
3,352.57 ಕೋಟಿ ರೂ. ಪೂರಕ ಅಂದಾಜು ಮಂಡನೆ; ಶಾಸಕರಿಗೆ ಕಾರು, ಸಾಧನಾ ʼಕಾರುಬಾರುʼ ವೆಚ್ಚದ ವಿವರ!
ರಾಜ್ಯ ಸರ್ಕಾರವು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ವೆಚ್ಚ ಮಾಡಿದೆ. ಶಾಸಕರ ಕಾರ್‌ಗಳ ಖರೀದಿಗಾಗಿ 3.20 ಕೋಟಿ ರೂ. ವೆಚ್ಚ ಮಾಡಲಾಗಿದೆ.
ರಾಜ್ಯ ಸರ್ಕಾರವು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ವೆಚ್ಚ ಮಾಡಿದೆ.
ವಿಧಾನಸಭೆಯಲ್ಲಿ 2025-26ನೇ ಸಾಲಿನ ಮೊದಲನೇ ಕಂತಿನ ಪೂರಕ ಅಂದಾಜು 3,352.57 ಕೋಟಿ ರೂ. ಅನ್ನು ಮಂಡಿಸಲಾಗಿದೆ. ಇದರಲ್ಲಿ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ವೆಚ್ಚ ಮಾಡಿರುವುದು ಉಲ್ಲೇಖ ಮಾಡಲಾಗಿದೆ.
ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು 3,352.57 ಕೋಟಿ ರೂ.ನಲ್ಲಿ 0.60 ಕೋಟಿ ರೂ. ಪ್ರಭೃತ ವೆಚ್ಚ ಮತ್ತು 3,351.97 ಕೋಟಿ ರೂ. ಪುರಸ್ಕೃತ ವೆಚ್ಚ ಸೇರಿದೆ. ಇದರಲ್ಲಿ ಮೀಸಲು ನಿಧಿಯಿಂದ ಭರಿಸಲಾಗುವ 262.20 ಕೋಟಿ ರೂ. ಸಹ ಪುರಸ್ಕೃತವಾಗಿದೆ. ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 3,090.37 ಕೋಟಿ ರೂ. ಆಗಿದೆ. ಇದರಲ್ಲಿ 820.70 ಕೋಟಿ ರೂ. ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದ್ದರಿಂದ ಹೊರಹೋಗುವ ನಿವ್ವಳ ನಗದು 2,269.66 ಕೋಟಿ ರೂ. ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಜರುಗಿದ ಸಚಿವ ಸಂಪುಟಕ್ಕೆ 3.69 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯದ ಎಲ್ಲಾ ನೋಂದಣಿ ಮತ್ತು ಮುದ್ರಾಂಕ ಕಚೇರಿಗಳಿಗೆ ಐಟಿ ಉಪಕರಣಗಳ ಪೂರೈಕೆ, ಅಳವಡಿಕೆ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಅಗತ್ಯ ಇರುವ ಮಾನವ ಸಂಪನ್ಮೂಲ ವೆಚ್ಚಗಳ ಪಾವತಿಯನ್ನು ಪಾವತಿಸಲು 50 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯದಿಂದ ಉತ್ತರಖಂಡಕ್ಕೆ ತೆರಳಿದ ವೇಳೆ ಪ್ರಕೃತಿ ವೈಪರೀತ್ಯದಿಂದ ಮೃತ ಪಟ್ಟವರ ದೇಹಗಳನ್ನು ಮತ್ತು ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿತ್ತು. ನೆರವಿಗಾಗಿ ರಾಜ್ಯದಿಂದ ನಿಯೋಜಿಸಲಾದ ಅಧಿಕಾರಿಗಳ ವೆಚ್ಚಕ್ಕಾಗಿ 56.64 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 10 ಕೋಟಿ ರೂ. ಸೇರಿದಂತೆ ಒಟ್ಟಾರೆಯಾಗಿ 10.56 ಕೋಟಿ ರೂ. ಎಸ್‌ಡಿಆರ್‌ಎಫ್‌ನಲ್ಲಿ ರಾಜ್ಯದ ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ನೆರೆಸಂತ್ರಸ್ಥರ ಪುನರ್ವಸತಿ ಯೋಜನೆಯಡಿ 2019-2023ರವರೆಗಿನ ಮನೆಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಪರಿಹಾರ ಮೊತ್ತವನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಬಿಡುಗಡೆ ಮಾಡಲು 42 ಕೋಟಿ ರೂ. ಎಸ್‌ಡಿಆರ್‌ಎಫ್ ಅಡಿಯಲ್ಲಿ ನೀಡಲಾಗಿದೆ.
