ಅನುಮಾನ, ಆತಂಕ, ಆಶ್ಚರ್ಯ- ಒಟ್ಟಾಗಿ ಹುಟ್ಟಿಸಿದ ಕನ್ನಡ ಚಿತ್ರರಂಗದ ದೊಡ್ಡವರ ʻದೊಡ್ಡತನʼ
x

ಅನುಮಾನ, ಆತಂಕ, ಆಶ್ಚರ್ಯ- ಒಟ್ಟಾಗಿ ಹುಟ್ಟಿಸಿದ ಕನ್ನಡ ಚಿತ್ರರಂಗದ ದೊಡ್ಡವರ ʻದೊಡ್ಡತನʼ

ಕೇರಳದ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಾಗಬೇಕೆಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಕನ್ನಡ ಚಿತ್ರರಂಗ ನಿಧಾನವಾಗಿಯಾದರೂ ಈಗ ಸಕ್ರೀಯವಾಗಿದೆ. ಆದರೆ, ಒತ್ತಾಯ ಹೆಚ್ಚಿದ ಮೇಲೆ ಸಕ್ರೀಯವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯಲಿರುವ ಸಭೆಯ ಫಲಿತದ ಬಗ್ಗೆ ಅನುಮಾನಗಳೂ ಇವೆ. ಅದಕ್ಕೆ ಕೆಲವರ ಮಾತುಗಳೇ ಸಾಕ್ಷಿ.


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಮಹತ್ವದ ಸಭೆಯನ್ನು ಸೆಪ್ಟೆಂಬರ್‌ 6 ರಂದು ಮಂಡಳಿಯ ಅವರಣದಲ್ಲಿ ಕರೆದಿರುವಾಗಲೇ, ಆಯ್ದ ಕೆಲವು ಮಂದಿ, ಕನ್ನಡ ಚಿತ್ರರಂಗ ಪರಿಶುದ್ಧ, ಇಲ್ಲಿ ಅಂಥದ್ದೇನೂ ನಡೆದಿಲ್ಲ. “ಕನ್ನಡ ಚಿತ್ರರಂಗದಲ್ಲಿ ತಮ್ಮ ಗಮನಕ್ಕೆ ಬಂದ ಹಾಗೆ ಲೈಂಗಿಕ ದೌರ್ಜನ್ಯ ನಡೆದಿಲ್ಲ” ಎಂದು ತಿಪ್ಪೇ ಸಾರಿಸುವ ಕೆಲಸಕ್ಕೆ ಮುಂದಾಗಿರುವುದು ಆಶ್ಚರ್ಯ ಹುಟ್ಟುಸಿರುವುದರೊಂದಿಗೆ , ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಮಹತ್ವದ ಸಭೆಯನ್ನು ಸೆಪ್ಟೆಂಬರ್‌ 6 ರಂದು ಮಂಡಳಿಯ ಅವರಣದಲ್ಲಿ ಕರೆದಿರುವಾಗಲೇ, ಆಯ್ದ ಕೆಲವು ಮಂದಿ, ಕನ್ನಡ ಚಿತ್ರರಂಗ ಪರಿಶುದ್ಧ, ಇಲ್ಲಿ ಅಂಥದ್ದೇನೂ ನಡೆದಿಲ್ಲ. “ಕನ್ನಡ ಚಿತ್ರರಂಗದಲ್ಲಿ ತಮ್ಮ ಗಮನಕ್ಕೆ ಬಂದ ಹಾಗೆ ಲೈಂಗಿಕ ದೌರ್ಜನ್ಯ ನಡೆದಿಲ್ಲ” ಎಂದು ತಿಪ್ಪೇ ಸಾರಿಸುವ ಕೆಲಸಕ್ಕೆ ಮುಂದಾಗಿರುವುದು ಆಶ್ಚರ್ಯ ಹುಟ್ಟುಸಿರುವುದರೊಂದಿಗೆ , ಹಲವು ಅನುಮಾನಗಳಿಗೆ ಕಾರಣವಾಗಿದೆ.

ದ-ಫೆಡರಲ್‌-ಕರ್ನಾಟಕ ಮಾತನಾಡಿಸಿದ ಕನ್ನಡ ಚಿತ್ರರಂಗದ ಕಲಾವಿದೆಯರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ಮತ್ತು ಹಾಗೆ ಹೇಳುತ್ತಿರುವ ಮಂದಿಯ ಚಿತ್ರರಂಗದ ಕುರಿತ ಕಾಳಜಿಯನ್ನು ಪ್ರಶ್ನಿಸುತ್ತಿದ್ದಾರೆ.

ತೀರಾ ಆಶ್ಚರ್ಯ ಹುಟ್ಟಿಸಿರುವುದು, ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಮಾತುಗಳು. ಫೈರ್‌ (Film Industry for Rights and Equality (FIRE) ಒಕ್ಕೂಟದ ನಿಯೋಗವೊಂದು ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿಯೊಂದನ್ನು ಸಲ್ಲಿಸಿರುವುದಕ್ಕೂ ನಮಗೂ ಸಂಬಂಧವಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಶೋಷಣೆ ನಡೆದ ಘಟನೆ ನಮ್ಮ ಅರಿವಿಗೆ ಬಂದಿಲ್ಲ. ಅಂಥ ಪ್ರಕರಣಗಳು ನಡೆದಿದ್ದರೆ, ಅಂಥವರು ಮಂಡಳಿಗೆ ತಮ್ಮ ದೂರು ಸಲ್ಲಿಸಬಹುದು. ನಾವು ಈ ಹಿಂದೆ ಇಂಥ ನೂರಾರು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ”.

ತಾರಾ ಕಂಡಂತೆ ಕನ್ನಡ ʼತಾರಾಲೋಕʼದಲ್ಲಿ ದೌರ್ಜನ್ಯವಿಲ್ಲ

ಹಿರಿಯ ಕಲಾವಿದೆ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ತಾರಾ ಅನುರಾಧ ಅವರು ಹೇಳಿರುವ ಮಾತುಗಳು ಈ ರೀತಿ ಇವೆ; “ನನ್ನ ಗಮನಕ್ಕೆ ಬಂದ ಹಾಗೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಕನ್ನಡ ಚಿತ್ರೋದ್ಯಮದಲ್ಲಿ ಇಲ್ಲ. ಕನ್ನಡ ಚಿತ್ರರಂಗ ಆ ಮಟ್ಟಿಗೆ ಹಾಳಾಗಿಲ್ಲ. ನಮ್ಮ ಚಿತ್ರರಂಗದಲ್ಲಿ ಕುಟುಂಬದ ಬಾಂಧವ್ಯವಿದೆ. ಆದರೆ ಇಂಥ ಪ್ರಕರಣಗಳು ಬೆಳಕಿಗೆ ಬಂದಾಗ ಖಂಡಿತ ವಿರೋಧಿಸಬೇಕು. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಕುರಿತು ಅಧ್ಯಯನ ಮಾಡಲು ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ. ಆ ರೀತಿಯ ಒತ್ತಾಯದಲ್ಲಿ ತಪ್ಪಿಲ್ಲ. ಮಹಿಳೆಯರ ರಕ್ಷಣೆಗೆ ರಾಜ್ಯದಲ್ಲಿ ಮಹಿಳಾ ಆಯೋಗವಿದೆ. ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದೆ. ಈ ರೀತಿ ಸಮಸ್ಯೆಗಳು ಎದುರಾದಾಗ, ಈ ಸಂಸ್ಥೆಗಳು ಮಹಿಳೆಯರಿಗೆ ನ್ಯಾಯ ದೊರಕಿಸುತ್ತಾರೆಂಬ ನಂಬಿಕೆ ನನಗಿದೆ” ಎಂದಿದ್ದಾರೆ.

