ಪೋಸ್ಟರ್‌ ಅಂಟಿಸಿದ ಕೈ ಕಾರ್ಯಕರ್ತರಿಗೆ ಸಂಯಮದ ಪಾಠ ಹೇಳಿದ ಶಾಸಕ ಸುರೇಶ್‌ ಕುಮಾರ್‌
x

ಸದನದಲ್ಲಿ ವಿಷಯ ಬಗೆಹರಿದಿದ್ದರೂ, ಕಾಂಗ್ರೆಸ್ ಕಾರ್ಯಕರ್ತರು ಸುರೇಶ್ ಕುಮಾರ್ ಅವರ ಮನೆ ಮುಂದೆ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಪೋಸ್ಟರ್‌ ಅಂಟಿಸಿದ ಕೈ ಕಾರ್ಯಕರ್ತರಿಗೆ ಸಂಯಮದ ಪಾಠ ಹೇಳಿದ ಶಾಸಕ ಸುರೇಶ್‌ ಕುಮಾರ್‌

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಸಚಿವ ಭೈರತಿ ಸುರೇಶ್‌ ಅವರ ಮಾತಿಗೆ ಶಾಸಕ ಸುರೇಶ್ ಕುಮಾರ್ ಅವರು "ಏಳು ತಿಂಗಳಿಗೆ ಹುಟ್ಟಿದವನಂತೆ ಆಡಬೇಡ" ಎಂಬ ಪದ ಬಳಸಿದ್ದರು.


Click the Play button to hear this message in audio format

ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು ಬಳಸಿದ ಆಕ್ಷೇಪಾರ್ಹ ಪದ ಬಳಕೆ ತೀವ್ರ ವಿವಾದ ಸೃಷ್ಟಿಸಿದೆ. ಶಾಸಕ ಎಸ್.ಸುರೇಶ್ ಕುಮಾರ್ ಸದನದಲ್ಲೇ ಕ್ಷಮೆಯಾಚಿಸಿದರೂ ಕಾಂಗ್ರೆಸ್‌ ಕಾರ್ಯಕರ್ತರು ಅವರ ವಿರುದ್ಧ ಪೋಸ್ಟರ್‌ ಸಮರ ಆರಂಭಿಸಿದ್ದಾರೆ.

ಶನಿವಾರ ಸುರೇಶ್‌ ಕುಮಾರ್‌ ಅವರ ಮನೆಯ ಗೋಡೆಗೆ ಪೋಸ್ಟರ್‌ ಅಂಟಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಶಾಸಕ ಸುರೇಶ್‌ ಕುಮಾರ್‌ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಚಾತುರ್ಯಕ್ಕಾಗಿ ಕ್ಷಮೆ ಕೇಳಿದ ನಂತರವೂ ಕಾಂಗ್ರೆಸ್‌ ಕಾರ್ಯಕರ್ತರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಏನು?

ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುವಾಗ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರ ನಡವಳಿಕೆ ಸಂವಿಧಾನ ವಿರೋಧಿ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಲು ಎದ್ದು ನಿಂತ ಸುರೇಶ್ ಕುಮಾರ್ ಅವರು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡರು. ಆಗ ಸಚಿವ ಭೈರತಿ ಸುರೇಶ್‌ ಅವರು ಮಧ್ಯಪ್ರವೇಶಿಸಿ ಮಾತಿಗೆ ಅಡ್ಡಿಪಡಿಸಿದಾಗ, ತಾಳ್ಮೆ ಕಳೆದುಕೊಂಡ ಸುರೇಶ್ ಕುಮಾರ್, "ಏಳು ತಿಂಗಳಿಗೆ ಹುಟ್ಟಿದ ಹಾಗೆ ಆಡ್ತೀಯಲ್ಲಯ್ಯ" ಎಂಬ ಪದ ಬಳಸಿದ್ದರು.

ಈ ಮಾತಿನಿಂದ ಸದನದಲ್ಲಿ ಗದ್ದಲ ಉಂಟಾದಾಗ, ಸುರೇಶ್ ಕುಮಾರ್ ಅವರು ತಕ್ಷಣವೇ ಸ್ಪಷ್ಟನೆ ನೀಡಿದ್ದರು. "ಇದು ಯಾರನ್ನೂ ಅವಮಾನಿಸುವ ಉದ್ದೇಶದಿಂದ ಹೇಳಿದ್ದಲ್ಲ, ಕೇವಲ ಅವಸರ ಮಾಡುವವರನ್ನು ಉದ್ದೇಶಿಸಿ ಹೇಳುವ ಒಂದು ನಾಣ್ಣುಡಿಯಷ್ಟೇ. ನನ್ನ ಮಗಳೂ ಸಹ ವೈದ್ಯೆಯಾಗಿದ್ದು, ಇಂತಹ ವಿಷಯಗಳ ಸೂಕ್ಷ್ಮತೆ ನನಗೂ ತಿಳಿದಿದೆ. ಒಂದು ವೇಳೆ ಈ ಮಾತು ಯಾರಿಗಾದರೂ ನೋವುಂಟು ಮಾಡಿದ್ದರೆ ನಾನು ಅದನ್ನು ವಾಪಸ್ ಪಡೆಯುತ್ತೇನೆ" ಎಂದು ಹೇಳಿ ಆ ಭಾಗವನ್ನು ಕಡತದಿಂದ ತೆಗೆದುಹಾಕಲು ಕೋರಿದ್ದರು.

