Survey by the government to divide castes: R. Ashok outraged
x

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಸಿಎಂ ಸಿದ್ದರಾಮಯ್ಯ

ಜಾತಿ ಸಮೀಕ್ಷೆ ಹಿಂದೂ ಸಮಾಜ ಒಡೆಯುವ ಹುನ್ನಾರ ಆರ್. ಅಶೋಕ್ ಕಿಡಿ

ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಅತ್ಯಧಿಕವಾಗಿದ್ದು, ನಂತರ ಒಕ್ಕಲಿಗರ ಜನಸಂಖ್ಯೆ ಇದೆ. ಆದರೆ ಸರ್ಕಾರ ಜನಸಂಖ್ಯೆ ಪ್ರಮಾಣವನ್ನೇ ಬದಲಿಸಲು ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ತಿಳಿಸಿದರು.


Click the Play button to hear this message in audio format

"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ಬರೆಸಿಕೊಳ್ಳುವ ಈ ಜಾತಿ ಸಮೀಕ್ಷೆ ಅಧಿಕೃತವಲ್ಲ, ಇದು ಕೇವಲ ಸಮಾಜವನ್ನು, ಅದರಲ್ಲೂ ಹಿಂದೂಗಳನ್ನು ಒಡೆಯುವ ಹುನ್ನಾರ," ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ, ತೆರಿಗೆ ನೀತಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಜಾತಿ ಸಮೀಕ್ಷೆಯು ಮತಾಂತರಕ್ಕೆ ವೇದಿಕೆ ಸೃಷ್ಟಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅಶೋಕ್, "ಈ ಸಮೀಕ್ಷೆಯ ಮೂಲಕ ಒಕ್ಕಲಿಗ, ದಲಿತ, ವಿಶ್ವಕರ್ಮ ಸಮುದಾಯಗಳನ್ನು ಕ್ರೈಸ್ತ ಧರ್ಮಕ್ಕೆ ಸೇರಿಸುವ ದುರುದ್ದೇಶದಿಂದ 52 ಹೊಸ ಜಾತಿಗಳನ್ನು ಸೃಷ್ಟಿಸಲಾಗಿದೆ. ಮುಸ್ಲಿಮರು ಮತ್ತು ಕ್ರೈಸ್ತರಲ್ಲಿರುವ ಅನೇಕ ಜಾತಿಗಳನ್ನು ಬಹಿರಂಗಪಡಿಸದೆ, ಕೇವಲ ಹಿಂದೂಗಳಲ್ಲಿ ತಾರತಮ್ಯವಿದೆ ಎಂದು ಮುಖ್ಯಮಂತ್ರಿಗಳು ಬಿಂಬಿಸುತ್ತಿದ್ದಾರೆ. ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ, ಮಹಿಳೆಯರು ಬುರ್ಕಾ ಧರಿಸಬೇಕು, ಹೀಗೆ ಎಲ್ಲ ಧರ್ಮಗಳಲ್ಲೂ ತಾರತಮ್ಯ ಇದೆ," ಎಂದು ಹೇಳಿದರು.

"ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಅತ್ಯಧಿಕವಾಗಿದ್ದು, ನಂತರ ಒಕ್ಕಲಿಗರ ಜನಸಂಖ್ಯೆ ಇದೆ. ಆದರೆ, ಈ ಸರ್ಕಾರವು ಜನಸಂಖ್ಯೆಯ ಪ್ರಮಾಣವನ್ನೇ ಬದಲಿಸಲು ಹೊರಟಿದೆ. ಒಕ್ಕಲಿಗ ಸಮುದಾಯವನ್ನು ಒಡೆದು ಹೊಸ ಜಾತಿಗಳನ್ನು ಹುಟ್ಟುಹಾಕುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮೀಕ್ಷೆ ಮುಂದೂಡಲು ಆಗ್ರಹ

"ಹದಿನೈದು ದಿನಗಳಲ್ಲಿ ಸಮೀಕ್ಷೆ ಮಾಡುವುದು ಅಸಾಧ್ಯ. ದಸರಾ ರಜೆ ಇರುವುದರಿಂದ ಜನರು ಪ್ರವಾಸದಲ್ಲಿರುತ್ತಾರೆ. ಆದ್ದರಿಂದ ಸಮೀಕ್ಷೆಯನ್ನು ತಕ್ಷಣ ಮುಂದೂಡಬೇಕು. ಅಲ್ಲದೆ, ಜನಗಣತಿ ನಡೆಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರವಿದ್ದು, ರಾಜ್ಯ ಸರ್ಕಾರಕ್ಕೆ ಈ ಅಧಿಕಾರವಿಲ್ಲ," ಎಂದು ಅಶೋಕ್ ಸ್ಪಷ್ಟಪಡಿಸಿದರು.