ರಮೇಶ್ ಬೆಂಬಲ

“ನಾನು ಅನ್ಯಾಯವನ್ನು ಖಂಡಿಸುತ್ತೇನೆ. ಹೆಣ್ಣು ಮಕ್ಕಳ ಆತ್ಮಗೌರವಕ್ಕೆ ಧಕ್ಕೆಯಾಗುವಂಥ ಅನ್ಯಾಯದ ವಿರುದ್ಧ ಯಾರೇ ಧ್ವನಿ ಎತ್ತಿದರೂ, ಅಂಥವರಿಗೆ ನನ್ನ ಬೆಂಬಲವಿದೆ. ಆದರೆ ಲೈಂಗಿಕ ದೌರ್ಜನ್ಯದಂಥ ಸಂಗತಿಗೆ ಚಿತ್ರರಂಗನ್ನು ಹೊಣೆ ಮಾಡಬೇಡಿ. ಸೃಜನಶೀಲತೆಯ ಸಾಗರದಂತಿರುವ ಚಿತ್ರರಂಗದ ಘನತೆಗೆ ಧಕ್ಕೆ ತರಬೇಡಿ ಏಕೆಂದರೆ, ಲೈಂಗಿಕ ದೌರ್ಜನ್ಯ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತವಲ್ಲ. ಆದರೆ ನಾನು ಹೋರಾಟಗಾರನಲ್ಲದ ಕಾರಣ; Film Industry for Rights and Equality (FIRE) ಒಕ್ಕೂಟದ ಭಾಗವಾಗಲಾರೆ” ಎಂದು ನಟ ರಮೇಶ್‌ ಅರವಿಂದ್‌ ಹೇಳುತ್ತಾರೆ. “ಸಿನಿಮಾ ರಂಗದಲ್ಲಿ ಕೆಲವರಿಂದ ತಪ್ಪಾಗಿದ್ದರೆ ಅವರಿಗೆ ಯಾವ ಶಿಕ್ಷೆಯನ್ನಾದರೂ ಕಾನೂನು ನೀಡಲಿ. ಅದನ್ನು ಬಿಟ್ಟು ಲೈಂಗಿಕ ಕಿರುಕುಳದಂಥ ವಿಷಯವನ್ನು generalize ಮಾಡಬೇಡಿ. ಕಳೆದ ಮೂವತ್ತೈದು ವರ್ಷಗಳಿಂದ ನಾನು ಇಲ್ಲಿ ಆಕ್ಷರಶಃ ಬೆವರು ಸುರಿಸಿ ದುಡಿಯುತ್ತಿದ್ದೇನೆ. ನನ್ನಂಥವರು ಇಲ್ಲಿ ನೂರಾರು ಮಂದಿ ಇದ್ದಾರೆ. ಮತ್ತು ಈ ಅದ್ಭುತವಾದ ಸೃಜನಶೀಲ ಮಾಧ್ಯಮದ ಭಾಗವಾಗಿದ್ದಾರೆ. ನಮ್ಮ ಮನಸ್ಸಿನ ಭಾಗದಂತಿರುವ ಈ ಕ್ಷೇತ್ರದ ಘನತೆಗೆ ಧಕ್ಕೆ ತರುವುದು ಸರಿಯಲ್ಲ” ಎಂದು ರಮೇಶ್‌ ಭಾವುಕರಾಗುತ್ತಾರೆ.

ಕೇವಲ ಸಹಿ ಹಾಕುವುದರಿಂದ ಪ್ರಯೋಜನವಿಲ್ಲ

ಆದರೆ, ಕ್ರಿಯಾತ್ಮಕ ಕಾರ್ಯಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ನೀರು ಹರಿಸಲು ಕಾರಣರಾದ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್‌ ಶೆಟ್ಟಿ ಅವರ ಮಾತುಗಳು ಈ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಕೇಳಿಸತ್ತದೆ.

“ಕಲಾವಿದೆಯರ ಸಮಸ್ಯೆ ಆಲಿಸಲು ಸಮಿತಿ ರಚಿಸಬೇಕೆಂಬುದು ಸೂಕ್ತ ಬೇಡಿಕೆ. ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಈ ಮನವಿ ಪತ್ರಕ್ಕೆ ಸಹಿ ಮಾಡಿರುವ ಮಂದಿ, ಕೇವಲ ಸಹಿ ಹಾಕಿ ಕುಳಿತರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ನಾನಂತೂ, ಅಲ್ಲಿ ಹೋಗಿ ಪರಿಹಾರ ಹುಡುಕುವ ಪ್ರಕ್ರಿಯೆ ಹೇಗಿದೆ ಎಂದು ನೋಡುವೆ…” ಎಂದು ಮನವಿ ಪತ್ರಕ್ಕೆ ಸಹಿ ಹಾಕಿರುವ 136 ಮಂದಿ ಚಿತ್ರರಂಗ, ಸಾಮಾಜಿಕ-ಸಾಂಸ್ಕೃತಿಕ ರಂಗದ ಗಣ್ಯರ ಪೈಕಿ ಒಬ್ಬರಾಗಿರುವ ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ʼಕಪಾಟಿನೊಳಗಿನʼ ಸತ್ಯಗಳು

