸಿ ಹೆತ್ತವರಿಗೆ ಶವ ನೀಡದೇ ಸುಟ್ಟು ಹಾಕಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಪೊಲೀಸರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಲವ್ ಜಿಹಾದ್ ಆರೋಪ ಮಾಡಿದ ಮಾಜಿ ಸಿಎಂ
ಸ್ವಾತಿ ಕೊಲೆ ಪ್ರಕರಣದಲ್ಲಿ ನಯಾಝ್ ಬಂಧನವಾಗಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿಯ ಮುಖಂಡರು ಪ್ರಕರಣಕ್ಕೆ ಕೋಮು ಬಣ್ಣ ಕಟ್ಟು ಯತ್ನ ನಡೆಸಿದ್ದರು. ಹಾವೇರಿಯ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕರಣದ ಬಗ್ಗೆ ಪೋಸ್ಟ್ ಹಾಕಿರುವ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ. ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಬರ್ಬರ ಕೊಲೆಯ ನೋವು ಮಾಸುವ ಮುನ್ನ ಈಗ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಎನ್ನುವ ಯುವತಿಯ ಕೊಲೆಯಾಗಿದ್ದು, ಇದೂ ಕೂಡ ಲವ್ ಜಿಹಾದ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.”
“ಈ ಘಟನೆ ನಡೆದು ಒಂದು ವಾರ ಕಳೆದರೂ ಈ ಪ್ರಕರಣದಲ್ಲಿ ಬಂಧಿತನಾಗಿರುವ ನಯಾಜ್ ಎನ್ನುವ ಪ್ರಮುಖ ಆರೋಪಿಯ ರಕ್ಷಣೆಗೆ ದೊಡ್ಡ ಮಟ್ಟದ ಕಸರತ್ತು ನಡೆದಂತೆ ಕಾಣಿಸುತ್ತದೆ. ಸ್ವಾತಿಯನ್ನು ಪ್ರೀತಿಸುವ ನಾಟಕವಾಡಿ ಅನ್ಯ ಧರ್ಮದವಳೆಂದು ತಿರಸ್ಕರಿಸಿ ತನ್ನ ಧರ್ಮದ ಬೇರೆ ಯುವತಿಯ ಜೊತೆ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದನ್ನು ಪ್ರಶ್ನಿಸಿರುವುದಕ್ಕೆ ಸ್ವಾತಿಯ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಇದೆ.”
“ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಜಾಲ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕೃತ್ಯ ನಡೆಸುವವರಿಗೆ ಪೊಲೀಸರ ಭಯ ಇಲ್ಲದಿರುವುದು ಇಂತಹ ಪ್ರಕರಣ ಹೆಚ್ಚಾಗಲು ಕಾರಣ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದರಿಂದ ಮಾತ್ರ ಇಂತಹ ಪ್ರಕರಣಗಳಿಗೆ ತಡೆ ಒಡ್ಡಬಹುದಾಗಿದೆ. ಇದರ ಬಗ್ಗೆ ಪೊಲೀಸರು ನಿಷ್ಠುರವಾಗಿ ಅಪರಾಧಿಗಳನ್ನು ಹಿಡಿದು ಅದರ ಹಿಂದೆ ಇರುವ ಶಕ್ತಿಗಳನ್ನು ಕಡಿವಾಣ ಹಾಕುವುದು ಅತ್ಯಂತ ಅವಶ್ಯ. ಆದರೆ, ಇಂತಹ ಪ್ರಕರಣಗಳು ಕೆಲವೇ ದಿನಗಳಲ್ಲಿ ಅಧಿಕಾರಿಗಳು ಗಾಂಭಿರ್ಯತೆಯಿಂದ ತೆಗೆದುಕೊಳ್ಳದೇ ಮರೆತು ಹೋಗುವುದು ಅತ್ಯಂತ ಖಂಡನೀಯ. ಹೆಣ್ಣು ಮಕ್ಕಳ ಕುಟುಂಬ, ಬಂಧುಗಳು ಮತ್ತು ಸಮಾಜ ಅತ್ಯಂತ ನೋವು ಪಡುವ ಈ ಘಟನೆಯಲ್ಲಿ ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಮತ್ತು ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಆದರೆ, ಪ್ರಕರಣದ ಮೂವರು ಆರೋಪಿಗಳ ಪೈಕಿ ನಯಾಜ್ ಮಾತ್ರ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಕೊಲೆ ಸಂಚಿನಲ್ಲಿ ಭಾಗಿಯಾಗಿರುವ ಉಳಿದಿಬ್ಬರು ಹಿಂದೂಗಳೇ ಆಗಿದ್ದಾರೆ ಎಂಬ ವಿಷಯ ಬಯಲಾಗುತ್ತಿದ್ದಂತೆ ಇದೀಗ ಕೋಮು ಆಯಾಮದ ಮೇಲೆ ಪ್ರಕರಣವನ್ನು ರಾಜಕೀಯ ಬಳಸುವ ಹುನ್ನಾರಗಳಿಗೆ ಹಿನ್ನಡೆಯಾದಂತಾಗಿದೆ.