Suhas Shetty Murder; Three More Accused Arrested Again
x

Suhas Shetty Murder Case: ಸುಹಾಸ್‌ ಶೆಟ್ಟಿ ಹತ್ಯೆ; ಮತ್ತೆ ಮೂವರು ಆರೋಪಿಗಳು ಅರೆಸ್ಟ್‌

ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕೆಂದು ರಾಜ್ಯ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ.


ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳವಾರಿನ ಅಜರುದ್ದೀನ್ ಆಲಿಯಾಸ್ ಅಜರ್ ಆಲಿಯಾಸ್ ಅಜ್ಜು (29), ಬಜ್ಪೆ ನಿವಾಸಿ ಅಬ್ದುಲ್ ಖಾದರ್ ಆಲಿಯಾಸ್ ನೌಫಲ್ (24) ಮತ್ತು ವಾಮಂಜೂರಿನ ನೌಷದ್ ಆಲಿಯಾಸ್ ಚೊಟ್ಟೆ ನೌಷದ್ (39) ಬಂಧಿತರು.

ಈ ಹಿಂದೆ ಈ ಪ್ರಕರಣದಲ್ಲಿ ಎಂಟು ಜನರನ್ನು ಬಂಧಿಸಲಾಗಿತ್ತು. ಇದೀಗ ಬಂಧಿಸಲಾದ ಅಜರುದ್ದೀನ್, ಸುಹಾಸ್ ಶೆಟ್ಟಿ ಅವರ ಚಲನವಲನಗಳ ಬಗ್ಗೆ ಮಾಹಿತಿ ನೀಡಿ ಹತ್ಯೆಗೆ ಸಹಕರಿಸಿದ್ದ ಎಂದು ತಿಳಿದುಬಂದಿದೆ. ಅಬ್ದುಲ್ ಖಾದರ್ ಹತ್ಯೆಯ ನಂತರ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಸಹಾಯ ಮಾಡಿದ್ದ. ನೌಷದ್ ಇತರ ಆರೋಪಿಗಳೊಂದಿಗೆ ಸೇರಿ ಸುಹಾಸ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದ. ಈ ಹಿಂದೆ ಅಜರುದ್ದೀನ್ ವಿರುದ್ಧ ಮೂರು ಹಾಗೂ ನೌಷದ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಆರು ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕೆಂದು ರಾಜ್ಯ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ.

ಏನಿದು ಕೊಲೆ?

ಮೇ 1 ರಂದು ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಈ ಕೃತ್ಯವನ್ನು ಮೂರು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಜನವರಿಯಲ್ಲಿ ಸಫ್ವಾನ್ ತಂಡಕ್ಕೆ ಫಾಜಿಲ್ ಮತ್ತು ಆದಿಲ್ 3 ಲಕ್ಷ ರೂಪಾಯಿ ನೀಡಿದ್ದರು. ಕೃತ್ಯಕ್ಕೆ ಪಿಕ್ ಅಪ್ ವಾಹನ ಮತ್ತು ಸ್ವಿಫ್ಟ್ ಕಾರನ್ನು ಬಳಸಲಾಗಿತ್ತು. ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಮತ್ತೊಂದು ಯೋಜನೆಯನ್ನು ಸಹ ಸಿದ್ಧಪಡಿಸಲಾಗಿತ್ತು.

Read More
Next Story