ಮನೆಯ ಗೋಡೆಗೆ ಪೋಸ್ಟರ್‌

ಶಾಸಕ ಸುರೇಶ್‌ಕುಮಾರ್‌ ಅವರ ಹೇಳಿಕೆ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮನೆಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಅಭಿಯಾನ ಆರಂಭಿಸಿದ್ದರು. ಕಾಂಗ್ರೆಸ್‌ ಕಾರ್ಯಕರ್ತರ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿಡಿಯೊ ಸಂದೇಶದ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಸುರೇಶ್‌ ಕುಮಾರ್‌ ಸ್ಪಷ್ಟನೆ ಏನು?

ತಾವು ಬಳಸಿದ ಪದದ ಬಗ್ಗೆ ಮುಕ್ತವಾಗಿ ಮಾತನಾಡಿದ ಸುರೇಶ್ ಕುಮಾರ್, "ಮಧ್ಯಪ್ರವೇಶ ಮಾಡಿ ತೊಂದರೆ ಕೊಡುತ್ತಿದ್ದಾಗ ಕಾರಣ ವಾಡಿಕೆಯ ಮಾತು ಬಳಸಿದ್ದೆ. ಯಾರನ್ನೂ ಅವಮಾನಿಸುವ ಅಥವಾ ಕೀಳಾಗಿ ಕಾಣುವ ಉದ್ದೇಶ ಹೊಂದಿರಲಿಲ್ಲ. ನನ್ನ ಮಾತು ತಪ್ಪೆಂದು ಯಾರಿಗಾದರೂ ಅನಿಸಿದರೆ ನಾನು ಅದನ್ನು ವಾಪಸ್ ಪಡೆಯುತ್ತೇನೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ" ಎಂದು ತಿಳಿಸಿದ್ದಾರೆ.

ಘಟನೆಯ ಬಳಿಕ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಆದಾಗ್ಯೂ, ಶನಿವಾರ ನನ್ನ ನಿವಾಸ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೋಸ್ಟರ್ ಅಂಟಿಸಿದ್ದಾರೆ. ಆರು ಬಾರಿ ಶಾಸಕನಾಗಿ ಸಂಸ್ಕಾರದಿಂದ ಬೆಳೆದವನು ನಾನು. ಸಭೆ-ಸಮಾರಂಭಗಳ ಪೂರ್ಣ ಹಿನ್ನೆಲೆ ತಿಳಿಯದೆ ಕಾರ್ಯಕರ್ತರು ಕೀಳು ಪ್ರಚಾರಕ್ಕಾಗಿ ಈ ರೀತಿ ವರ್ತಿಸಬಾರದು ಎಂದು ಹೇಳಿದ್ದಾರೆ.

"ಬಳ್ಳಾರಿಯಲ್ಲಿ ಶಾಸಕರ ಮನೆ ಮುಂದೆ ಬ್ಯಾನರ್ ಕಟ್ಟುವ ಗಲಾಟೆಯಲ್ಲಿ ಕಾರ್ಯಕರ್ತನೊಬ್ಬ ಗುಂಡೇಟಿಗೆ ಬಲಿಯಾದ. ಕೊಪ್ಪಳದ ಶಾಸಕರೊಬ್ಬರು ಮಹಿಳೆ ಮೇಲಿನ ಅತ್ಯಾಚಾರವನ್ನು ಸಣ್ಣ ಘಟನೆ ಎಂದಿದ್ದು, ರಾಜೀವ್ ಗೌಡ ಅವರು ಮಹಿಳಾ ಅಧಿಕಾರಿಗಳಿಗೆ ನಡೆದುಕೊಂಡ ರೀತಿ ಎಲ್ಲವನ್ನೂ ನೋಡಿದ್ದೇವೆ. ಕೀಳು ಮಟ್ಟದ ಪ್ರಚಾರಕ್ಕಾಗಿ ಕಾರ್ಯಕರ್ತರು ಸತ್ಯ ತಿಳಿಯದೆ ಆವೇಶಕ್ಕೆ ಒಳಗಾಗಬಾರದು. ಉನ್ನತ ಸ್ಥಾನದಲ್ಲಿರುವವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಿ ಕಾರ್ಯಕರ್ತರು ಕಲಿಯಲಿ" ಎಂದು ಕಿವಿಮಾತು ಹೇಳಿದ್ದಾರೆ.

Read More
Next Story