ಸುರಪುರ ಉಪಚುನಾವಣೆ | ಕಾಂಗ್ರೆಸ್‌ನ ವೇಣುಗೋಪಾಲ್ ನಾಯಕ ಗೆಲುವು
ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲ್ ನಾಯಕ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಮಂಗಳವಾರ (ಜೂ.4) ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲ್ ನಾಯಕ ಅವರು ಭರ್ಜರಿ ಜಯಗಳಿಸಿದ್ದಾರೆ.
ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಜಯಗಳಿಸಿದ್ದರು. ಆದರೆ ಈ ವರ್ಷದ ಫೆಬ್ರವರಿ 25ರಂದು ಅವರು ಹಠಾತ್ ನಿಧನ ಹೊಂದಿದ್ದರು. ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮೇ 7ರಂದು ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾ ವೇಣುಗೋಪಾಲ ನಾಯಕ ಮತ್ತು ಪ್ರತಿಪಕ್ಷವಾದ ಬಿಜೆಪಿ-ಜೆಡಿಎಸ್‌ನಿಂದ ಮಾಜಿ ಶಾಸಕ, ಸಚಿವ ರಾಜಾ ನರಸಿಂಹ ನಾಯಕ (ರಾಜೂಗೌಡ) ಕಣಕ್ಕಿಳಿದಿದ್ದರು.
ಇದೀಗ ಫಲಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ 1,14,886 ಮತಗಳನ್ನು ಪಡೆದರೆ, ಎದುರಾಳಿಯಾಗಿದ್ದ ಬಿಜೆಪಿಯ ರಾಜೂ ಗೌಡ 96,566 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ವೇಣುಗೋಪಾಲ ನಾಯಕ 18,320 ಮತಗಳ ಅಂತರದ ಜಯ ದಾಖಲಿಸಿದ್ದಾರೆ.
ರಾಜಾ ವೇಣುಗೋಪಾಲ ನಾಯಕ ಅವರಿಗೆ ಇದು ಮೊದಲ ಚುನಾವಣೆಯಾಗಿತ್ತು. ನಿಧನರಾದ ಕಾಂಗ್ರೆಸ್ ಶಾಸಕ ದಿ. ರಾಜಾ ವೆಂಕಟಪ್ಪ ನಾಯಕ ಅವರ ಹಿರಿಯ ಪುತ್ರರಾಗಿದ್ದಾರೆ.