2018ರಲ್ಲಿ ಕನ್ನಡ ಚಿತ್ರರಂಗದ ಕೆಲವು ನಟರು, ನಿರ್ಮಾಪಕರು, ನಿರ್ದೇಶಕರ ವಿರುದ್ಧ ಕಲಾವಿದೆಯರಿಗೆ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದಿದ್ದವು. ಅವುಗಳಲ್ಲಿ ಮುಖ್ಯವಾದದ್ದು ನಟಿ ಶೃತಿ ಹರಿಹರನ್‌ ಅವರು ನಟ ಅರ್ಜುನ್‌ ಸರ್ಜಾ ವಿರುದ್ಧ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪ. “ಈ ಪ್ರಕರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಪೊಲೀಸ್‌ ಮತ್ತು ನ್ಯಾಯಾಂಗದ ಕಟ್ಟೆಗಳನ್ನು ತಲುಪಿ ನ್ಯಾಯಕ್ಕಾಗಿ ಹಂಬಲಿಸಿತು. ಆ ಸಂದರ್ಭದಲ್ಲಿ ನಮ್ಮ ಸಮಾಜ ತೋರಿದ ನಡತೆ, ಶೃತಿ ಹರಿಹರನ್‌ ಅವರಿಗೆ ಅವಕಾಶಗಳೇ ಇಲ್ಲದಂತೆ ಮಾಡಿದ ಕ್ರಿಯೆ, ಅವರನ್ನು ಹಣಿಯಲು ಎಲ್ಲ ದುಷ್ಟ ಮನಸ್ಸುಗಳು ಒಂದಾದ ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ” ಎಂದು ಹೆಸರು ಬಹಿರಂಗ ಪಡಿಸಲು ಬಯಸದ ನಟಿಯೊಬ್ಬರು ನೊಂದುಕೊಳ್ಳುತ್ತಾರೆ. ಇದೇ ರೀತಿ ನಟಿ ಸಂಗೀತಾ ಭಟ್‌ ಕೂಡ ಚಿತ್ರರಂಗದ ಪ್ರಮುಖರೊಬ್ಬರು ತಮ್ಮ ಮೇಲೆ ನಡೆಸಿದ ಲೈಂಗಿಕ ಶೋಷಣೆಯ ಬಗ್ಗೆ ಧ್ವನಿ ಎತ್ತಿದ್ದರು. ಇಂಥ ಹೊತ್ತಿನಲ್ಲಿ ಕನ್ನಡದ ಅನೇಕ ಸೃಜನಶೀಲ ಮನಸ್ಸುಗಳು ಇಂಥವರ ಪರವಾಗಿ ನಿಂತಿತ್ತು. ನಟಿ ಶ್ರದ್ದಾ ಕೂಡ ಆಗ ಇವರೆಲ್ಲರ ಬೆಂಬಲಕ್ಕೆ ನಿಂತಿದ್ದನ್ನು ಮರೆಯಲು ಸಾಧುವೇ ಇಲ್ಲ.

ಲೈಂಗಿಕ ದೌರ್ಜನ್ಯʼದ ಬಲಿಪಶುವಾದ ಶೃತಿ ಹರಿಹರನ್‌ ಹೇಳುವುದೇನು?

ಆರು ವರ್ಷಗಳ ಹಿಂದೆ ನೊಂದು ಬೆಂದು, ಈಗ ತನ್ನ ಗಂಡ ಮತ್ತು ಕಂದಮ್ಮನೊಂದಿಗೆ ಹೊಸ ಬದುಕು ಆರಂಭಿಸಿರುವ ಸೃಜನಶೀಲ ನಟಿ, ಶೃತಿ ಹರಿಹರನ್‌ ಅವರು ʼದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿ, “ಮಲೆಯಾಳಂ ಚಿತ್ರರಂಗದಲ್ಲಿ ಕಲಾವಿದೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಅಧ್ಯಯನಕ್ಕಾಗಿ ರೂಪುಗೊಂಡಿದ್ದ, ಹೇಮಾ ಸಮಿತಿ ಮಾದರಿಯಲ್ಲಿಯೇ ಕರ್ನಾಟಕ ಸರ್ಕಾರ ಕನ್ನಡ ಚಿತ್ರರಂಗದ ಕಲಾವಿದೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಕುರಿತು ತನಿಖೆ ನಡೆಸಿ, ವರದಿ ಪಡೆದು ಕ್ರಮಕೈಗೊಳ್ಳುವುದು ಇಂದಿನ ತುರ್ತು ಅಗತ್ಯ” ಎಂದಿದ್ದಾರೆ.

