
ಸುಹಾಸ್‌ಶೆಟ್ಟಿ ಕೊಲೆ ಪ್ರಕರಣ | ದಕ್ಷಿಣ ಕನ್ನಡ ಜಿಲ್ಲೆಯ 14 ಕಡೆ ಎನ್‌ಐಎ ದಾಳಿ
ಬಜಪೆಯಲ್ಲಿ 10 ಕಡೆ ಮತ್ತು ಸುರತ್ಕಲ್ನಲ್ಲಿ 4 ಕಡೆಗಳಲ್ಲಿ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದು, ಎನ್‌ಐಎ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ೧೪ ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಬಜಪೆಯಲ್ಲಿ 10 ಕಡೆ ಮತ್ತು ಸುರತ್ಕಲ್ನಲ್ಲಿ 4 ಕಡೆಗಳಲ್ಲಿ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದು, ಎನ್‌ಐಎ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಕರಾವಳಿ ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಹತ್ಯೆ ಮಾಡಿದ ಮತ್ತು ಹತ್ಯೆಗೆ ಸಹಕರಿಸಿದವರು ಸೇರಿ 12 ಜನರನ್ನು ಬಜಪೆ ಪೊಲೀಸರು ಬಂಧಿಸಿದ್ದರು. ಬಳಿಕ ಕೇಂದ್ರ ಗೃಹ ಸಚಿವಾಲಯವು ಪ್ರಕರಣವನ್ನ ಎನ್‌ಐಎ ತನಿಖೆಗೆ ವಹಿಸಿತ್ತು.
ಸುಹಾಸ್ ಶೆಟ್ಟಿ ಪೋಷಕರು, ಹಿಂದೂ ಮತ್ತು ಬಿಜೆಪಿ ಮುಖಂಡರು ಕೂಡ ಎನ್‌ಐಎ ತನಿಖೆಗೆ ಒತ್ತಾಯಿಸಿ, ರಾಜ್ಯಪಾಲರ ಮೂಲಕ ಪ್ರಕರಣವನ್ನು ಎನ್ಐಎಗೆ ನೀಡುವಂತೆ ಮನವಿ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೂ ತರಲಾಗಿತ್ತು. ಹಾಗಾಗಿ ಕೇಂದ್ರ ಗೃಹ ಸಚಿವಾಲಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಿತ್ತು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಕೈವಾಡವಿದೆ. ಹತ್ಯೆಗೆ ವಿದೇಶದಿಂದಲೂ ಹಣದ ಹರಿದು ಬಂದಿದೆ ಎಂದು ಆರೋಪಿಸಲಾಗಿತ್ತು. ಈ ಎಲ್ಲಾ ಆಯಾಮಗಳಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಜೂನ್ 1ರಂದು ರಾತ್ರಿ 8.30ಕ್ಕೆ ಮಂಗಳೂರು ಹೊರವಲಯದ ಬಜಪೆಯ ಕಿನ್ನಿಪದವು ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೆಲ ದುಷ್ಕರ್ಮಿಗಳ ಗುಂಪು ಬರ್ಬರವಾಗಿ ಹತ್ಯೆ ಮಾಡಿತ್ತು. ಇದರಿಂದ ಇಡೀ ಕರಾವಳಿ ಜಿಲ್ಲೆಯಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು.