Managlore Bank Robbery | ಕೋಟೆಕಾರ್ ಬ್ಯಾಂಕ್ ದರೋಡೆ ಸುತ್ತ ಅನುಮಾನದ ಹುತ್ತ
ಕೋಟೆಕಾರ್ ಬ್ಯಾಂಕ್ ದರೋಡೆಯ ವೇಳೆ ಸಿಸಿಟಿವಿ ಕ್ಯಾಮೆರಾ ರಿಪೇರಿಯಾಗಿತ್ತು, ಸ್ಟ್ರಾಂಗ್ ರೂಂ ತೆರೆಯುವಾಗಲೇ ಬ್ಯಾಂಕಿನ ಮುಖ್ಯದ್ವಾರವನ್ನು ಮುಚ್ಚುವುದನ್ನೂ ಮರೆಯಲಾಗಿತ್ತು! .. ಈ ಸರಣಿ ಯಡವಟ್ಟುಗಳು ಕೇವಲ ಕಾಕತಾಳೀಯವೇ?
ಮಂಗಳೂರಿನ ಉಲ್ಲಾಳದ ಕೆ.ಸಿ.ರಸ್ತೆಯಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ದರೋಡೆ ಪ್ರಕರಣವು ಆತಂಕದ ಜೊತೆಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಪ್ರವಾಸದಲ್ಲಿರುವಾಗಲೇ ಮುಸುಕುಧಾರಿಗಳು ಬ್ಯಾಂಕಿಗೆ ನುಗ್ಗಿ 4ಕೋಟಿ ಮೌಲ್ಯದ ಚಿನ್ನ ಹಾಗೂ ನಗದು ದರೋಡೆ ಮಾಡಿರುವುದು ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ. ಜೊತೆಗೆ ಹಾಡಹಗಲೇ ನಡೆದ ದರೋಡೆಯ ಸಂದರ್ಭ, ಘಟನೆಗೆ ಪೂರಕವಾಗಿ ಪರಿಣಮಿಸಿದ ಚಟುವಟಿಕೆಗಳು ಅನುಮಾನಗಳಿಗೆ ಆಸ್ಪದ ನೀಡುವಂತಿವೆ.
ಬ್ಯಾಂಕಿನಲ್ಲಿ ಇಲ್ಲಿಯವರೆಗೆ ಸುಸ್ಥಿತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ, ದರೋಡೆ ನಡೆದ ದಿನವೇ ದಿಢೀರನೇ ಹಾಳಾಗಿತ್ತು. ಕ್ಯಾಮೆರಾ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲೇ ಮುಸುಕುಧಾರಿಗಳು ಬ್ಯಾಂಕ್ ಪ್ರವೇಶಿಸಿ ದರೋಡೆ ಮಾಡಿದ್ದಾರೆ. ಸಿಸಿಟಿವಿ ಸಂಪರ್ಕ ಕಡಿತಗೊಳಿಸಿ, ರಿಪೇರಿ ಮಾಡುವಾಗಲೇ ನಗದು ಇಡುವ ಸ್ಟ್ರಾಂಗ್ ರೂಂ ತೆರೆಯಲಾಗಿತ್ತು! ಪ್ರತಿ ಬಾರಿ ಸ್ಟ್ರಾಂಗ್ ರೂಂ ತೆರೆಯುವಾಗ ಬ್ಯಾಂಕಿನ ಮುಖ್ಯದ್ವಾರ ಮುಚ್ಚಲಾಗುತ್ತಿತ್ತು. ಆದರೆ, ಶುಕ್ರವಾರ ಸ್ಟ್ರಾಂಕ್ ರೂಂ ತೆರೆಯುವಾಗ ಮುಖ್ಯದ್ವಾರವನ್ನು ಕೂಡ ಮುಚ್ಚದೇ ತೆರೆದೇ ಇಡಲಾಗಿತ್ತು! ಇದೇ ಅವಧಿಯಲ್ಲಿ ದರೋಡೆಕೋರರು ಸಲೀಸಾಗಿ ಒಳನುಗ್ಗಿ ಕೃತ್ಯ ಎಸಗಿದ್ದಾರೆ..! ದರೋಡೆ ವೇಳೆಯ ಈ ಸರಣಿ ಯಡವಟ್ಟುಗಳು ಕೇವಲ ಕಾಕತಾಳೀಯವೇ ಎಂಬ ಅನುಮಾನಗಳು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಶುಕ್ರವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಮುಸ್ಲಿಮರು ನಮಾಜ್‌ಗೆ ತೆರಳಿದ್ದರು. ಅಂದೇ ಸಿಎಂ ಕಾರ್ಯಕ್ರಮಕ್ಕಾಗಿ ಪೊಲೀಸರು ಬಂದೋಬಸ್ತ್‌ಗೆ ತೆರಳಿದ್ದರು. ಈ ಅವಕಾಶವನ್ನೇ ಬಳಸಿಕೊಂಡ ದುಷ್ಕರ್ಮಿಗಳು ದರೋಡೆ ಎಸಗಿರುವುದು ಸಂಶಯಕ್ಕೆ ಕಾರಣವಾಗಿದೆ. ಪೂರ್ವನಿಯೋಜಿತ ಕೃತ್ಯದಂತೆ ಕಾಣುತ್ತಿರುವ ಪ್ರಕರಣದಲ್ಲಿ ಸ್ಥಳೀಯರ ಅಥವಾ ಬ್ಯಾಂಕ್ ಸಿಬ್ಬಂದಿಯ ಕೈವಾಡವಿರುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ತನಿಖೆ ತೀವ್ರಗೊಳಿಸಿದ ಪೊಲೀಸರು
ಮಂಗಳೂರಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಬ್ಯಾಂಕ್ ದರೋಡೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಘಟನೆ ಬೆನ್ನಲ್ಲೇ ತುರ್ತು ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಇಷ್ಟೆಲ್ಲಾ ಹಿರಿಯ ಅಧಿಕಾರಿಗಳಿದ್ದರೂ ಘಟನೆ ಹೇಗೆ ನಡೆಯಿತು. ನಾಕಾಬಂಧಿ ವಿಧಿಸಿ, ಆರೋಪಿಗಳನ್ನು ಏಕೆ ತಡೆದಿಲ್ಲ ಎಂದು ಕಿಡಿಕಾರಿದ್ದರು. ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳಿಗಾಗಿ ತಲಾಶ್ ಆರಂಭಿಸಿದ್ದಾರೆ.
ಎರಡು ಕಾರು ಬಳಸಿದ ದರೋಡೆಕೋರರು
ದರೋಡೆ ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರ ದಿಕ್ಕುತಪ್ಪಿಸುವ ಸಲುವಾಗಿ ದರೋಡೆಕೋರರು ಒಂದೇ ಬಣ್ಣ, ನೋಂದಣಿ ಸಂಖ್ಯೆ ಹೊಂದಿರುವ ಎರಡು ಕಾರು ಬಳಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆಕೋರರ ಕಾರು ಹೆದ್ದಾರಿ ತಲುಪಿದಾಗ ಒಂದು ಕಾರು ಮಂಗಳೂರಿನ ಕಡೆ ತೆರಳಿದ್ದರೆ, ಇನ್ನೊಂದು ಕಾರು ಕೇರಳದ ಕಡೆಗೆ ಹೋಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಆದರೆ, ದರೋಡೆಕೋರರು ಯಾವ ಕಾರಿನಲ್ಲಿದ್ದರು ಎಂಬುದನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಕೃತ್ಯವೆಸಗಿದ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಸಿದಿದ್ದ ದರೋಡೆಕೋರರು ಮಂಗಳೂರು-ಉಡುಪಿ ಗಡಿಭಾಗದ ಹೆಜಮಾಡಿ ಬಳಿ ಮೊಬೈಲ್ ಎಸೆದಿರುವುದು ಪತ್ತೆಯಾಗಿದೆ.
ಇನ್ನು ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರು, ಬ್ಯಾಂಕ್ ದರೋಡೆ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯಾದ ವಾಣಿ, ಇಂದುಜಾ, ದೀಪಾ, ಅಕ್ಕಸಾಲಿಗ ರಾಮಚಂದ್ರ ಆಚಾರ್ಯ ಹಾಗೂ ಸಿಸಿಟಿವಿ ಕ್ಯಾಮೆರಾ ದುರಸ್ತಿಗೆ ಬಂದಿದ್ದ ಸಂದೀಪ್ ಇದ್ದಾಗ ದರೋಡೆಕೋರರ ತಂಡ ಒಳಗೆ ನುಗ್ಗಿದೆ. ಅಂದಾಜು 4 ಕೋಟಿಯಷ್ಟು ದರೋಡೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಶೀಘ್ರ ಪ್ರಕರಣ ಬೇಧಿಸಲಾಗುವುದುʼ ಎಂದು ತಿಳಿಸಿದ್ದಾರೆ.