Naxal Activity | ಮುಂಡಗಾರು ಲತಾ ನೇತೃತ್ವದಲ್ಲಿ ಆರು ನಕ್ಸಲರ ಶರಣಾಗತಿ?
ಶಾಂತಿಗಾಗಿ ನಾಗರಿಕ ಸಮಿತಿ ಹಾಗೂ ಸರ್ಕಾರದ ಮೇಲೆ ಭರವಸೆ ಇಟ್ಟು ಮುಂಡಗಾರು ಲತಾ, ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಮುಖ್ಯ ವಾಹಿನಿಗೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಪಶ್ಚಿಮ ಘಟ್ಟಗಳಲ್ಲಿ ಸಕ್ರಿಯರಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ರಾಜ್ಯ ಸರ್ಕಾರ ಆರಂಭಿಸಿದೆ. ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿರುವ ಕಾರಣ ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಆರು ಮಂದಿ ನಕ್ಸಲರು ಮುಖ್ಯವಾಹಿನಿಗೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ.
ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್ ಬಳಿಕ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಬೇಕೆಂಬ ಪ್ರಗತಿಪರರು, ಚಿಂತಕರ ಮನವಿಗೆ ಸ್ಪಂದಿಸಿರುವ ಸರ್ಕಾರ ಶರಣಾಗತಿಗೆ ಮುಕ್ತ ಆಹ್ವಾನ ನೀಡಿತ್ತು. ಈ ಹಿನ್ನೆಲೆಯಲ್ಲಿ ಮುಂಡಗಾರು ಲತಾ, ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಶರಣಾಗತರಾಗಲು ಸಿದ್ಧರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿಯನ್ನು ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆಗೆ ನೀಡಲಾಗಿತ್ತು. ಮುಖ್ಯವಾಹಿನಿಗೆ ಬರಬೇಕಾದರೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ನಕ್ಸಲರು ಬೇಡಿಕೆ ಇಟ್ಟಿದ್ದರು, ಈ ಸಂಬಂಧ ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಗುಪ್ತಚರ ಇಲಾಖೆ ಅಧಿಕಾರಿಗಳು, ಮುಖ್ಯಮಂತ್ರಿ ಅವರೊಂದಿಗೆ ನಿರಂತರ ಸಭೆಗಳನ್ನು ನಡೆಸಿದ್ದು, ನಕ್ಸಲರ ಬೇಡಿಕೆ ಈಡೇರಿಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಆರಂಭಿಸಲಾಗಿದೆ.
ಶರಣಾಗತಿ ಅಥವಾ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ಆರಂಭವಾಗಿದೆ. ಒಂದೆರಡು ದಿನದಲ್ಲಿ ಆರೂ ಮಂದಿ ನಕ್ಸಲರು ಮುಖ್ಯವಾಹಿನಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ಘನತೆಯಿಂದ ನಡೆಯಬೇಕು. ನಕ್ಸಲರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು. ಹೋರಾಟದ ಮಾರ್ಗ ಬದಲಿಸಿ ಪ್ರಜಾತಾಂತ್ರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ತಡೆಯಬಾರದು ಎಂಬ ನಕ್ಸಲ್ ಶರಣಾಗತಿ ಸಮಿತಿಯ ಷರತ್ತುಗಳಿಗೂ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶಾಂತಿಗಾಗಿ ನಾಗರಿಕರ ವೇದಿಕೆಯ ಕೆ.ಎಲ್. ಅಶೋಕ್ ಅವರು, ನಕ್ಸಲರ ಶರಣಾಗತಿ ಬಳಿಕ ಅವರ ಮೇಲೆ ಸಂಬಂಧವಿಲ್ಲದ ಪ್ರಕರಣಗಳನ್ನು ಹಾಕಬಾರದು. ಜೈಲಿನಲ್ಲಿ ಕೊಳೆಯುವಂತಹ ಸ್ಥಿತಿ ನಿರ್ಮಿಸಬಾರದು. ಶರಣಾದ ಬಳಿಕ ತ್ವರಿತವಾಗಿ ಜಾಮೀನಿನ ಮೇಲೆ ಹೊರಬರಲು ಸಹಕರಿಸಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ಕಾನೂನು ನೆರವು ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಜೊತೆಗೆ ಕೇರಳ, ತಮಿಳುನಾಡು ಸರ್ಕಾರಗಳೂ ಕೂಡ ನಕ್ಸಲರ ಬಗ್ಗೆ ಅನುಕಂಪದಿಂದ ವರ್ತಿಸಲಿವೆ ಎಂದು ಅಭಯ ನೀಡಿದೆ ಎಂದು ತಿಳಿಸಿದ್ದಾರೆ.
