ಜಾತಿಗಣತಿ ವಿವಾದ | ಸೆ.22 ರಿಂದಲೇ ಸಮೀಕ್ಷೆ; ಮುಂದೂಡಿಕೆ ಪ್ರಶ್ನೆಯಿಲ್ಲ- ಸಿಎಂ ಸ್ಪಷ್ಟನೆ
x

ಜಾತಿಗಣತಿ ವಿವಾದ | ಸೆ.22 ರಿಂದಲೇ ಸಮೀಕ್ಷೆ; ಮುಂದೂಡಿಕೆ ಪ್ರಶ್ನೆಯಿಲ್ಲ- ಸಿಎಂ ಸ್ಪಷ್ಟನೆ

ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಆರೋಪಿಸುತ್ತಿದ್ದಾರೆ. ಇದನ್ನು ಎಲ್ಲ ಸಚಿವರೂ ಒಕ್ಕೊರಲಿನಿಂದ ಖಂಡಿಸಬೇಕು ಎಂದು ಹೇಳಿದ್ದೇನೆ ಎಂದು ಸಿಎಂ ತಿಳಿಸಿದರು.


ರಾಜ್ಯದಲ್ಲಿ ಜಾತಿಗಣತಿ (ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ) ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಜಾತಿಗಣತಿ ಮುಂದೂಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಅವರಿಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ಸಮೀಕ್ಷೆಯ ಬಗ್ಗೆ ಅಭಿಪ್ರಾಯಗಳನ್ನು ಆಯೋಗಕ್ಕೆ ವಿವರಿಸಲಾಗಿದೆ. ಆದರೆ, ಅಂತಿಮ ನಿರ್ಧಾರವನ್ನು ಆಯೋಗವೇ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಆರ್ಥಿಕ, ಸಾಮಾಜಿಕ ಸಮೀಕ್ಷೆಗೆ ಸಚಿವ ಸಂಪುಟದಲ್ಲಿ ವಿರೋಧ ವ್ಯಕ್ತವಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಆರೋಪಿಸುತ್ತಿದ್ದಾರೆ. ಇದನ್ನು ಎಲ್ಲ ಸಚಿವರೂ ಒಕ್ಕೊರಲಿನಿಂದ ಖಂಡಿಸಬೇಕು ಎಂದು ಹೇಳಿದ್ದೇನೆ. ಸಮೀಕ್ಷೆಯು ಸೆ. 22 ರಿಂದ ನಡೆಯಲಿದೆ ಎಂದು ಹೇಳಿದರು.

ಹೊಸ ಜಾತಿ ಕೈ ಬಿಡಲು ನಿರ್ಧಾರ?

ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಅಂತಿಮ ಹಂತದ ಸಿದ್ಧತೆಗಳು ಮುಗಿದಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆಯಲ್ಲಿ ಹೊಸ ಜಾತಿಗಳನ್ನು ಸಮೀಕ್ಷೆಯಿಂದ ಹೊರಗಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸಮೀಕ್ಷೆಗೆ ಪರಿಗಣಿಸಿದ ಸರ್ಕಾರದ ಕ್ರಮಕ್ಕೆ ವಿವಿಧ ಜಾತಿ ಸಮುದಾಯಗಳು, ಸಂಘಟನೆಗಳು ಹಾಗೂ ಸರ್ಕಾರದ ಸಚಿವರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಸಮುದಾಯಗಳನ್ನು ಒಡೆಯುವ ಹುನ್ನಾರ ನಡೆಸಿದೆ ಎಂಬ ಟೀಕೆಗಳೂ ಕೇಳಿ ಬಂದಿದ್ದವು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೊಸ ಜಾತಿಗಳನ್ನು ಸಮೀಕ್ಷೆಯಿಂದ ಕೈ ಬಿಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಎಚ್‌.ಕಾಂತರಾಜು ಹಾಗೂ ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಸೃಷ್ಟಿಸಿದ 331 ಹೊಸ ಜಾತಿಗಳನ್ನು ಸಮೀಕ್ಷೆಯಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಮತಾಂತರ ಕ್ರಿಶ್ಚಿಯನ್ನರನ್ನು ಹಿಂದೂ ಜಾತಿಗಳೊಂದಿಗೆ ಸೇರಿಸಿರುವ ಸರ್ಕಾರದ ಧೋರಣೆಗೆ ಆಕ್ಷೇಪ ವ್ಯಕ್ತವಾಗಿತ್ತು. ಸಚಿವ ಸಂಪುಟ ಸಭೆಯಲ್ಲೂ ವಿರೋಧ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮತಾಂತರ ಕ್ರಿಶ್ಚಿಯನ್ನರು ಸೇರಿದಂತೆ ಹೊಸ 331 ಜಾತಿಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಪ್ರತಿಪಕ್ಷಗಳಿಂದ ವಿರೋಧ

ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೆ ಮತಾಂತರವಾಗಿರುವವರು ಮೂಲ ಜಾತಿಯ ಹೆಸರು ಬಳಸದಂತೆ ಬಿಜೆಪಿ ಆಗ್ರಹಿಸಿತ್ತು. ಮತಾಂತರ ಜಾತಿಗಳನ್ನು ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಒಳಮೀಸಲಾತಿಗೆ ಸೇರಿಸುವ ಹುನ್ನಾರ ಅಡಗಿದೆ ಎಂದು ದೂರಲಾಗಿತ್ತು. ಈ ಸಂಬಂಧ ರಾಜ್ಯಪಾಲರಿಗೂ ಬಿಜೆಪಿ ದೂರು ನೀಡಿತ್ತು.

ಸಮೀಕ್ಷೆಯಲ್ಲಿ 33 ಮತಾಂತರ ಕ್ರಿಶ್ಚಿಯನ್ ಜಾತಿಗಳಿಗೆ ಜಾತಿ ಸಂಖ್ಯೆ ನೀಡಲಾಗಿದೆ. ಅಕ್ಕಸಾಲಿಗ ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್, ಬಾರಿಕಾರ್ ಕ್ರಿಶ್ಚಿಯನ್, ಬೆಸ್ತ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಚರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಸೇರಿದಂತೆ ಹಲವು ಜಾತಿಗಳನ್ನು ಸೇರಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟನೆ ಕೂಡ ನೀಡಿತ್ತು.

ನಾವು ಯಾವುದೇ ಪ್ರತ್ಯೇಕ ಜಾತಿ, ಧರ್ಮವನ್ನು ಸೃಷ್ಟಿ ಮಾಡಿಲ್ಲ.‌ ಜನ ಹೇಳಿರುವ ಜಾತಿಗಳ ಹೆಸರಲ್ಲೇ ದತ್ತಾಂಶ ಸಂಗ್ರಹಿಸಲಾಗಿದೆ. ಆ ದತ್ತಾಂಶವನ್ನು ಪರಿಶೀಲಿಸಿ, ಮತಾಂತರ ಜಾತಿಗಳನ್ನು ಎಲ್ಲಿಗೆ ಸೇರಿಸಬೇಕು ಎಂದು ತಜ್ಞರ ಸಲಹೆ ಮೇರೆಗೆ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿತ್ತು.

Read More
Next Story