ಶಾಸಕರ ಕಾರ್ ಖರೀದಿಗೆ 3.20 ಕೋಟಿ ರೂ. ವೆಚ್ಚ
ವಿಧಾನಸಭಾ ಸದಸ್ಯರ ಕಾರ್‌ಗಳ ಖರೀದಿಗಾಗಿ 3.20 ಕೋಟಿ ರೂ. ವೆಚ್ಚ ಮಾಡಲಾಗಿದೆ. ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಉಪಯೋಗಕ್ಕೆ ಹೊಸ ವಾಹನ ಖರೀದಿಗೆ 30 ಲಕ್ಷ ರು. ವೆಚ್ಚ ಮಾಡಲಾಗಿದೆ. ಪ್ರತಿಪಕ್ಷದ ಮುಖ್ಯ ಸಚೇತಕರ ಉಪಯೋಗಕ್ಕಾಗಿ ಹೊಸ ವಾಹನವನ್ನು ಖರೀದಿಸಲು 31 ಲಕ್ಷ ರೂ. ಒದಗಿಸಲಾಗಿದೆ. ಅಲ್ಲದೇ, ವಿಧಾನಪರಿಷತ್ ಸಚಿವಾಲಯದ ಅಧಿಕಾರಿ/ಸಿಬ್ಬಂದಿಗೆ ಪ್ರಯಾಣ ವೆಚ್ಚವನ್ನು ಪಾವತಿಸಲು 1.31 ಕೋಟಿ ರೂ. ನೀಡಲಾಗಿದೆ. ಇನ್ನು, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ಮರುಪಾವತಿಸಲು 21 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಪೂರಕ ಅಂದಾಜಿನಲ್ಲಿ ತಿಳಿಸಲಾಗಿದೆ.
ಬೆಂಗಳೂರಲ್ಲಿ ನಡೆಯುವ 11ನೇ ಕಾಮನ್ ವೆಲ್ತ್ ಸಂಸದೀಯ ಸಂಘದ ಭಾರತ ವಿಭಾಗದ ಸಮ್ಮೇಳನದ ವೆಚ್ಚಗಳಿಗಾಗಿ 10 ಕೋಟಿ ರು. ನೀಡಲಾಗಿದೆ. ಕಳೆದ ಬೆಳಗಾವಿ ಅಧಿವೇಶನ ನಡೆಸಿರುವುದಕ್ಕೆ 1.72 ಕೋಟಿ ರೂ. ವೆಚ್ಚ ಮಾಡಲಾಗಿದೆ. 5ನೇ ರಾಜ್ಯ ಹಣಕಾಸು ಆಯೋಗದ ಕಚೇರಿ ನಿರ್ವಹಣೆಗಾಗಿ 2.30 ಕೋಟಿ ರೂ. ಅನುದಾನ ಒದಗಿಸಲಾಗಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧೀನದಲ್ಲಿರುವ ಮಾಧ್ಯಮ ಕೋಶದ ಹೊರಗುತ್ತಿಗೆ ಸಿಬ್ಬಂದಿ ವೇತನ ಪಾವತಿಗಾಗಿ 32.90 ಲಕ್ಷ ರೂ. ನೀಡಲಾಗಿದೆ. ಕುಮಾರಕೃಪಾ ಅತಿಥಿ ಗೃಹದ ದುರಸ್ತಿ ಕಾಮಗಾರಿಗಳ ವೆಚ್ಚಕ್ಕಾಗಿ 9.95 ಲಕ್ಷ ರೂ. ಒದಗಿಸಲಾಗಿದೆ ಎಂದು ಹೇಳಲಾಗಿದೆ.