
ಪವಿತ್ರಾ ಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಜಾಮೀನು ಮರುಪರಿಶೀಲನಾ ಅರ್ಜಿ ಸುಪ್ರೀಂನಲ್ಲಿ ವಜಾ
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ನೀಡಿದ್ದು, ತೀರ್ಪನ್ನು ಪರಿಶೀಲಿಸಲು ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ಜಾಮೀನನ್ನು ರದ್ದುಗೊಳಿಸಿದ್ದ ಆಗಸ್ಟ್ 14ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ನಟಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಜೈಲುವಾಸ ಮುಂದುವರಿಯುವುದು ಖಚಿತವಾಗಿದೆ.
ತೀರ್ಪು ಮರುಪರಿಶೀಲನೆಗೆ ಆಧಾರವಿಲ್ಲ ಎಂದ ನ್ಯಾಯಪೀಠ
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶವನ್ನು ನೀಡಿದೆ. "ನಾವು ಸದರಿ ಆದೇಶ ಮತ್ತು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ, ತೀರ್ಪನ್ನು ಪರಿಶೀಲಿಸಲು ಯಾವುದೇ ಸೂಕ್ತ ಆಧಾರಗಳು ಕಂಡುಬಂದಿಲ್ಲ. ಪರಿಣಾಮವಾಗಿ, ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ," ಎಂದು ಪೀಠವು ಸ್ಪಷ್ಟಪಡಿಸಿದೆ.
ಆಗಸ್ಟ್ 14 ರಂದು, ಇದೇ ನ್ಯಾಯಪೀಠವು ಕರ್ನಾಟಕ ಹೈಕೋರ್ಟ್ ಡಿಸೆಂಬರ್ 13, 2024 ರಂದು ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು. ಜಾಮೀನು ರದ್ದತಿಯು ಪವಿತ್ರಾ ಗೌಡ ಅವರಲ್ಲದೆ, ನಟ ದರ್ಶನ್, ನಾಗರಾಜು ಆರ್, ಅನು ಕುಮಾರ್, ಲಕ್ಷ್ಮಣ್ ಎಂ, ಜಗದೀಶ್ ಅಲಿಯಾಸ್ ಜಗ್ಗ, ಮತ್ತು ಪ್ರದೂಷ್ ಎಸ್ ರಾವ್ ಅವರನ್ನೂ ಒಳಗೊಂಡಿತ್ತು. ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಪ್ರಕರಣದ ಹಿನ್ನೆಲೆ
ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗ ಮೂಲದ 33 ವರ್ಷದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎನ್ನಲಾದ ಕಾರಣಕ್ಕೆ, ದರ್ಶನ್ ಮತ್ತು ಅವರ ಸಹಚರರು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು ಎಂಬ ಆರೋಪವಿದೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