ಸಹ-ಮಹಿಳಾ ಕಲಾವಿದರ ಚಿಂತಾಜನಕ ಸ್ಥಿತಿ-ಗತಿ

“ಪ್ರತಿ ಚಿತ್ರರಂಗಕ್ಕೂ ಅದರದರದೇ ಆದ ಸಮಸ್ಯೆಗಳಿವೆ. ಲೈಂಗಿಕ ಶೋಷಣೆ ಮಾತ್ರವೇ ಅಲ್ಲ. ಬೇರೆಬೇರೆ ರೀತಿಯ ಸಾಕಷ್ಟು ಸಮಸ್ಯೆಗಳಿವೆ. ನಟಿಯರ ಕಷ್ಟನಷ್ಟಗಳು ಒಂದೆಡೆಯಾದರೆ, ಸಹ ಮಹಿಳಾ ಕಲಾವಿದರ ಸ್ಥಿತಿಯಂತೂ ತೀರಾ ಚಿಂತಾಜನಕ. ಅವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಶೌಚಾಲಯದಂಥ ಕನಿಷ್ಠ ಸೌಲಭ್ಯಗಳೂ ಅವರಿಗೆ ಅಲಭ್ಯ. ಹೆಣ್ಣುಮಕ್ಕಳು ಋತುಮತಿಯಾದ ಸಂದರ್ಭದಲ್ಲಿ ಅವರ ಸ್ಥಿತಿಯನ್ನು ಅವರನ್ನು ಮಾತನಾಡಿಸಿಯೇ ತಿಳಿದುಕೊಳ್ಳಿ. ಇಷ್ಟರ ನಡುವೆ ನಾಳೆ ಒಳ್ಳೆಯದಾದೀತು ಎಂಬ ಭರವಸೆಯೊಂದಿಗೆ ಅವರು ಮತ್ತೆ ಮತ್ತೆ ʼಕೆಲಸʼಕ್ಕೆ ಹಾಜರಾಗುತ್ತಾರೆ. ಲೈಂಗಿಕ ಶೋಷಣೆಯ ಸಮಸ್ಯೆಯ ಜೊತೆ ಜೊತೆಗೆ, ಈ ಬಗ್ಗೆ ಸರ್ಕಾರ, ಕನ್ನಡ ಚಿತ್ರರಂಗ ಎಲ್ಲರೂ ಕೂಡಲೇ ಗಮನ ಹರಿಸಬೇಕಿದೆ” ಎನ್ನುತ್ತಾರೆ ಶೃತಿ.

ಆ ಕ್ಷಣದ ಸತ್ಯವಾದ ಶೋಷಣೆ

“ಲೈಂಗಿಕ ಶೋಷಣೆಯೆಂದಾಗ ಸಹಜವಾಗಿ ಮಾಧ್ಯಮಗಳಿಗೆ ಹಬ್ಬ. ಅವರು ಅದನ್ನು ವಿಜೃಂಭಿಸುತ್ತಾರೆ. ಕೆಲಕಾಲದ ನಂತರ ಮರೆತು ಬಿಡುತ್ತಾರೆ. ಇದು ಆ ಕ್ಷಣದ ಸತ್ಯವಾಗಿಯಷ್ಟೇ ಉಳಿಯುತ್ತದೆ. ಈಗ ನೋಡಬೇಕಿರುವುದು ಸಮಸ್ಯೆಯ ಒಂದು ಮುಖವನ್ನಷ್ಟೇ ಅಲ್ಲ. ಚಿತ್ರರಂಗದಲ್ಲಿರುವ ಲಿಂಗ-ತಾರತಮ್ಯ ಸಮಸ್ಯೆಗೆ ಪರಿಹಾರ ದೊರಕಬೇಕು. ಮಹಿಳೆಯರು ಆತ್ಮಗೌರವದಿಂದ ಘನತೆಯಿಂದ ಬದುಕುವಂಥ ವಾತಾವರಣ ನಿರ್ಮಾಣ ಮಾಡಬೇಕು” ಎನ್ನುವ ಶೃತಿ ಹರಿಹರನ್ ಕನ್ನಡ ಚಿತ್ರರಂಗದ ವಾಸ್ತವ ಸಮಸ್ಯೆಗಳತ್ತ ಗಮನ ಹರಿಸುವಂತೆ ಸಂಬಂಧ ಪಟ್ಟ ಎಲ್ಲರಿಗೂ, ವಿಶೇಷವಾಗಿ ಮಾಧ್ಯಮವರಿಗೂ ಮನವಿ ಮಾಡುತ್ತಾರೆ.

“ತಮ್ಮ ಮೇಲಾಗುತ್ತಿರುವ ಶೋಷಣೆಗಳ ಬಗ್ಗೆ ಕಲಾವಿದೆಯರು, ಸಹ-ಕಲಾವಿದೆಯರು ಬಹಳ ಹಿಂದೆಯೇ ಧ್ವನಿ ಎತ್ತಿದ್ದರು. ಆದರೆ ಪುರುಷ ಪ್ರಧಾನವಾ ಕನ್ನಡ ಚಿತ್ರರಂಗ ಅವರ ಧ್ವನಿಯನ್ನು ಅಡಗಿಸುವಲ್ಲಿ ಯಶಸ್ವಿಯಾಯಿತು. ಶೃತಿ ಹರಿಹರನ್‌ರಂಥ ಕೆಲವರು ಕನ್ನಡದಲ್ಲಿ ನ್ಯಾಯಾಂಗದ ಮೊರೆ ಹೋದರು. ನ್ಯಾಯ ಸಿಕ್ಕುವ ಆಸೆಯೇ ಕಮರಿಹೋಗುವಷ್ಟು ಕಾಲ ಪ್ರಕರಣ ನ್ಯಾಯಾಲಯದಲ್ಲಿ ಎಳೆದುಕೊಂಡು ಹೋಗಿ, ಒಮ್ಮೆ ಲೈಂಗಿಕ ಶೋಷಣೆಗೊಳಗಾದವರು, ನ್ಯಾಯಾಲಯದ ಕಟಕಟೆಯಲ್ಲಿ ಮತ್ತೆ ಮತ್ತೆ ನರಳುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಅವರ ಭವಿಷ್ಯಕ್ಕೆ ಕುತ್ತಾದ ಕಂಗಾಲಾದ ಜೀವಗಳೆಷ್ಟೋ…” ಎನ್ನುತ್ತಾರೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್.‌

