
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕ ಅಶೋಕ ಪಟ್ಟಣ್
ಬಿಜೆಪಿ ದೇಶದ ಕ್ಷಮೆ ಕೇಳಲಿ: ಮುಡಾ ತೀರ್ಪಿನ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಗರಂ
ಬಿಜೆಪಿಯವರು ಇಡಿ, ಐಟಿ ಮುಂತಾದ ಸಂಸ್ಥೆಗಳನ್ನು ವಿರೋಧ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳಲು ಬಳಸುತ್ತಿರುವ ಕುರಿತು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬರೆದುಕೊಂಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು "ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡದಿಂದ ಬಾರಿಸಿದಂತಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರೆ, ಇತರ ಕಾಂಗ್ರೆಸ್ ನಾಯಕರು ಧನಿಗೂಡಿಸಿದ್ದಾರೆ.
ಬಿಜೆಪಿ ಕ್ಷಮೆ ಕೇಳಲಿ: ಲಕ್ಷ್ಮಿ ಹೆಬ್ಬಾಳ್ಕರ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, "ಇಡಿ, ಐಟಿಯಂತಹ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಸೇಡಿಗಾಗಿ ಬಳಸಿಕೊಳ್ಳುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಈಗ ಸರ್ವೋಚ್ಚ ನ್ಯಾಯಾಲಯವೇ ನಮ್ಮ ಮಾತಿಗೆ ಅಧಿಕೃತ ಮುದ್ರೆ ಒತ್ತಿದೆ. ಇನ್ನಾದರೂ ಬಿಜೆಪಿ ಇಂತಹ ಕೆಟ್ಟ ರಾಜಕೀಯವನ್ನು ಬಿಟ್ಟು, ದೇಶದ ಜನರ ಕ್ಷಮೆ ಕೇಳಬೇಕು" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.
ಇದು ಕಪಾಳ ಮೋಕ್ಷಕ್ಕಿಂತ ಹೆಚ್ಚು: ಅಶೋಕ್ ಪಟ್ಟಣ್
ಶಾಸಕ ಅಶೋಕ್ ಪಟ್ಟಣ್ ಮಾತನಾಡಿ, "ಇದು ಕಪಾಳ ಮೋಕ್ಷಕ್ಕಿಂತ ಹೆಚ್ಚು. ವಿರೋಧ ಪಕ್ಷದ ನಾಯಕರನ್ನು ಹೆದರಿಸಲು ಇಡಿ, ಐಟಿ ಬಳಸುವುದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಛೀಮಾರಿ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡಲು ಹಳೆಯ ಪ್ರಕರಣವನ್ನು ಕೆದಕಿದ ಬಿಜೆಪಿಗೆ ಇದರಿಂದ ತೀವ್ರ ಮುಜುಗರವಾಗಿದೆ. ಈ ತೀರ್ಪಿನಿಂದ ಸಿಎಂ ಮತ್ತಷ್ಟು ಪ್ರಬಲರಾಗಿದ್ದಾರೆ," ಎಂದು ಅಭಿಪ್ರಾಯಪಟ್ಟಿದ್ದಾರೆ.