ಮುಸ್ಲಿಮರಿಗೆ ಮತ ಹಕ್ಕು ಬೇಡ ಹೇಳಿಕೆ | ಪೊಲೀಸರೇ ಮಠಕ್ಕೆ ಬಂದರೆ ಉತ್ತರ ಕೊಡುತ್ತೇನೆ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧದ ಪ್ರಕರಣ ಹಿಂಪಡೆಯುವಂತೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಮುಖಂಡ, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಸ್ಲಿಮರಿಗೆ ಮತದಾನದ ಹಕ್ಕುಬೇಡ ಎಂದು ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡಿರುವ ಕೆಂಗೇರಿಯ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖನಾಥ ಸ್ವಾಮೀಜಿ ಇಂದು(ಡಿ.2) ಪೊಲೀಸರ ವಿಚಾರಣೆಗೆ ಗೈರಾಗಿದ್ದಾರೆ. ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲಾಗದು, ನೀವೇ ಮಠಕ್ಕೆ ಬಂದು ಹೇಳಿಕೆ ಪಡೆಯಿರಿ ಎಂದು ಉಪ್ಪಾರಪೇಟೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ನಾನು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದೇನೆ. ಹಾಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವೈದ್ಯರು ಹತ್ತು ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಆರೋಗ್ಯ ಸುಧಾರಿಸಿದರೆ ಡಿ. 18 ರಂದು ವಿಚಾರಣೆಗೆ ಹಾಜರಾಗುತ್ತೇನೆ. ಇಲ್ಲವಾದಲ್ಲಿ ತನಿಖಾಧಿಕಾರಿಗಳೇ ಮಠಕ್ಕೆ ಬಂದು ಹೇಳಿಕೆ ಪಡೆಯುವುದಾದರೆ ನನ್ನ ಅಭ್ಯಂತರ ಇಲ್ಲ ಎಂದು ಚಂದ್ರಶೇಖರನಾಥ ಸ್ವಾಮೀಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸ್ವಾಮೀಜಿಯ ಈ ಉತ್ತರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ಹೇಳಿಕೆಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಪ್ರಕರಣ ಬೆಳೆಸದೇ ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ನಡುವೆ, ಶ್ರೀಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಕ್ಷಮೆ ಕೇಳಿದ ಮೇಲೂ ನನ್ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನನಗೆ ಕ್ಯಾನ್ಸರ್ ಇದೆ. ಎಲ್ಲಿಗೂ ಹೋಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗಲಿಲ್ಲ ಎಂದಿದ್ದಾರೆ.
ಪೊಲೀಸರು ಸಾಕಷ್ಟು ವಿಚಾರಗಳಲ್ಲಿ ಪ್ರಕರಣವನ್ನೇ ದಾಖಲಿಸಿಲ್ಲ. ಆದರೆ, ನನ್ನ ವಿಚಾರದಲ್ಲಿ ಮಾತ್ರ ಪ್ರಕರಣ ದಾಖಲಿಸಿರುವುದು ಬೇಸರ ತರಿಸಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರಿಯ ಎಂದವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದವರಿಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಸ್ವಾಮೀಜಿ, ಪೊಲೀಸರೇ ಮಠಕ್ಕೆ ಬಂದರೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಪ್ರಕರಣ ಹಿಂಪಡೆಯಲು ಡಿಕೆ ಸುರೇಶ್ ಮನವಿ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯುವಂತೆ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ, ಒಕ್ಕಲಿಗ ಮುಖಂಡ ಡಿ.ಕೆ. ಸುರೇಶ್ ಒತ್ತಾಯಿಸಿದ್ದಾರೆ.
ತಮ್ಮ ಹೇಳಿಕೆ ಕುರಿತಂತೆ ಸ್ವಾಮೀಜಿ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಸಾಂದರ್ಭಿಕವಾಗಿ ಆ ಮಾತು ಆಡಿದ್ದೇನೆ ಎಂದಿದ್ದಾರೆ. ಆದರೆ, ಸರ್ಕಾರ ದೂರು ದಾಖಲು ಮಾಡಿದೆ. ಈಗ ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸ್ವಾಮೀಜಿ ಭೇಟಿಯಾದ ಬಿಜೆಪಿ ನಿಯೋಗ
ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರವು ದೇಶದ್ರೋಹಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆದು, ಮಠಾಧೀಶರಿಗೆ ಬೆದರಿಕೆ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿ ಅವರ ಆರೋಗ್ಯ ಸರಿಯಿಲ್ಲ. ಅವರ ಜೊತೆ ಬಿಜೆಪಿ ನಿಲ್ಲಲಿದೆ. ಸ್ವಾಮೀಜಿಯವರು ವಕ್ಫ್ ವಿಚಾರದಲ್ಲಿ ವಾಸ್ತವಾಂಶದ ಬಗ್ಗೆ ಆಕ್ರೋಶದಿಂದ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ಪ್ರಕರಣ ದಾಖಲಿಸಿ ಬೆದರಿಕೆ ಹಾಕುವುದು ಸರಿಯಲ್ಲ. ಸ್ವಾಮೀಜಿಯವರು ಅನಾರೋಗ್ಯ ಕಾರಣ ನೀಡಿದರೂ ಖುದ್ದು ವಿಚಾರಣೆಗೆ ಬರುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ವಕ್ಸ್ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಮಠಗಳ ಜಮೀನು ಕಿತ್ತುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಕೆಲವರು ಸಭೆ ಮಾಡಿ, ಸುಪ್ರೀಂಕೋರ್ಟಿನ ಮುಂದೆ ಭಿಕ್ಷೆ ಬೇಡುವುದಿಲ್ಲ. ನಿಮಗೆ ಸಂಸತ್ ಇದ್ದರೆ, ನಮಗೆ ರಸ್ತೆಗಳಿವೆ. ನಾವೂ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ, ಇಂತವರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಸ್ವಾಮೀಜಿಯವರು ಬಾಯಿ ತಪ್ಪಿನಿಂದ ಹೇಳಿಕೆ ನೀಡಿದ್ದು, ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ ಮೇಲೂ ಪ್ರಕರಣ ಮುಂದುವರಿಸುವ ಅಗತ್ಯವಿದೆಯೇ? ನಿಮ್ಮ ಪಕ್ಕದಲ್ಲೇ ನಿಂತು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದವರನ್ನು ರಕ್ಷಿಸುತ್ತೀರಿ. ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.