ಸಮಿತಿ ರಚನೆಗೆ ಎಲ್ಲರಿಂದ ಸ್ವಾಗತ

ಯಾರು ಏನೇ ಹೇಳಿದರೂ, ದ ಫೆಡರಲ್‌—ರ್ನಾಟಕದೊಂದಿಗೆ ಮಾತನಾಡಿರುವ ಹಲವಾರು ಮಂದಿ ಚಿತ್ರರಂಗದ ಗಣ್ಯರು ಸರ್ಕಾರ ರಚಿಸಲಿರುವ ಮಾಜಿ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯನ್ನು ಸ್ವಾಗತಿಸಿದ್ದಾರೆ. ಹಾಗೆಯೇ, ಕಾರ್ಪೋರೇಟ್‌ ಜಗತ್ತಿನಲ್ಲಿ ಮಹಿಳೆಯರ ಸುರಕ್ಷತೆಗೆ ಸಿಕ್ಕುತ್ತಿರುವ ಆದ್ಯತೆ ಕನ್ನಡ ಚಿತ್ರರಂಗಕ್ಕೂ ಅನ್ವಯಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. “ಕರ್ನಾಟಕ ಸರ್ಕಾರ ಅಂಥ ಸಮಿತಿಯೊಂದನ್ನು ರಚಿಸಿ, ಅ ಸಮಿತಿ ವಿಸ್ತೃತವಾದ ತನಿಖೆ, ಅಧ್ಯಯನ ನಡೆಸಿ, ಕನ್ನಡ ಚಿತ್ರರಂಗದಲ್ಲಿ ಇದ್ದೇ ಇದೆ ಎಂದು ಆಧಾರಗಳ ಮೂಲಕ ನಂಬಲಾಗಿರುವ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ವರದಿ, ನೀಡಲಿ. ಅಷ್ಟೇ ಅಲ್ಲ. ಈ ವರದಿ ಒಂದು ರೀತಿಯ ನಿಯಂತ್ರಣ ರಹಿತ ಉದ್ಯಮವಾಗಿರುವ ಚಲನಚಿತ್ರ ತಯಾರಿಕೆಯಲ್ಲಿ ಮುಖ್ಯಪಾತ್ರ ವಹಿಸಿರುವ ಹೆಣ್ಣು ಮಕ್ಕಳ ಮೂಲ ಭೂತ ಅಗತ್ಯಗಳ ಬಗ್ಗೆ ಗಮನ ಹರಿಸಲಿ. ಕಾರ್ಮಿಕ ವಲದದಲ್ಲಿದೆ ಎಂದು ನಂಬಲಾಗಿರುವ ಅಂತರೀಕ ದೂರು ಸಮಿತಿ (Internal Complaints Committee ICC) ಯಂಥ ವ್ಯವಸ್ಥೆ ಕನ್ನಡ ಚಿತ್ರರಂಗಕ್ಕೂ ಬರಲಿ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ , ಉಳಿದ ಚಿತ್ರರಂಗಗಳಿಗೆ ಅಂಟಿಕೊಂಡಿರುವಂಥ - ಲೈಂಗಿಕ ದೌರ್ಜನ್ಯ ಆರೋಪದಿಂದ ಬಿಡುಗಡೆ ಸಿಗಲಿ” ಎಂದು ಹೃತ್ಪೂರ್ವಕವಾಗಿ ಹಾರೈಸಿದ್ದಾರೆ.

ಬಣ್ಣದ ಲೋಕದ ಕನಸು ನುಚ್ಚುನೂರಾದಾಗ..

