
ಮಾಲೂರು ಶಾಸಕ ನಂಜೇಗೌಡರ ಆಯ್ಕೆ ‘ಅಸಿಂಧು’ ತೀರ್ಪಿಗೆ ಸುಪ್ರೀಂ ತಡೆ, ಮರು ಎಣಿಕೆಗೆ ನಿರ್ದೇಶನ
ಮೇ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಅವರನ್ನು ಕೇವಲ 248 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದರು.
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಮತ ಎಣಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು, ನಾಲ್ಕು ವಾರಗಳೊಳಗೆ ಮರು ಮತ ಎಣಿಕೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಹಾಲಿ ಶಾಸಕ ಕೆ.ವೈ. ನಂಜೇಗೌಡರ ಆಯ್ಕೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶದ ತಡೆಯಾಜ್ಞೆಯನ್ನು ಮರು ಎಣಿಕೆಯ ಫಲಿತಾಂಶ ಸಲ್ಲಿಸುವವರೆಗೆ ಮುಂದುವರೆಸಿದೆ. ಹೀಗಾಗಿ ಅವರ ಶಾಸಕ ಸ್ಥಾನ ತಾತ್ಕಾಲಿಕವಾಗಿ ಅಬಾಧಿತವಾಗಿರಲಿದೆ.
ಮಾಲೂರು ಕ್ಷೇತ್ರದಲ್ಲಿ 2023ರ ಮೇ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕೆ.ವೈ. ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥಗೌಡರನ್ನು ಕೇವಲ 248 ಮತಗಳ ಅಂತರದಿಂದ ಸೋಲಿಸಿದ್ದರು. ಫಲಿತಾಂಶ ಪ್ರಕಟವಾದ ಮೂರೇ ದಿನಗಳಲ್ಲಿ ಮಂಜುನಾಥಗೌಡರು ಹೈಕೋರ್ಟ್ ಮೊರೆಹೋಗಿ, ಎಣಿಕೆಯಲ್ಲಿ ದಾಖಲೆ ದೋಷಗಳು, ತಪ್ಪು ಎಣಿಕೆ, ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಎಣಿಕೆಯ ವೀಡಿಯೋ ದಾಖಲೆಗಳನ್ನು ಒದಗಿಸದಿರುವಂತಹ ಗಂಭೀರ ಅಕ್ರಮಗಳನ್ನು ಉಲ್ಲೇಖಿಸಿ ಆಯ್ಕೆಯನ್ನು ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಪೀಠ, ಚುನಾವಣಾ ಕಾನೂನು ಉಲ್ಲಂಘನೆಯಾಗಿದೆ ಎಂದು ತೀರ್ಮಾನಿಸಿ, ನಂಜೇಗೌಡರ ಆಯ್ಕೆಯನ್ನು ಅಸಿಂಧುಗೊಳಿಸಿ, ಮರು ಎಣಿಕೆ ನಡೆಸಿ ಹೊಸ ಫಲಿತಾಂಶ ಘೋಷಿಸಲು ಆದೇಶಿಸಿತ್ತು. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುತ್ತಾ 30 ದಿನಗಳ ತಡೆಯಾಜ್ಞೆಯನ್ನೂ ನೀಡಲಾಗಿತ್ತು.
ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ನಂಜೇಗೌಡರಿಗೆ, ಸರ್ವೋಚ್ಛ ನ್ಯಾಯಾಲಯ, ಮರು ಎಣಿಕೆಯ ನಿರ್ದೇಶನವನ್ನು ಮುಂದುವರಿಸಲು ಮತ್ತು ಅದರ ಫಲಿತಾಂಶವನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಕೋರ್ಟ್ ಪೂರ್ವಾನುಮತಿ ಇಲ್ಲದೆ ಮರು ಎಣಿಕೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದೆಂದು ಸ್ಪಷ್ಟಪಡಿಸಿ, ಮುಂದಿನ ವಿಚಾರಣೆಯವರೆಗೆ ನಂಜೇಗೌಡರ ಶಾಸಕ ಸ್ಥಾನ ಅಬಾಧಿತವಾಗಿರಲಿದೆ ಎಂದಿದೆ.