
ಸೂಲಿಬೆಲೆ ಚಕ್ರವರ್ತಿ ವಿರುದ್ಧ ಯುವ ಕಾಂಗ್ರೆಸ್ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದರು
ಜನರಲ್ಲಿ ಯುದ್ಧ ಭೀತಿ ಹುಟ್ಟಿಸುತ್ತಿರುವ ಸೂಲಿಬೆಲೆ ಚಕ್ರವರ್ತಿ; ಯುವ ಕಾಂಗ್ರೆಸ್ ದೂರು
ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಭಾಷಣ ಮಾಡುತ್ತಿರುವ ಸೂಲಿಬೆಲೆ ಚಕ್ರವರ್ತಿ ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಬೆಂಗಳೂರಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಿರಂತರ ದಾಳಿ ಮೂಲಕ ಭಯೋತ್ಪಾದಕರ ಅಡಗು ತಾಣಗಳನ್ನು ಧ್ವಂಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಹಿಂದೂ ಪರ ಮುಖಂಡ ಸೂಲಿಬೆಲೆ ಚಕ್ರವರ್ತಿ, ಭಾರತದ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಭಾಷಣ ಮಾಡುವ ಜೊತೆಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕೂಡಲೇ ಸೂಲಿಬೆಲೆ ಚಕ್ರವರ್ತಿ ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿ ಬಾರಿಯೂ ಹಿಂದೂ-ಮುಸ್ಲಿಂ, ಭಾರತ-ಪಾಕಿಸ್ತಾನ ಹೆಸರಿನಲ್ಲಿ ಸುಳ್ಳು ಪ್ರಚಾರದಲ್ಲಿ ತೊಡಗಿಸಿಕೊಂಡು, ಸಾಮರಸ್ಯ ಹಾಗೂ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದ್ದಾರೆ. ಸುಳ್ಳು ಪ್ರಚಾರ ಮಾಡುವುದೇ ಇವರ ಒಂದಂಶದ ಕಾರ್ಯಕ್ರಮವಾಗಿದೆ. ಸುಳ್ಳನ್ನು ಸತ್ಯದ ರೀತಿ ಬಿಂಬಿಸಿ ಸೈನಿಕರ ಆತ್ಮಬಲ ಕುಗ್ಗಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪಾಕಿಸ್ತಾನವು ಬೆಂಗಳೂರು ನಗರದ ಮೇಲೂ ದಾಳಿ ನಡೆಸುವ ಸಂಭವ ಇದೆ ಎಂಬ ಹೇಳಿಕೆ ನೀಡುತ್ತಾ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬ ಸುಳ್ಳು ಆರೋಪ ಹರಡುತ್ತಿದ್ದಾರೆ. ಜನರಿಗೆ ಆಧಾರರಹಿತ ತಪ್ಪು ಸಂದೇಶಗಳನ್ನು ನೀಡುತ್ತಿರುವ ಸೂಲಿಬೆಲೆ ಚಕ್ರವರ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.