“ಚಿತ್ರರಂಗ ಎಂಬುದು ಸೃಜನಶೀಲ ಮಾಧ್ಯಮ. ಅಭಿನಯವನ್ನೇ ಉಸಿರಾಗಿಸಿಕೊಂಡಿರುವ ಲಕ್ಷಾಂತರ ಮಂದಿ ಕನಸುಗಳನ್ನು ಕಟ್ಟಿಕೊಂಡು ಹಲವು ದಶಕಗಳಿಂದ ಈ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕಾಗಿ ತಮ್ಮ ಸ್ವಂತ ಬದುಕಿನ ಆಸೆ, ಆಕಾಂಕ್ಷೆಗೆ ಎಳ್ಳು-ನೀರು ಬಿಟ್ಟು, ತಾವೇನೋ ಹೇಳಲಿಕ್ಕಿದೆ. ಅದನ್ನು ತಾವು ದೃಶ್ಯದ ಮೂಲಕ ಅಭಿವ್ಯಕ್ತಿಸುತ್ತೇವೆ ಎಂಬ ನಂಬಿಕೆಯೊಂದಿಗೆ ಬಂದು ಬಣ್ಣ ಹಚ್ಚಿಕೊಂಡು, ಕ್ಯಾಮರಾ ಮುಂದೆ ನಿಲ್ಲುತ್ತಾರೆ. ನಿರ್ದೇಶಕ ಕ್ಯಾಮರಾ, ಆಕ್ಷನ್‌ ಎನ್ನುತ್ತಿದ್ದಂತೆ ಪಾತ್ರವಾಗುತ್ತಾರೆ. ನಿರ್ದೇಶಕ ʻಕಟ್‌ʼ ಎನ್ನುತ್ತಿದ್ದಂತೆ ತಾವಿದ್ದ ಮಾಯಾ ಲೋಕದಿಂದ, ಮಾನವನ ಸಣ್ಣತನಗಳೇ ತುಂಬಿರುವ ಲೋಕದ ಭಾಗವಾಗುತ್ತಾರೆ. ಇಂಥ ಲಕ್ಷಾಂತರ ಮಂದಿ ಮಹಿಳೆಯರಿಗೆ ಕನಸು ಕಾಣಲು ಅವಕಾಶ ನೀಡುವ ಮಂದಿಯಿಂದ ಲೈಂಗಿಕ ಅಪೇಕ್ಷಿತರಾಗುವ ಮಂದಿಗೆ ಏನನ್ನೋಣ? ಅದು ಅಸಹ್ಯ, ಅನಾಗರಿಕ ನಡವಳಿಕೆ. ಇಂಥವರು ಪ್ರಾಯಶಃ ಚಿತ್ರರಂಗಕ್ಕೆ ಬರುವುದು ಸಿನಿಮಾವನ್ನು ಬಳಸಿಕೊಂಡು ಅಸಹಾಯಕ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಲೇ ಇರಬೇಕು…” ಎಂದು ತಮ್ಮ ಹೆಸರು ಬಹಿರಂಗ ಪಡಿಸಲು ಬಯಸದ ಕನ್ನಡ ಚಿತ್ರರಂಗದ ಹಿರಿಯ ಹೆಣ್ಣು ಜೀವವೊಂದು ಅಲವೊತ್ತಿಕೊಳ್ಳುತ್ತದೆ.

“ನಟ, ನಿರ್ಮಾಪಕ, ನಿರ್ದೇಶಕರು ಎಲ್ಲಿಯವರೆಗೆ ನೈತಿಕವಾಗಿ ಪ್ರಬುದ್ಧತೆಯಿಂದ ನಾಗರೀಕವಾಗಿ ನಡೆದುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಜೀವಂತವಾಗಿರುತ್ತದೆ. ಕಲಾವಿದೆಯರು ತಮಗಾದ, ಆಗುತ್ತಿರುವ ನೋವಿನ ಕಥೆಯನ್ನು ಹೇಳಿಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ ಎಂದರೆ ಏನರ್ಥ. ನಾವು 21ನೇ ಶತಮಾನದ ನಾಗರಿಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂದು ನಿಮಗನ್ನಿಸುತ್ತದೆಯೇ” ಎಂದು ಮತ್ತೊಬ್ಬ ಹಿರಿಯ ನಟಿ ಪ್ರಶ್ನಿಸುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಇರುವವರೆಲ್ಲ ಅಂಥವರೆನ್ನುವುದು ತೀರಾ ಸಾಮಾನ್ಯೀಕರಣ. ಅದು ತಪ್ಪು ಕೂಡ. ಆದರೆ. ಕನ್ನಡ ಚಿತ್ರರಂಗದಲ್ಲಿರುವ ಇಂಥ ಕೆಲವು ʼಕಪ್ಪು ಕುರಿʼಗಳನ್ನು ಗುರುತಿಸುವುದು. ಅವರು ಮಾನವೀಯವಾಗಿ ನಡೆದುಕೊಂಡು ಹೆಣ್ಣು ಮಕ್ಕಳು ಘನತೆಯಿಂದ ಬದುಕುವಂಥ ವಾತಾವರಣ ನಿರ್ಮಾಣ ಮಾಡುವುದು ಇಂದಿನ ಅಗತ್ಯ ಎಂದು ಅವರು ಹೇಳುತ್ತಾರೆ.

