ಕಾಂಗ್ರೆಸ್ ಅಸಮಾಧಾನ ಶಮನಕ್ಕೆ ಸುರ್ಜೇವಾಲಾ ಸಭೆ: ಮೂರು ದಿನಗಳ ಸರಣಿ ಮಾತುಕತೆ ಆರಂಭ
x

ರಣದೀಪ್ ಸಿಂಗ್ ಸುರ್ಜೇವಾಲ

ಕಾಂಗ್ರೆಸ್ ಅಸಮಾಧಾನ ಶಮನಕ್ಕೆ ಸುರ್ಜೇವಾಲಾ ಸಭೆ: ಮೂರು ದಿನಗಳ ಸರಣಿ ಮಾತುಕತೆ ಆರಂಭ

ರಣದೀಪ್ ಸಿಂಗ್ ಸುರ್ಜೇವಾಲಾ ಇಂದು (ಜುಲೈ 7, 2025) ಮತ್ತೊಂದು ಸುತ್ತಿನ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ. ಈ ಮೂರು ದಿನಗಳ ಮಹತ್ವದ ಸಭೆಗಳು ಪಕ್ಷದೊಳಗೆ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಹೊಂದಿವೆ.


ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಹೊಗೆಯನ್ನು ಶಮನಗೊಳಿಸಲು ಮತ್ತು ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು (ಜುಲೈ 7, 2025) ಮತ್ತೊಂದು ಸುತ್ತಿನ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ. ಈ ಮೂರು ದಿನಗಳ ಮಹತ್ವದ ಸಭೆಗಳು ಪಕ್ಷದೊಳಗೆ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಹೊಂದಿವೆ.

ಶಾಸಕರು ಮತ್ತು ಸಚಿವರೊಂದಿಗೆ 'ಒನ್ ಟು ಒನ್' ಸಭೆ

ಇಂದು ಬೆಳಗ್ಗೆ 10 ಗಂಟೆಯಿಂದ ಕೆಪಿಸಿಸಿ ಕಚೇರಿಯಲ್ಲಿ ಸಭೆಗಳು ಆರಂಭಗೊಂಡಿದ್ದು, ಒಟ್ಟು 24 ಕಾಂಗ್ರೆಸ್ ಶಾಸಕರಿಗೆ ಬುಲಾವ್ ನೀಡಲಾಗಿದೆ. ಜುಲೈ 7, 8, ಮತ್ತು 9 ರಂದು ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೆ ಈ ಸಭೆಗಳು ನಡೆಯಲಿವೆ. ಸುರ್ಜೇವಾಲಾ ಅವರು ಪ್ರತಿಯೊಬ್ಬ ಶಾಸಕರು ಮತ್ತು ಸಚಿವರೊಂದಿಗೆ ಪ್ರತ್ಯೇಕವಾಗಿ (ಒನ್ ಟು ಒನ್) ಸಭೆ ನಡೆಸಿ, ಅವರ ಅಹವಾಲುಗಳು, ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಆಲಿಸಲಿದ್ದಾರೆ.

ಪ್ರಮುಖ ವಿಚಾರಗಳ ಕುರಿತು ಅಭಿಪ್ರಾಯ ಸಂಗ್ರಹ

ಈ ಸಭೆಗಳಲ್ಲಿ ಸುರ್ಜೇವಾಲಾ ಅವರು ಹಲವು ಮಹತ್ವದ ವಿಚಾರಗಳ ಕುರಿತು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಮುಖ್ಯವಾಗಿ, ಮುಖ್ಯಮಂತ್ರಿ ಬದಲಾವಣೆ ಕುರಿತ ಊಹಾಪೋಹಗಳು, ವಸತಿ ಸಚಿವಾಲಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪಗಳು, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗಳು ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ವಿವರಗಳನ್ನು ಕೇಳಲಿದ್ದಾರೆ. ಈಗಾಗಲೇ ಸಿದ್ಧ ಮಾದರಿಯ ಪ್ರಶ್ನಾವಳಿಗಳ ಮೂಲಕ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಸಭೆಗಳು ಆಳವಾದ ವಿಶ್ಲೇಷಣೆ ಮತ್ತು ವೈಯಕ್ತಿಕ ಪ್ರತಿಕ್ರಿಯೆಗಳನ್ನು ಪಡೆಯಲು ಸಹಕಾರಿಯಾಗಲಿವೆ.

ಪ್ರಾದೇಶಿಕ ಶಾಸಕರು ಮತ್ತು ಸಂಸದರೊಂದಿಗೆ ಸಭೆಗಳ ವೇಳಾಪಟ್ಟಿ

ಸುರ್ಜೇವಾಲಾ ಅವರ ಸಭೆಗಳ ವೇಳಾಪಟ್ಟಿ ಹೀಗಿದೆ

* ಇಂದು (ಜುಲೈ 7): ಕಿತ್ತೂರು ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರೊಂದಿಗೆ ಸಭೆ.

* ನಾಳೆ (ಜುಲೈ 8): ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರೊಂದಿಗೆ ಸಭೆ.

* ನಾಡಿದ್ದು (ಜುಲೈ 9): ಕಾಂಗ್ರೆಸ್ ಸಂಸದರೊಂದಿಗೆ ಸಭೆ.

ಮೂರು ದಿನಗಳ ಈ ಸರಣಿ ಸಭೆಗಳ ಬಳಿಕ, ಜುಲೈ 9 ರಂದೇ ಸುರ್ಜೇವಾಲಾ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಭೆಗಳ ವರದಿ ಮತ್ತು ಶಾಸಕರು ಹಾಗೂ ಸಚಿವರ ಅಭಿಪ್ರಾಯಗಳನ್ನು ಪಕ್ಷದ ಹೈಕಮಾಂಡ್‌ಗೆ ಸಲ್ಲಿಸುವ ನಿರೀಕ್ಷೆಯಿದೆ

Read More
Next Story