ಅತುಲ್‌ ಆತ್ಮಹತ್ಯೆ ಪ್ರಕರಣ | ಕರ್ನಾಟಕ ಸೇರಿ ಮೂರು ರಾಜ್ಯಗಳಿಗೆ ಸುಪ್ರೀಂ ನೋಟಿಸ್‌
x

ಅತುಲ್‌ ಆತ್ಮಹತ್ಯೆ ಪ್ರಕರಣ | ಕರ್ನಾಟಕ ಸೇರಿ ಮೂರು ರಾಜ್ಯಗಳಿಗೆ ಸುಪ್ರೀಂ ನೋಟಿಸ್‌

ಅತುಲ್‌ ಸುಭಾಷ್‌ ಪ್ರಕರಣದ ವಿವರ, ಅತುಲ್‌ ಮಗನ ಪರಿಸ್ಥಿತಿ ಕುರಿತು ಸ್ಪಷ್ಟೀಕರಣ ದಾಖಲಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿಪಡಿಸಿ ನ್ಯಾಯಾಲಯ ಆದೇಶಿಸಿದೆ.


ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣವು ಸುಪ್ರೀಂಕೋರ್ಟ್ ಅಂಗಳದಲ್ಲಿ ಪ್ರತಿಧ್ವನಿಸಿದೆ. ಮಗನನ್ನು(ಅತುಲ್‌ ಸುಭಾಷ್‌) ಕಳೆದುಕೊಂಡ ಪೋಷಕರು ಮೊಮ್ಮಗನಿಗಾಗಿ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಅತುಲ್ ಸುಭಾಷ್ ತಾಯಿ ಅಂಜು ಮೋದಿ ಸುಪ್ರೀಂಕೋರ್ಟ್‌ಗೆ ಹೆಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಎನ್.ಕೋಟೀಶ್ವರ್ ಸಿಂಗ್ ನೇತೃತ್ವದ ದ್ವಿಸದಸ್ಯ ಪೀಠ, ಈ ಸಂಬಂಧ ಕರ್ನಾಟಕ, ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಅತುಲ್‌ ಸುಭಾಷ್‌ ಪ್ರಕರಣದ ವಿವರ, ಅತುಲ್‌ ಮಗನ ಪರಿಸ್ಥಿತಿ ಕುರಿತು ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿಪಡಿಸಿ ಆದೇಶಿಸಿದೆ. ಈಗಾಗಲೇ ಅತುಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್‌ ಸಿಂಘಾನಿಯಾರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ಆರೋಪಿಯಾದ ಸುಶೀಲ್‌ ಸಿಂಘಾನಿಯಾ ಅಲಹಾಬಾದ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಹೆಬಿಯಸ್‌ ಕಾರ್ಪಸ್‌ ಅಂದರೇನು?

ವ್ಯಕ್ತಿಯೊಬ್ಬರು ಅನ್ಯಾಯಕ್ಕೆ ಒಳಗಾದಾಗ ಅಥವಾ ವ್ಯಕ್ತಿಗೆ ಆಗುತ್ತಿರುವ ಅನ್ಯಾಯ ತಡೆಯಲು, ಅದರಿಂದ ಹೊರಬರಲು ಬಳಸುವ ಕಾನೂನು ಸೌಲಭ್ಯ. ರಿಟ್‌ ಮಾದರಿಯ ಈ ಅರ್ಜಿಯಿಂದ ವ್ಯಕ್ತಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬಹುದಾಗಿದೆ. ಕಾನೂನು ಕ್ರಮಗಳಿಂದ ವ್ಯಕ್ತಿಗತ ಮೌಲ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಹೇಬಿಯಸ್ ಕಾರ್ಪಸ್ ದಾವೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಕ್ರಮವಾಗಿ ಬಂಧನದಲ್ಲಿ ಇಟ್ಟಿರುವ ವ್ಯಕ್ತಿಯನ್ನು ಈ ಅರ್ಜಿ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗುತ್ತದೆ.

