ಬೆಂಗಳೂರಿನಲ್ಲಿ ಅಸ್ಸಾಂ ಮೂಲದ  ಶಂಕಿತ ಉಗ್ರನ ಬಂಧನ
x
ರಾಷ್ಟ್ರೀಯ ತನಿಖಾ ಸಂಸ್ಥೆ

ಬೆಂಗಳೂರಿನಲ್ಲಿ ಅಸ್ಸಾಂ ಮೂಲದ ಶಂಕಿತ ಉಗ್ರನ ಬಂಧನ

ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಗಿರೀಶ್ ಬೆಂಗಳೂರಿನ ಹೊರವಲಯದ ಆನೇಕಲ್ ಸಮೀಪ ಜಿಗಣಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಸ್ಥಳೀಯ ಪೊಲೀಸರ ನೆರವು ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Click the Play button to hear this message in audio format

ನಿಷೇಧಿತ ಭಯೋತ್ಪಾದಕ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ULFA-I) ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ 29 ವರ್ಷದ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬೆಂಗಳೂರಿನಲ್ಲಿ ಗುರುವಾರ ಬಂಧಿಸಿ ಕರೆದೊಯ್ದಿದ್ದಾರೆ.

ಶಂಕಿತ ವ್ಯಕ್ತಿಯನ್ನು ಗಿರೀಶ್ ಬೋರಾ, ಅಲಿಯಾಸ್ ಗೌತಮ್ ಎಂದು ಗುರುತಿಸಲಾಗಿದ್ದು, ಆತನನ್ನು ನಗರದ ಹೊರವಲಯದಿಂದ ಜಿಗಣಿಯಲ್ಲಿ ಬಂಧಿಸಲಾಗಿದೆ. ಈತ ಸುಳ್ಳು ದಾಖಲೆಗಳನ್ನು ನೀಡಿ ವಾಸಿಸುತ್ತಿದ್ದ ಎಂದು ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಎನ್ ಮಂಜುನಾಥ್ ತಿಳಿಸಿದ್ದಾರೆ.

ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಗಿರೀಶ್ ಬೆಂಗಳೂರಿನ ಹೊರವಲಯದ ಆನೇಕಲ್ ಸಮೀಪ ಜಿಗಣಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಸ್ಥಳೀಯ ಪೊಲೀಸರ ನೆರವು ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಬಳಿಕ ಎನ್‌ಐಎ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದೆ ಮತ್ತು ಅವರು ಗುವಾಹಟಿಗೆ ಕರೆದೊಯ್ದಿದ್ದಾರೆ. ಆರೋಪಿಯು ಕೇವಲ 15 ದಿನಗಳಿಂದ ನಗರದಲ್ಲಿದ್ದು, ತನ್ನ ಪತ್ನಿಯೊಂದಿಗೆ ಸ್ನೇಹಿತನ ಮನೆಯಲ್ಲಿ ತಂಗಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಗಿರೀಶ್, ಸ್ನೇಹಿತ ಅಭಿಷೇಕ್ ಗುಹಾ ಹಾಗೂ ಇತರರು ಆ.26ರಂದು ಗುವಾಹಟಿ ಸೇರಿ ಅಸ್ಸಾಂ ರಾಜ್ಯದ ವಿವಿಧೆಡೆ ಒಂದೇ ಬಾರಿಗೆ ಐಇಡಿ ಸ್ಟೋಟಕ್ಕೆ ಸಂಚು ರೂಪಿಸಿ, 26 ಕಡೆಗಳಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟಿದ್ದರು. ಗಿರೀಶ್ ಪ್ರಮುಖವಾಗಿ ಅಸ್ಸಾಂನ ಉತ್ತರ ಲಖಿಂಪುರ ಜಿಲ್ಲೆಯ 10ಕ್ಕೂ ಹೆಚ್ಚು ಕಡೆಗಳಲ್ಲಿ ಐಇಡಿ ಇರಿಸಿದ್ದ. ಆದರೆ, ತಾಂತ್ರಿಕ ಕಾರಣಗಳಿಗೆ ಅವುಗಳು ಸ್ಫೋಟಗೊಂಡಿರಲಿಲ್ಲ.ಈ ಸಂಬಂಧ ಎನ್ಐಎ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಆರಂಭದಲ್ಲಿ ಶಂಕಿತ ಉಗ್ರ ಅಭಿಷೇಕ್ ಗುಹಾನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಈ ಸಂಚಿನಲ್ಲಿ ಭಾಗಿಯಾಗಿದ್ದ ಗಿರೀಶ್ ಬೆಂಗಳೂರಿನ ಜಿಗಣಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಗಿರೀಶನನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ವೇಳೆ ಎನ್‌ಐಎ ಅಧಿಕಾರಿಗಳು ಬೋರಾ ಅವರ ಮೊಬೈಲ್ ಫೋನ್ ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೋರಾ ಇತರ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬುವುದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Read More
Next Story