ಹಾಗೆ ಹೇಳುವಾಗ ಅವರು ಮತ್ತೊಂದು ಮಾತು ಸೇರಿಸುತ್ತಾರೆ. “ಕನ್ನಡ ಚಿತ್ರರಂಗದಲ್ಲಿ ಕೆಲವು ನಿರ್ಮಾಣ ಸಂಸ್ಥೆಗಳು ಕಾರ್ಪೋರೇಟ್‌ ಸಂಸ್ಕೃತಿಯನ್ನು ಅಳವಡಿಸಿಕೊಂಡಿವೆ. ಈ ರೀತಿ ಎಲ್ಲ ನಿರ್ಮಾಣ ಸಂಸ್ಥೆಗಳು ಅಂಥ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಆಗಬೇಕು. ಅದು ಗಟ್ಟಿಯಾದ ಕಾನೂನುಗಳಿಂದ ಮಾತ್ರ ಸಾಧ್ಯ. ಚಿತ್ರ ನಿರ್ಮಾಣಕ್ಕೆ ನೂರಾರು ಕೋಟಿ ಸುರಿಯುತ್ತಿರುವ ಚಿತ್ರರಂಗಕ್ಕೆ ಇಂಥ ವ್ಯವಸ್ಥೆಯಿಂದ ಭಾರಿ ವೆಚ್ಚವೇನೂ ಆಗಲಾರದು. ಹಾಗೆ ಮಾಡಿದರೆ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಿದಂತಾಗುತ್ತದೆ. ನಿಜ. ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯವನ್ನು ನಿಯಂತ್ರಿಸಲು ಈಗಾಗಲೇ ಹಲವಾರು ಕಾನೂನುಗಳಿವೆ. ಆದರೆ ಮಹಿಳೆಯರಿಗೆ ಅದನ್ನು ಬಳಸಿಕೊಳ್ಳುವ, ಅನ್ಯಾಯವನ್ನು ಬಹಿರಂಗವಾಗಿ ಹೇಳುವ ಧೈರ್ಯ ತುಂಬುವ ವಾತಾವರಣ ಮಾತ್ರ ಇಲ್ಲ. ಇದು ದುರ್ದೈವದ ಸಂಗತಿ”. ಎಂದು ಅವರು ನೊಂದು ನುಡಿಯುತ್ತಾರೆ.

ಹೇಮಾ ಸಮಿತಿ ಮಾದರಿಯ ಸಮಿತಿಯೇ ಮುಂದಿನ ಹಾದಿ

ಇದು ಸಾಧ್ಯವಾಗಬೇಕಾದರೆ, ಕೇರಳ ಸರ್ಕಾರ ರಚನೆ ಮಾಡಿದ ಹೇಮಾ ಸಮಿತಿ ಮಾದರಿಯ ಸಮಿತಿ ಇಂದಿನ ತುರ್ತು ಅಗತ್ಯ. ಇಂಥ ಸಮಿತಿಯ ಮುಂದೆ ಧೈರ್ಯವಾಗಿ ಶೋಷಣೆಗೊಳಗಾದ ಹೆಣ್ಣು ಮಕ್ಕಳು ತಮಗಾದ ಲೈಂಗಿಕ ಹಿಂಸೆಯ ವಿವರಗಳನ್ನು ನಿರ್ಭೀತಿಯಿಂದ ಹೇಳಿಕೊಳ್ಳಬಹುದು ಎಂಬುದು ಈಗಾಗಲೇ ಹೇಮಾ ಸಮಿತಿಯಿಂದ ರುಜುವಾತಾಗಿದೆ. ಅಂಥ ಸಮಿತಿ ರಚನೆ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೀಘ್ರ ಗಮನಹರಿಸಬೇಕಿದೆ ಎಂಬುದು ಕನ್ನಡ ಚಿತ್ರರಂಗದಲ್ಲಿ ಪ್ರತಿಧ್ವನಿಸುತ್ತಿರುವ ಹೆಣ್ಣು ಮಕ್ಕಳ ಧ್ವನಿ. “ ಈ ಧ್ವನಿ ಸಿದ್ದರಾಮಯ್ಯನವರಿಗೆ ಕೇಳಿಸಿತೇ? ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.

Read More
Next Story