ಸೂರಜ್‌ ರೇವಣ್ಣ ಸಲಿಂಗ ದೌರ್ಜನ್ಯ ಪ್ರಕರಣ| ಸಿಐಡಿಗೆ ಹಸ್ತಾಂತರ
x

ಸೂರಜ್‌ ರೇವಣ್ಣ ಸಲಿಂಗ ದೌರ್ಜನ್ಯ ಪ್ರಕರಣ| ಸಿಐಡಿಗೆ ಹಸ್ತಾಂತರ


ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಹೋದರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಕೇಳಿಬಂದಿರುವ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೆಶಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್ ಹಿತೇಂದ್ರ ಅವರು, ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂಬರ್ 92/2024 ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಈ ಕೂಡಲೇ ಮುಂದಿನ ತನಿಖೆಗಾಗಿ ಖುದ್ದು ಸಿಐಡಿ ಕಚೇಇಗೆ ತೆರಳಿ ಕೇಸ್ ಫೈಲ್ ಅನ್ನು ಸಿಐಡಿಗೆ ಹ್ಯಾಂಡ್ ಓವರ್ ಮಾಡುವಂತೆ ಹಾಸನ ಜಿಲ್ಲಾ ಎಸ್‌ಪಿಗೆ ಆದೇಶ ಹೊರಡಿಸಿದ್ದಾರೆ.


ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್, ʻʻಶನಿವಾರದವರೆಗೂ ದೂರು ಬಂದಿರಲಿಲ್ಲ. ಈಗ ದೂರು ಬಂದಿದ್ದು, ಎಫ್ಐಆರ್ ಕೂಡ ಆಗಿದೆ. ಹೀಗಾಗಿ ಈ‌ ಕೇಸ್ ಅನ್ನೂ ಸಿಐಡಿ ತನಿಖೆಗೆ ಕೊಡುತ್ತೇವೆ. ಈ ಥರ ಕೇಸ್‌ಗಳನ್ನ ಸಿಐಡಿಗೆ ಕೊಡಬೇಕಾಗುತ್ತೆ. ನನಗೇನು ಗೊತ್ತೋ ಅಷ್ಟನ್ನೇ ನಾನು ಹೇಳುತ್ತೇನೆ. ಏನ್ ಕ್ರಮ ತಗೋಬೇಕೋ ಪೊಲೀಸರು ಕ್ರಮ ತಗೋತಾರೆ, ಅದನ್ನು ಬಿಟ್ಟು ರಾಜಕೀಯ ಪ್ರೇರಿತ ಅನ್ನೋದು ಏನೂ ಗೊತ್ತಿಲ್ಲʼʼ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಎಚ್‌ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಪ್ರಕರಣ ದಾಖಲಾಗಿದೆ. ಜಾಮೀನು ರಹಿತ ಕೇಸ್ ಹಿನ್ನೆಲೆಯಲ್ಲಿ ನಿನ್ನೆ (ಜೂನ್ 22 ಶನಿವಾರ) ರಾತ್ರಿ ಸುದೀರ್ಘ ವಿಚಾರಣೆ ನಡೆಸಿದ್ದ ಪೊಲೀಸರು ಬಳಿಕ ಸೂರಜ್‌ನನ್ನು ಅರೆಸ್ಟ್ ಮಾಡಿದ್ದಾರೆ.

ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿಯೇ ಡಾ.ಸೂರಜ್‌ರೇವಣ್ಣನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳ ಪಡಿಸಿದರು. ತಡರಾತ್ರಿವರೆಗೂ ವಿಚಾರಣೆ ನಡೆಯಿತು. ಇಂದು (ಭಾನುವಾರ) ಬೆಳಿಗ್ಗೆ 4 ಗಂಟೆವರೆಗೂ ಸೂರಜ್‌ನನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ಬಂಧಿಸಿದ್ದಾರೆ.

ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಹಿರಿಯ ಪುತ್ರ ಆಗಿರುವ ಎಂಎಲ್ ಸಿ ಸೂರಜ್ ರೇವಣ್ಣ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು, ಮೊಬೈಲ್ ಕಾಲ್ ಸೇರಿದಂತೆ ಇನ್ನಿತರೆ ದಾಖಲೆಗಳ ಸಹಿತ ಜೆಡಿಎಸ್ ಕಾರ್ಯಕರ್ತನಾಗಿರುವ ಸಂತ್ರಸ್ತನ ವಿರುದ್ಧ ದೂರು ನೀಡಲು ಬಂದಾಗ ಪೊಲೀಸ್ ಠಾಣೆಯಲ್ಲೇ ಬಂಧನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ತಮ್ಮ ವಿರುದ್ಧ ಆರೋಪ ಕೇಳಿ ಬರ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ ಜೂನ್ 22ರಂದೇ ಪ್ರತಿಕ್ರಿಯೆ ನೀಡಿದ್ದು, ತನ್ನ ವಿರುದ್ಧ ಯುವಕ ಮಾಡಿದ್ದ ಆರೋಪಗಳನ್ನು ತಿರಸ್ಕರಿಸಿ ಆತನೇ ತಮಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಕಾನೂನಿನಲ್ಲಿ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗೆ ಬರಲಿ ಅಂತ ಸೂರಜ್‌ ಹೇಳಿದ್ದಾರೆ.

ಸದ್ಯ ಸಲಿಂಗ ಕಾಮಕಾಂಡದಲ್ಲಿ ಎಚ್‌.ಡಿ.ರೇವಣ್ಣ ಪುತ್ರ ಸೂರಜ್‌ ರೇವಣ್ಣ ವಿಚಾರಣೆ ನಡೀತಿದ್ದು, ಈ ಮಧ್ಯೆ ಸೂರಜ್‌ ವಿರುದ್ದ ದೂರು ನೀಡಿದ್ದ ಸಂತ್ರಸ್ತ ಯುವಕನನ್ನ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿಗೆ ಶಿಫ್ಟ್‌ ಮಾಡಲಾಗಿದೆ. ಸಂತ್ರಸ್ತನನ್ನ ಹಾಸನ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಯಲಿದೆ. ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಪ್ರಕರಣ ದಾಖಲಾಗಿದೆ.

Read More
Next Story