ಶರಣಾಗತಿ ಪ್ರಯತ್ನ ಆರಂಭಿಸಿದ್ದ ಸಮಿತಿ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಕ್ರಿಯರಾಗಿರುವ ನಿಷೇಧಿತ ಸಿಪಿಐಎಂಎಲ್-ಮಾವೋವಾದಿ ಪಕ್ಷದ ಕಾರ್ಯಕರ್ತರ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿಯನ್ನು ಸರ್ಕಾರ ನಕ್ಸಲ್ ಶರಣಾಗತಿ ಸಮಿತಿಗೆ ವಹಿಸಿತ್ತು. ಅದರಂತೆ ಸಮಿತಿ ಸದಸ್ಯರಾದ ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ, ಕೆ.ಪಿ.ಶ್ರೀಪಾಲ್ ಇತರರು ಮಾವೋವಾದಿಗಳನ್ನು ಯಾವುದೇ ಜೀವಹಾನಿಯಾಗದಂತೆ ಮುಖ್ಯವಾಹಿನಿಗೆ ಕರೆತರುವುದಾಗಿ ಹೇಳಿದ್ದರು.
ನಕ್ಸಲರು ಮುಖ್ಯವಾಹಿನಿ ಬಂದು ಪ್ರಜಾತಾಂತ್ರಿಕ ವ್ಯವಸ್ಥೆ ಹೋರಾಟ ನಡೆಸಲು ಅನುವು ಮಾಡಿಕೊಡಬೇಕು. ನಕ್ಸಲ್ ಮುಖಂಡರ ಮೇಲಿನ ಪ್ರಕರಣಗಳ ವಿಲೇವಾರಿಗೆ ತ್ವರಿತಗತಿಯ ನ್ಯಾಯಾಲಯ ಸ್ಥಾಪನೆಗೆ ಒತ್ತಾಯಿಸಿದ್ದರು.
ಕಠಿಣ ಎಚ್ಚರಿಕೆ ನೀಡಿದ್ದ ಸಿಎಂ
ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು (ನಕ್ಸಲರು) ತಮ್ಮ ಜೀವವನ್ನೂ ಕಳೆದುಕೊಳ್ಳುವ ಜೊತೆಗೆ ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನೇ ಕೂರಲು ಸಾಧ್ಯವಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೂ ಹಿಂಜರಿಯುವುದಿಲ್ಲ. ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದರು.
ನಕ್ಸಲರು ಮುಂದಿಟ್ಟ ಬೇಡಿಕೆಗಳೇನು?
- ಭೂಮಿ ಇಲ್ಲದ ಕುಟುಂಬಕ್ಕೆ ಐದು ಎಕರೆ ಕೃಷಿ ಭೂಮಿ ನೀಡಿ, ಶಾಶ್ವತ ಹಕ್ಕುಪತ್ರ ನೀಡಬೇಕು. ಆದಿವಾಸಿ ಕುಟುಂಬಗಳಿಗೆ ಭೂಮಿ ಮತ್ತು ವಸತಿ ನೀಡಬೇಕು. ಕೃಷಿ ಯೋಗ್ಯ ಪಾಳುಭೂಮಿಯನ್ನು ಭೂಹೀನರಿಗೆ ಹಂಚಬೇಕು. ಆಹಾರದ ಬೆಳೆ, ಮುಖ್ಯವಾಗಿ ಭತ್ತ ಬೆಳೆಯುವ ರೈತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು.
- ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು. ಹೈಟೆಕ್ ಟೂರಿಸಂ ನಿಲ್ಲಿಸಿ ಪರಿಸರ ರಕ್ಷಿಸಬೇಕು. ಆದಿವಾಸಿಗಳಿಗೆ ಕಾಡಿನ ಮೇಲಿನ ಎಲ್ಲ ರೀತಿಯ ಅಧಿಕಾರ ಇರಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ರದ್ದಾಗಬೇಕು. ನಿರುದ್ಯೋಗಿಗಳ ಅರ್ಹತೆಗೆ ತಕ್ಕಂತೆ ಉದ್ಯೋಗ ಕೊಡಬೇಕು. ಸಾಂಸ್ಕೃತಿಕ ಬದಲಾವಣೆಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಕ್ರಮ ಕೈಗೊಳ್ಳಬೇಕು.
- ಹವಾಮಾನ ಬದಲಾವಣೆಯಿಂದ ಕೃಷಿ ಬೆಳೆ, ಮನುಷ್ಯನ ಬದುಕು ಮತ್ತು ಪ್ರಕೃತಿಯ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳಬೇಕು.
- ಮೂರು ರಾಜ್ಯಗಳಲ್ಲಿ ರೈತರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.