"ರಾಜ್ಯದಲ್ಲಿರುವುದು ಗಬ್ಬರ್ ಸಿಂಗ್ ಟ್ಯಾಕ್ಸ್"

ರಾಜ್ಯದ ತೆರಿಗೆ ನೀತಿಗಳ ಬಗ್ಗೆ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜಿಎಸ್‌ಟಿಯನ್ನು ಇಳಿಕೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದೆ. ಬೆಣ್ಣೆ, ತುಪ್ಪ ಸೇರಿದಂತೆ ದಿನಬಳಕೆ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.5ಕ್ಕೆ ಇಳಿಸಲಾಗಿದೆ. ಯುಪಿಎ ಸರ್ಕಾರವು ಸಿಮೆಂಟ್, ಟಿವಿ, ವಾಷಿಂಗ್ ಮಷಿನ್, ಫ್ರಿಡ್ಜ್‌ಗಳ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಿತ್ತು, ಈಗ ಅದನ್ನು ಶೇ.18ಕ್ಕೆ ಇಳಿಸಲಾಗಿದೆ. ರೆಸ್ಟೋರೆಂಟ್‌ಗಳ ಮೇಲಿನ ತೆರಿಗೆ ಶೇ.21ರಿಂದ ಶೇ.5ಕ್ಕೆ ಇಳಿದಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಹಾಲು, ನೀರು, ವಾಹನ ನೋಂದಣಿ, ಸ್ಟಾಂಪ್ ಡ್ಯೂಟಿಗಳ ಮೇಲೆ ದರ ಏರಿಕೆ ಮಾಡಿ 'ಗಬ್ಬರ್ ಸಿಂಗ್ ಟ್ಯಾಕ್ಸ್' ಹಾಕುತ್ತಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನರ ಮೇಲೆ ₹65,000 ಕೋಟಿ ಹೆಚ್ಚುವರಿ ತೆರಿಗೆ ಸುಲಿಗೆ ಮಾಡುತ್ತಿದೆ. ಕೇಂದ್ರದಂತೆ ರಾಜ್ಯವೂ ತೆರಿಗೆ ಇಳಿಕೆ ಮಾಡಲಿ," ಎಂದು ಸವಾಲು ಹಾಕಿದರು.

ಮಂಡ್ಯದಲ್ಲಿ ಕೋಮುಗಲಭೆಗೆ ಕಾಂಗ್ರೆಸ್ ಕಾರಣ

"ಮಂಗಳೂರು ಶಿಕ್ಷಣ ಮತ್ತು ಜೀವನ ಗುಣಮಟ್ಟದಲ್ಲಿ ಮುಂಚೂಣಿಯಲ್ಲಿದೆ, ಅದೇ ರೀತಿ ಮಂಡ್ಯ ಕೂಡ ಅಭಿವೃದ್ಧಿಯಾಗಬೇಕು. ಆದರೆ, ಮಂಡ್ಯದಲ್ಲಿ ನಾವು ಕೋಮುಗಲಭೆ ಸೃಷ್ಟಿಸುತ್ತಿಲ್ಲ, ಬದಲಾಗಿ ಕಾಂಗ್ರೆಸ್ ನಾಯಕರು ಮತ್ತು ಮತಾಂಧರು ಮಾಡುತ್ತಿದ್ದಾರೆ. ಕೇರಳ ಮೂಲದವರು ಇಲ್ಲಿ ಪ್ರಭಾವ ಬೀರುತ್ತಿದ್ದಾರೆ. ಈದ್ ಮಿಲಾದ್ ಮೆರವಣಿಗೆಗೆ ಯಾರೂ ಕಲ್ಲು ತೂರಲ್ಲ, ಆದರೆ ಗಣೇಶ ಮೆರವಣಿಗೆಗೆ ಮಾತ್ರ ಕಲ್ಲು ತೂರಾಟ ನಡೆಯುತ್ತದೆ. ಹಿಂದೂಗಳು ಎಲ್ಲೂ ಗಲಭೆ ಮಾಡಿಲ್ಲ," ಎಂದು ಅವರು ಪ್ರತಿಪಾದಿಸಿದರು.

"ರಸ್ತೆ ಗುಂಡಿ ಮುಚ್ಚಲೂ ಸರ್ಕಾರದ ಬಳಿ ಹಣವಿಲ್ಲ"

"ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದರಿಂದ ಕಂಪನಿಗಳು ನಗರವನ್ನು ಬಿಟ್ಟು ಹೋಗುತ್ತಿವೆ. ಆದರೆ, ಗುಂಡಿ ಮುಚ್ಚಲು ಸಹ ಸರ್ಕಾರದ ಬಳಿ ಅನುದಾನವಿಲ್ಲ. ಅಭಿವೃದ್ಧಿಗೆ ಹಣವಿಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರರು ಮತ್ತು ಶಾಸಕರೇ ಹಲವು ಬಾರಿ ಹೇಳಿದ್ದಾರೆ. ಈಗ ಟೆಂಡರ್ ಕರೆದರೆ, ಕಾಮಗಾರಿ ಆರಂಭವಾಗಲು ಮತ್ತಷ್ಟು ವಿಳಂಬವಾಗಲಿದೆ," ಎಂದು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

Read More
Next Story