ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಧನ ನೀಡದ 29 ಎ.ಸಿ.ಗಳ ವಿರುದ್ಧ  ನ್ಯಾ.ಬಿ.ವೀರಪ್ಪ ಸ್ವಯಂಪ್ರೇರಿತ ದೂರು ದಾಖಲು
x

ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಧನ ನೀಡದ 29 ಎ.ಸಿ.ಗಳ ವಿರುದ್ಧ ನ್ಯಾ.ಬಿ.ವೀರಪ್ಪ ಸ್ವಯಂಪ್ರೇರಿತ ದೂರು ದಾಖಲು

ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಲಕಾಲಕ್ಕೆ ಗೌರವಧನ ಪಾವತಿ ಮಾಡದ 16 ಜಿಲ್ಲೆಗಳ 29 ಉಪವಿಭಾಗಾಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


ರಾಜ್ಯದಲ್ಲಿರುವ 150 ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಹಲವರಿಗೆ ಗೌರವಧನ ಸಮಪರ್ಕವಾಗಿ ಪಾವತಿಸದ ಹಿನ್ನೆಲೆಯಲ್ಲಿ 29 ಉಪವಿಭಾಗಾಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಲಕಾಲಕ್ಕೆ ಗೌರವಧನ ಪಾವತಿ ಮಾಡದ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ತಮ್ಮ ವ್ಯಾಪ್ತಿಗೆ ಬರುವ 16 ಜಿಲ್ಲೆಗಳ 29 ಉಪವಿಭಾಗಾಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಎಲ್ಲರಿಗೂ ನೊಟೀಸ್‌ ಜಾರಿ ಮಾಡಲಿದ್ದು, ವಿವರಣೆ ಪಡೆದುಕೊಳ್ಳಲಿದ್ದಾರೆ. ಈ ಸಂಬಂಧ ನ.26ರಂದು ವಿಚಾರಣೆಯನ್ನು ನಿಗದಿ ಪಡಿಸಲಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಹಿರಿಯರು ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. 200 ವರ್ಷಗಳ ಸುದೀರ್ಘ ಗುಲಾಮಗಿರಿ ಮತ್ತು ಅಪಾರ ಸಂಕಟ ಸನ್ನಿವೇಶಗಳು 15ನೇ ಆ.1947 ರಂದು ಕೊನೆಗೊಂಡಿತು. ದೇಶವು ಸ್ವಾತಂತ್ರ್ಯಗೊಂಡು 79 ವರ್ಷಗಳು ಆಗಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ಈಗ ಆಸುಪಾಸು 100 ವರ್ಷ ವಯಸ್ಸಾಗಿದೆ. ಅವರು ಇಂದಿಗೂ ನಮ್ಮೊಂದಿಗೆ ಇರುವುದು ನಮ್ಮ ಭಾಗ್ಯ ಹಾಗೂ ದೇಶದ ಆಸ್ತಿಯಾಗಿರುತ್ತಾರೆ. ಆದರೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಅವಲಂಬಿತರಿಗೆ ಕೆಲವು ಸೌಲಭ್ಯಗಳನ್ನು ಕಲ್ಪಿಸಲು ಕಾನೂನು ಮಾಡಿದ್ದರೂ ಸಹ, ಅವರಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿದ್ದಾರೆ 150 ಸ್ವಾತಂತ್ರ್ಯ ಹೋರಾಟಗಾರರು

ರಾಜ್ಯದಲ್ಲಿ 150 ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಸರ್ಕಾರದ ಮಾಸಿಕ 10 ಸಾವಿರ ರೂ. ಗೌರವಧನ ನಿಗದಿಪಡಿಸಿದೆ. ಹೋರಾಟಗಾರ ಮೃತಪಟ್ಟರೆ, ಪತ್ನಿಗೆ 'ಮಾಸಾಶನ' ಸಿಗಲಿದೆ. ಅಂತ್ಯಕ್ರಿಯೆಗೆ ಸರ್ಕಾರ 4ಸಾವಿರ ರೂ. ನೀಡುತ್ತದೆ. ಆದರೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ನೀಡಲು ವರ್ಷಾನುಗಟ್ಟಲೆ ಸತಾಯಿಸಿ, ಅನವಶ್ಯಕ ತೊಂದರೆಯನ್ನುಂಟುಮಾಡಲಾಗುತ್ತದೆ. ಅವರೆಲ್ಲಾ ನ್ಯಾಯಾಲಯ ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡುತ್ತಿರುವುದು ತಿಳಿದುಬಂದಿದೆ. ಸರ್ಕಾರಿ ನೌಕರರು ಕರ್ತವ್ಯಲೋಪ ಎಸಗುತ್ತಿರುವುದು ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ಪ್ರಕರಣಗಳಿಂದ ಕಂಡುಬಂದಿರುತ್ತದೆ ಎಂದು ಹೇಳಿದ್ದಾರೆ.

