ಸಿಎಂ ಸಿದ್ದರಾಮಯ್ಯಗೆ ನಿಂದಿಸಿದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸುಮೋಟೋ‌ ಪ್ರಕರಣ ದಾಖಲು
x

ಸಿಎಂ ಸಿದ್ದರಾಮಯ್ಯಗೆ ನಿಂದಿಸಿದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸುಮೋಟೋ‌ ಪ್ರಕರಣ ದಾಖಲು

ಸಿದ್ರಾಮುಲ್ಲಾ ಖಾನ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ರಮುಲ್ಲಾ ಖಾನ್ ಸರ್ಕಾರ ಇದೆ ಎಂದು ಅನಂತ್ ಕುಮಾರ್ ಹೆಗಡೆ ಅವಹೇಳನಕಾರಿಯಾಗಿ ಮುಂಡಗೊಡದಲ್ಲಿ ಭಾಷಣ ಮಾಡಿದ್ದರು ಹಾಗಾಗಿ ಅವರ ವಿರುದ್ಧ ಸುಮೋಟೋ‌ ಪ್ರಕರಣ ದಾಖಲಾಗಿದೆ.


ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮುಂಡಗೋಡ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಳಾದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಸಿದ್ರಾಮುಲ್ಲಾ ಖಾನ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ರಮುಲ್ಲಾ ಖಾನ್ ಸರ್ಕಾರ ಇದೆ ಎಂದು ಮುಂಡಗೊಡದಲ್ಲಿ ಭಾಷಣ ಮಾಡಿದ್ದರು ಹಾಗಾಗಿ ಅವರ ವಿರುದ್ಧ ಸುಮೋಟೋ‌ ಪ್ರಕರಣ ದಾಖಲಾಗಿದೆ.

ಅಲ್ಲದೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳೆಂದು ಹೇಳಿದ್ದರು.

'ಧಾರ್ಮಿಕ, ಸಾಮಾಜಿಕವಾಗಿ ಅಪಮಾನಕರ ಮಾತುಗಳನ್ನಾಡಿರುವ ಹಿನ್ನೆಲೆಯಲ್ಲಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಕುಮಟಾದಲ್ಲಿ ನಡೆದಿದ್ದ ಸಭೆಯಲ್ಲಿಯೂ ಅನಂತಕುಮಾರ ಪ್ರಚೋದನಕಾರಿ ಮಾತನಾಡಿದ್ದಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಅಯೋಧ್ಯೆ ರಾಮಮಂದಿರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅನಂತಕುಮಾರ್ ಹೆಗಡೆ, ‘ನೀನು ಬರ್ಲಿ, ಇಲ್ಲ ಬಿಡಲಿ, ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ’ ಎಂದು ನಿಂದಿಸಿದ್ದರು. ನಾನು ಅಯೋಧ್ಯೆಗೆ ಹೋಗುತ್ತೇನೆ, ಆದರೆ ಜ. 22 ಕ್ಕೆ ಹೋಗಲ್ಲ, ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ದಮ್ ಎಂದು ಹೆಗಡೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ‌ ಎಫ್ಐಆರ್ ದಾಖಲಾಗಿತ್ತು.

ಇನ್ನು ಈ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಅನಂತ್ ಕುಮಾರ್ ಹೆಗಡೆಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಮುಖ್ಯಮಂತ್ರಿ ವಿರುದ್ಧ ಈ ರೀತಿಯ ಪದ ಬಳಕೆ ಮಾಡಬಹುದೇ? ಅಭಿಪ್ರಾಯ ಭೇದವಿರಬಹುದು, ನೀವು ಮತ ನೀಡದೇ ಇರಬಹುದು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಗೌರವಿಸದಿದ್ದರೆ ಹೇಗೆ? ಚುನಾವಣೆಯಲ್ಲಿ ಒಂದು ಪಕ್ಷ ಬರುತ್ತದೆ, ಹೋಗುತ್ತದೆ. ಪ್ರಜಾಪ್ರಭುತ್ವ ಕೆಲಸ ಮಾಡುವುದೇ ಹೀಗೆ. ಚುನಾವಣೆಯಲ್ಲಿ ಸೋಲಿಸಬಹುದು ಅದು ಬೇರೆ ವಿಚಾರ. ಭಾಷೆಯ ಬಳಕೆ ಗೌರವಯುತವಾಗಿರಬೇಕು. ಭಾಷೆ ಪ್ರಯೋಗ ಹಿಡಿತದಲ್ಲಿಡಲು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಸೂಚನೆ ನೀಡಿತ್ತು.

ಇದೀಗ ಮತ್ತೆ ಸಿದ್ದರಾಮಯ್ಯ ಅವರ ವಿರುದ್ಧ ಅನಂತ್ ಕುಮಾರ್ ಹೆಗಡೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

Read More
Next Story