ಮಗುವಿನ ಕುರಿತು ಗೊಂದಲಕಾರಿ ಹೇಳಿಕೆ

ಅತುಲ್ ಆತ್ಮಹತ್ಯೆ ಪ್ರಕರಣದಲ್ಲಿ ಎಲ್ಲರೂ ಜೈಲುಪಾಲಾದ ಹಿನ್ನೆಲೆಯಲ್ಲಿ ಮೊಮ್ಮಗನ ಇರುವಿಕೆ ಕುರಿತು ಅತುಲ್ ಪೋಷಕರು ಸಂಶಯ ವ್ಯಕ್ತಪಡಿಸಿದ್ದರು. ಮೊಮ್ಮಗನನ್ನು ಎಲ್ಲಿದ್ದರೂ ಹುಡುಕಿ ಸುಪರ್ದಿಗೆ ನೀಡುವಂತೆ ಅತುಲ್‌ ತಂದೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ, ಬಿಹಾರ ಸಿಎಂ ಅವರಿಗೆ ಮನವಿ ಮಾಡಿದ್ದರು.

ಈ ಮಧ್ಯೆ ನಿಖಿತಾ ಸಿಂಘಾನಿಯಾರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಮಗುವಿನ ಬಗ್ಗೆ ಮಾಹಿತಿ ನೀಡಿದ್ದರು. ತಮ್ಮ ಮಗನನ್ನು ಫರಿದಾಬಾದ್ ಬೋರ್ಡಿಂಗ್ ಶಾಲೆಗೆ ಸೇರಿಸಲಾಗಿದೆ. ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು. ಆದರೆ, ನಿಖಿತಾ ಹೇಳಿಕೆಯನ್ನು ಸುಶೀಲ್‌ ಸಿಂಘಾನಿಯಾ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮಗುವಿನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಹಾಗಾಗಿ ಅಂಜು ಮೋದಿ ಸುಪ್ರೀಂಕೋರ್ಟ್‌ಗೆ ಹೆಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ.

ಜಾಮೀನು ಕೋರಿ ಸಲ್ಲಿಸಿದ ನಿಖಿತಾ

ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ಹಾಗೂ ಸಹೋದರರ ಪರ ವಕೀಲರು ಬೆಂಗಳೂರಿನ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಪೊಲೀಸರ ವಿಚಾರಣೆ ಎದುರಿಸುತ್ತಿರುವ ನಿಖಿತಾ ಸಿಂಘಾನಿಯಾ ಪತಿಯ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಜವಾದ ಸಂತ್ರಸ್ತೆ ನಾನು, ನನಗೆ ಅನ್ಯಾಯವಾಗಿದೆ.

ನನ್ನ ಪರಿಸ್ಥಿತಿಗೆ ಪತಿ ಸುಭಾಷ್ ಅತುಲ್ ಕಾರಣ. ನನಗೆ ಮಾಂಸಾಹಾರದ ಅಡುಗೆ ಬರುವುದಿಲ್ಲ ಎಂದು ಹೇಳಿದರೂ ಮಟನ್ , ಚಿಕನ್ ಮೀನು ತಂದು ನಾನು ಹೇಳಿದ ಹಾಗೆ ಮಾಡಬೇಕು ಎಂದು ಕಿರುಕುಳ ನೀಡುತ್ತಿದ್ದರು. ಕುಡಿದು ಬಂದು ಹಲ್ಲೆ ಮಾಡುತ್ತಿದ್ದರು. ಆದ್ದರಿಂದಲೇ ನಾನು ತವರು ಮನೆಗೆ ಹೋಗಿದ್ದೆ ಎಂದು ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಡಿ.9ರಂದು ಮಾರತ್ತಹಳ್ಳಿ ಸಮೀಪದ ಮಂಜುನಾಥ ಲೇಔಟ್‌ನಲ್ಲಿರುವ ಡಾಲ್ಫಿನಿಯಂ ಅಪಾರ್ಟ್‌ಮೆಂಟ್‌ನಲ್ಲಿ ಅತುಲ್ ಸುಭಾಷ್ ಡೆತ್‌ನೋಟ್‌ ಹಾಗೂ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರು ಕಿರುಕುಳ ನೀಡುತ್ತಿದ್ದು, ನನಗೆ ನ್ಯಾಯಾಲಯದಲ್ಲೂ ನ್ಯಾಯ ಸಿಕ್ಕಿಲ್ಲ ಎಂದು ಉಲ್ಲೇಖಿಸಿದ್ದರು.

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಈ ಪ್ರಕರಣ ಬೆನ್ನತ್ತಿದ ಬೆಂಗಳೂರು ಪೊಲೀಸರು ಡಿ.16 ರಂದು ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ಹಾಗೂ ಸಹೋದರನನ್ನು ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ಹಾಗೂ ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಿದ್ದರು.

Read More
Next Story