ಹೋರಾಟಗಾರರಲ್ಲಿ ಮೂವರು ಮಹಿಳೆಯರಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಗುಳಿಗುಡ್ಡಿ ಓಣಿಯ ಕಾಶವ್ವ ತಿಪ್ಪಣ್ಣ ಕಡೆಣ್ಣವ‌ರ್, ಶಿವಮೊಗ್ಗ ಜಿಲ್ಲೆಯ ತಿಲಕ್ ನಗರದ ಟಿ.ಎಸ್‌.ವಿಶಾಲಾಕ್ಷಿ, ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕಿನ ಲೀಲಾಬಾಯಿ ಫಕೀರಪ್ಪ ಇಂಗಳಗಿ ಅವರಾಗಿದ್ದಾರೆ ಎಂದಿದ್ದಾರೆ.

ಬಾಕಿ ಇರುವ ಟಾಪ್‌ 10 ಜಿಲ್ಲೆಗಳು:

ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಧನ ರಾಜ್ಯದ ಹಲವು ಜಿಲ್ಲೆಯಲ್ಲಿ ಪಾವತಿಸುತ್ತಿಲ್ಲ ಲೋಕಾಯುಕ್ತ ಸಂಸ್ಥೆಯು ಟಾಪ್‌ 10 ಜಿಲ್ಲೆಗಳನ್ನು ಗುರುತಿಸಿದೆ. ಈ ಪೈಕಿ ಧಾರವಾಡ ಜಿಲ್ಲೆಯಲ್ಲಿ 76.33 ಲಕ್ಷ ರೂ. ಪಾವತಿಸದೆ ಬಾಕಿ ಉಳಿದಿದೆ. ಬೆಳಗಾವಿ ಜಿಲ್ಲೆಯಲ್ಲಿ 83.34 ಲಕ್ಷ ರೂ. ಪಾವತಿಸಬೇಕಾಗಿದೆ. ಬೆಂಗಳೂರು ನಗರ 59.02 ಲಕ್ಷ ರೂ., ಶಿವಮೊಗ್ಗ 39.30 ಲಕ್ಷ ರೂ., ತುಮಕೂರು 36.40 ಲಕ್ಷ ರೂ, ಹಾವೇರಿ 29.99 ಲಕ್ಷ ರೂ., ಮಂಡ್ಯ 19.70 ಲಕ್ಷ ರೂ, ಚಿತ್ರದುರ್ಗ 18.14 ಲಕ್ಷ ರೂ., ಬೀದರ್ 17.17 ಲಕ್ಷ ರೂ., ಉತ್ತರಕನ್ನಡ 17.12 ಲಕ್ಷ ರೂ. ಬಾಕಿದೆ ಎಂದು ತಿಳಿಸಿದೆ.

ಸ್ವಾತಂತ್ರ್ಯ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ 1980 ಕಾಯ್ದೆ ಅನ್ವಯ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ 'ಮಾಸಿಕ ಗೌರವಧನ' ಮತ್ತು ಅವರ ಕುಟುಂಬಸ್ಥರಿಗೆ ನೀಡುವ 'ಮಾಸಾಶನ' ಸಮರ್ಪಕವಾಗಿ ಪಾವತಿಯಾಗದೇ ಇರುವುದು ತಿಳಿದುಬಂದಿರುತ್ತದೆ. ಚಾಮರಾಜನಗರ, ಹಾಸನ, ಉಡುಪಿ ಹಾಗೂ ಯಾದಗಿರಿ ಜಿಲ್ಲೆ ಹೊರತುಪಡಿಸಿ, 27 ಜಿಲ್ಲೆಗಳ ಹೋರಾಟಗಾರರ ಕುಟುಂಬಸ್ಥರಿಗೆ ಹಲವು ತಿಂಗಳ ಗೌರವಧನ ರಾಜ್ಯ ಸರ್ಕಾರದಿಂದ ಪಾವತಿಯಾಗದೇ ಇರುವುದು ತಿಳಿದುಬಂದಿದೆ.




Read More
Next Story